ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ ಸಮ್ಮಿಲನವಾಗಿ, ವಿಶ್ವದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಖ್ಯಾತ ಮಕ್ಕಳ ಹೃದ್ರೋಗತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಆಶಿಸಿದರು.

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ಬುಧವಾರ ಏರ್ಪಡಿಸಿದ್ದ ಏಷಣ-2026, ಸಂಶೋಧನಾ ವಿಧಾನ, ಜೈವಿಕ ಅಂಕಿ ಅಂಶಗಳ ಕುರಿತು ರಾಷ್ಟ್ರೀಯ ಕಾರ್ಯಾಗಾರದ ಗೌರವ ಅತಿಥಿಯಾಗಿ ಮಾತನಾಡಿದ ಅವರು, ನಳಂದ, ತಕ್ಷಶಿಲ ವಿವಿಗಳನ್ನು ನಾಶ ಮಾಡಿದರೂ ಆಯುರ್ವೇದ ಇವತ್ತಿಗೂ ಉಳಿದಿದೆ. ಪ್ರಧಾನಿ ಮೋದಿ ಅವರಿಂದಾಗಿ ಯೋಗ ಮತ್ತು ಆಯುರ್ವೇದಕ್ಕೆ ಸಾಕಷ್ಟು ಉತ್ತೇಜನ ಸಿಗುತ್ತಿದೆ ಎಂದ ಅವರು, ಯಾವುದೇ ವಿಷಯದಲ್ಲಿ ಸಕಾರಾತ್ಮಕತೆ ಇರಬೇಕೆ ಹೊರತು ನಕಾರಾತ್ಮಕತೆ ಇರಬಾರದು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ಮಾತನಾಡಿ, ಸಂಶೋಧನೆ ಎಂಬುದು ಆಯ್ಕೆಯಲ್ಲ ಅದು ಜವಾಬ್ದಾರಿ. ನಿಖರವಾದ ಅಂಕಿ, ಅಂಶಗಳೊಂದಿಗೆ ವಿಶ್ಲೇಷಣೆ ಮಾಡಬೇಕು. ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯ ಪದ್ಧತಿಯ ಸಮ್ಮಿಲನವಾಗಿ, ಜಾಗತಿಕ ಮಟ್ಟಕ್ಕೆ ತಲುಪಬೇಕು ಎಂದರು.

ಯೋಗ, ಪ್ರಾಣಾಯಾಮ ಜೀವನ ವಿಧಾನವಾಗಿದ್ದು, ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯು ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆಯೊಂದಿಗೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀವತ್ಸ ಮಾತನಾಡಿ, ವಿದ್ಯೆ, ವಿಜ್ಞಾನ, ಸ್ಮೃತಿ, ತತ್ವರತೆ, ಕ್ರಿಯಾ ಹಾಗೂ ತರ್ಕ- ಈ ಆರು ಅಂಶಗಳು ಆಯುರ್ವೇದಕ್ಕೆ ಮುಖ್ಯ ಎಂದರು.

ಕಾರ್ಯಾಗಾರದ ದಿಕ್ಸೂಚಿ ಭಾಷಣ ಮಾಡಿದ ಆದಿಚುಂಚನಗಿರಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಎ.ಶೇಖರ್ ಅವರು, ಯೋಗ, ಪ್ರಾಣಾಯಾಮ, ಮಧುಮೇಹ ಮೊದಲಾದ ವಿಷಯಗಳನ್ನು ತಿಳಿಸಿದರು. ಭಕ್ತಿ ನಮಸ್ಕಾರ, ಪ್ರೀತಿ ನಮಸ್ಕಾರ ಹಾಗೂ ಅಹಂಕಾರದ ನಮಸ್ಕಾರಗಳಿಗೆ ಇರುವ ವ್ಯತ್ಯಾಸವನ್ನು ವಿವರಿಸಿದರು.

ಆಯುಷ್‌ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಎಸ್.ಜಿ.ಮಂಗಳಗಿ ಮಾತನಾಡಿ, ಆಯುರ್ವೇದ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಸಂಶೋಧನೆ ಮುಖ್ಯ. ಅದನ್ನು ಸರಿಯಾದ ಮಾರ್ಗದಲ್ಲಿ ಮಾಡಬೇಕು ಎಂದರು.

ರಾಜೀವಗಾಂಧಿ ಆರೋಗ್ಯ ವಿವಿ ನಿರ್ದೇಶಕ ಡಾ.ರಾಮಚಂದ್ರಶೆಟ್ಟಿ ಮಾತನಾಡಿ, ಅಲೋಪತಿ ಮತ್ತು ಆಯುರ್ವೇದ ಸೇರಿದಂತೆ ಸಂಶೋಧನೆ ಮಾಡುವಪರಿಗೆ ವಿವಿ ಆರ್ಥಿಕ ನೆರವು ನೀಡಲಿದೆ. ಆದ್ದರಿಂದ ಇವತ್ತಿನಿಂದಲೇ ಸಂಶೋಧನಾ ಯಜ್ಞದ ಬಗ್ಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಸ್ವಾಗತಿಸಿದರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪಂಚಕರ್ಮ ವಿಭಾಗದ ಮುಖ್ಯಸ್ಥೆ ಡಾ.. ವರ್ಷ ಕುಲಕರ್ಣಿ ವಂದಿಸಿದರು. ಡಾ.ರಾಜಶ್ರೀ ಪ್ರಾರ್ಥಿಸಿದರು. ಆಡಳಿತಾಧಿಕಾರಿ ಶೋಭಾ, ಡಾ.ಪ್ರೇಮ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ. ವೆಂಕಟಕೃಷ್ಣ, ಡಾ.ಅನಂತ ದೇಸಾಯಿ, ಡಿಎಫ್‌ಆರ್‌ಎಲ್‌ ನಿವೃತ್ತ ವಿಜ್ಞಾನಿ ಡಾ.ರಾಮಕೃಷ್ಣ ಮೊದಲಾದವರು ಇದ್ದರು.