ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕೂಡ್ಲಿಗಿ ತಾಲೂಕಿನ ಕೋ.ಚೆ ಪಾತ್ರ ಅನನ್ಯ

| Published : Nov 01 2024, 12:09 AM IST

ಸಾರಾಂಶ

ಸಕ್ರಿಯವಾಗಿ ಚಳವಳಿಯಲ್ಲಿ ಧುಮುಕಿದ್ದ ಕೋ.ಚೆನ್ನಬಸಪ್ಪ ಅವರನ್ನು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸಬೇಕಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಕರ್ನಾಟಕ ಏಕೀಕರಣ ಹೋರಾಟಕ್ಕೆ ನಾಂದಿ ಹಾಡಿದ್ದೇ ಬಳ್ಳಾರಿ. ಈ ನೆಲದಲ್ಲಿಯೇ ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಭಾಷಾವಾರು ಪ್ರಾಂತ್ಯ ಮೂಲಕ ಬಳ್ಳಾರಿಯನ್ನು ಮೈಸೂರು ಪ್ರಾಂತ್ಯಕ್ಕೆ ಸೇರಿಸಲು ಸಾಧ್ಯವಾಯಿತು.

ಈ ಹೋರಾಟಕ್ಕೆ ಪಿಂಜಾರ ರಂಜಾನಸಾಬ್ ಪ್ರಾಣತೆತ್ತ ಏಕಮಾತ್ರರಾಗಿದ್ದರೂ ಇನ್ನು ಕೆಲವು ಹೋರಾಟಗಾರರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕರ್ನಾಟಕ ಏಕೀಕರಣವಾದಾಗ ಕೂಡ್ಲಿಗಿ ತಾಲೂಕಿನ ಕೋ. ಚೆನ್ನಬಸಪ್ಪ ಅವರ ಹಸುವಿನ ಕೊಟ್ಟಿಗೆಗೆ ಆಂಧ್ರದ ಕೆಲವು ಪುಂಡರು ಬೆಂಕಿ ಹಚ್ಚಿದ್ದರು. ಸಕ್ರಿಯವಾಗಿ ಚಳವಳಿಯಲ್ಲಿ ಧುಮುಕಿದ್ದ ಕೋ.ಚೆನ್ನಬಸಪ್ಪ ಅವರನ್ನು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸಬೇಕಿದೆ.

ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಆಲೂರಿನವರಾದ ಕೋಣನ ಮನೆತನದ ಚೆನ್ನಬಸಪ್ಪ 1945ರಲ್ಲಿ ಬೆಳಗಾವಿಯಲ್ಲಿ ಲಾ ಕಾಲೇಜಿನ ವಿದ್ಯಾರ್ಥಿ ದೆಸೆಯಿಂದಲೂ ಏಕೀಕರಣ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ 1946ರಲ್ಲಿ ವಕೀಲರಾಗಿ ವೃತ್ತಿ ಪ್ರಾರಂಭಿಸಿದರು. ಬಳ್ಳಾರಿಯಿಂದಲೇ ಪ್ರಾರಂಭವಾದ ಈ ಹೋರಾಟದಲ್ಲಿ ಕೋಚೆ ತೊಡಗಿಸಿಕೊಂಡಿದ್ದರು. ಏಕೀಕರಣ ಮಹಾಸಮಿತಿ ಸದಸ್ಯರಾಗಿ, ಬಳ್ಳಾರಿ ಜಿಲ್ಲಾ ಕರ್ನಾಟಕ ಸಂಘ, ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾ ಸಮಿತಿ, ಅಕರಾನಿ ಪರಿಷತ್ತು, ಪೂರ್ವ ಏಕೀಕರಣ ಸಂಘದ ಪದಾಧಿಕಾರಿಯಾಗಿ ನಾಮಕರಣಗೊಂಡ ಸದಸ್ಯರಾಗಿದ್ದರು. ರೈತ ಎಂಬ ಪತ್ರಿಕೆ ಸಂಪಾದಕರಾಗಿದ್ದ ಕೋಚೆ ಚಳವಳಿ ಬಗ್ಗೆ ಪ್ರತಿ ಹೋರಾಟದ ಹೆಜ್ಜೆಗಳನ್ನು ದಾಖಲಿಸುತ್ತಾ ಹೋಗಿದ್ದಲ್ಲದೇ ಜನತೆಗೆ ಕನ್ನಡದ ಸ್ವಾಭಿಮಾನದ ಕಿಚ್ಚು ಹಚ್ಚಿದ್ದರು. ಈ ಹೋರಾಟದಲ್ಲಿ ಕೋಚೆಯವರೇ ಅತೀ ಕಿರಿಯ ವಯಸ್ಸಿನ ವ್ಯಕ್ತಿಯಾಗಿದ್ದರು.

