ಕುಂದಾಪುರ - ಬೈಂದೂರು ರಾ.ಹೆ. 66ರ ಅರಾಟೆಯ ಹಳೆ ಸೇತುವೆಯ ಬಳಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ₹85 ಕೋಟಿ ವೆಚ್ಚದ ಸೇತುವೆಗೆ ಸಂಸದ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.
ಕುಂದಾಪುರ: ಕಳೆದ ಅವಧಿಯಲ್ಲಿ ರೂಪಿಸಿದ ಮಹತ್ವಾಕಾಂಕ್ಷೆಯ ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ಅನುಷ್ಠಾನ ಕುರಿತು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಈ ಯೋಜನೆಯನ್ನು ಆರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.ಕುಂದಾಪುರ - ಬೈಂದೂರು ರಾ.ಹೆ. 66ರ ಅರಾಟೆಯ ಹಳೆ ಸೇತುವೆಯ ಬಳಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ₹85 ಕೋಟಿ ವೆಚ್ಚದ ಸೇತುವೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಅಂದಾಜು ₹100 ಕೋಟಿ ವೆಚ್ಚದ ಕೊಲ್ಲೂರು, ಸೋಮೇಶ್ವರ, ಮರವಂತೆ ಬೀಚ್ ಅಭಿವೃದ್ಧಿಗೆ ಬಜೆಟ್ ಬಳಿಕ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಅರಾಟೆಯ ಹಳೆಯ ಸೇತುವೆ ದುರಸ್ತಿಗೆ ₹85 ಕೋಟಿ ಮಾತ್ರವಲ್ಲದೆ, ಕುಂದಾಪುರ - ಬೈಂದೂರು ರಾ.ಹೆ 66ರಲ್ಲಿನ ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ ಬೈಪಾಸ್‌ಗಳಲ್ಲಿ ಸಾರ್ವಜನಿಕರ ಅಗತ್ಯ ಹಾಗೂ ಅನುಕೂಲತೆಗೆ ಪೂರಕವಾಗಿ ಮೇಲ್ಸೆತುವೆ, ಪಾದಚಾರಿ ಸೇತುವೆ, ಜಂಕ್ಷನ್ ಅಭಿವೃದ್ಧಿಯ ಡಿಪಿಆರ್‌ಗೆ ಒಪ್ಪಿಗೆ ಸಿಕ್ಕಿದ್ದು, ₹170 ಕೋಟಿ ಮಂಜೂರಾಗಿದೆ ಎಂದರು.
ಕೇಂದ್ರ ಸಚಿವ ಗಡ್ಕರಿ ಅವರ ಅಭಿಪ್ರಾಯದಂತೆ 2047ರ ವೇಳೆಗೆ ದೇಶದ ಎಲ್ಲ ಹೆದ್ದಾರಿಯನ್ನೂ ಅಭಿವೃದ್ಧಿ ಪಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಪಘಾತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಸಾಕಷ್ಟು ಅನುದಾನವನ್ನು ನೀಡಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಅರಾಟೆ ಸೇತುವೆ ಹಾಗೂ ಹೆದ್ದಾರಿ ಅಭಿವೃದ್ಧಿಗೆ ಅನುದಾನ, ಬೈಂದೂರು - ರಾಣೆಬೆನ್ನೂರು ಹೆದ್ದಾರಿ, ಬೈಂದೂರು - ಹೊಸನಗರ ಸಂಪರ್ಕಿಸುವಲ್ಲಿ ಸುಮಾರು ₹350 ಕೋಟಿ ವೆಚ್ಚದಲ್ಲಿ 2 ಸೇತುವೆ ಸಹಿತ ಹತ್ತಾರು ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷ ಈ ಸೇತುವೆ ಕಾಮಗಾರಿ ಆರಂಭವಾಗಲಿದೆ ಎಂದರು.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿದರು. ಕಾಮಗಾರಿಯ ಗುತ್ತಿಗೆ ಕಂಪೆನಿ ಐಆರ್‌ಬಿ ಮುಖ್ಯ ಎಂಜಿನಿಯರ್ ವಿಜಯ ಮದನ್ಕರ್, ಎಂಜಿನಿಯರ್ ಕೊಪ್ಪ ವೆಂಕಟರಮಣ ಹೆಗಡೆ, ಉದ್ಯಮಿ ವೆಂಕಟೇಶ್ ಕಿಣಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್, ರಮೇಶ್ ಪೂಜಾರಿ, ತ್ರಾಸಿ ಗ್ರಾ.ಪಂ ಅಧ್ಯಕ್ಷ ಮಿಥುನ್ ದೇವಾಡಿಗ, ಪ್ರಮುಖರಾದ ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಎನ್.ದೀಪಕ್ ಕುಮಾರ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ರೋಹಿತ್ ಕುಮಾರ್ ಶೆಟ್ಟಿ ಸಿದ್ದಾಪುರ, ಸುರೇಶ್ ಬಟವಾಡಿ ಹಾಗೂ ಗ್ರಾಮಸ್ಥರು ಇದ್ದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ ನಿರೂಪಿಸಿದರು.