ಹಸುವಿನ ಕೊಠಡಿಗೆ ಬೆಂಕಿ:

ಏಕೀಕರಣ ಹೋರಾಟದ ಫಲವಾಗಿ 1953ರ ಅಕ್ಟೋಬರ್ 1ರಂದು ಬಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನಗೊಂಡಾಗ ಅ.2ರಂದು ಬಳ್ಳಾರಿಯಲ್ಲಿ ತಾಯಿ ಭುವನೇಶ್ವರಿ ಮೆರವಣಿಗೆ, ಬಿಡಿಎ ಮೈದಾನದಲ್ಲಿ ಸಿಎಂ ಕೆಂಗಲ್ ಹನುಮಂತಯ್ಯ ನೇತೃತ್ವದಲ್ಲಿ ವಿಜಯೋತ್ಸವ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮ ಮುಗಿಸಿಕೊಂಡು ಕೋಚೆ ಮನೆಗೆ ಬಂದಾಗ ಆಂಧ್ರದ ಕೆಲವು ಪುಂಡರು ಅವರ ಹಸುವಿನ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದರು. ಅವರ ಮನೆಯ ಇನ್ನೊಂದು ಭಾಗದಲ್ಲಿ ವಾಸಿಸುತ್ತಿದ್ದ ಆಂಧ್ರದ ಪರ ಓಡಾಡುತ್ತಿದ್ದ ಕೋಚೆ ಅವರ ಆಪ್ತಮಿತ್ರ ಸಿ.ಭೀಮಪ್ಪಶೆಟ್ಟಿ ಬೆಂಕಿ ಆರಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದರು. ಮನೆಗೆ ಬೆಂಕಿ ಬಿದ್ದಿರುವುದು ಕಂಡು ಕೋಚೆ ಅವರ ತಂದೆ, ತಂಗಿ ಹೊರಗೆ ಬಂದಿದ್ದರು. ಮನೆಕಡೆ ಆಂಧ್ರದ ಪುಂಡರು ಕಲ್ಲು ತೂರಿದಾಗ ತಂದೆ, ತಂಗಿಗೆ ಕಲ್ಲು ಬಿದ್ದು ಚಿಕ್ಕಪುಟ್ಟ ಗಾಯಗಳಾಗಿದ್ದವು.

ಕರ್ನಾಟಕ ಏಕೀಕರಣವಲ್ಲದೇ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಸೆರೆಮನೆವಾಸ ಅನುಭವಿಸಿದ ಕೋಚೆ, ವಕೀಲರಾಗಿ, ನ್ಯಾಯಾಧೀಶರಾಗಿ, ಪತ್ರಕರ್ತರಾಗಿ, ಸಾಹಿತಿಯಾಗಿ 1951ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಮದ್ರಾಸ್ ಅಸೆಂಬ್ಲಿಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.

1933ರಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೋಚೆ 2011ರಲ್ಲಿ ವಿಜಾಪುರದಲ್ಲಿ ನಡೆದ ಅಖಿಲ ಭಾರತ 79ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರು ನಮ್ಮನ್ನಗಲಿ 11 ವರ್ಷ ಕಳೆದಿವೆ. ಅವರ ನಾಡಪ್ರೇಮ, ದೇಶಪ್ರೇಮ ಮಾತ್ರ ಇಂದಿನ ಯುವಕರಿಗೆ ಮಾದರಿಯಾಗಿದೆ.