ಕಾಡಾನೆ ದಾಳಿಯಿಂದಾಗಿ ಕೊಡಗಿನಲ್ಲಿ ಎರಡೂವರೆ ತಿಂಗಳಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ. ನಿರಂತರ ಆನೆ ಹಾವಳಿಯಿಂದ ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಭೀತರಾಗಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ: ಕಾಡಾನೆ ದಾಳಿಯಿಂದಾಗಿ ಕೊಡಗಿನಲ್ಲಿ ಎರಡೂವರೆ ತಿಂಗಳಲ್ಲಿ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ. ನಿರಂತರ ಆನೆ ಹಾವಳಿಯಿಂದ ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಾಗೂ ಬೆಳೆಗಾರರು ಭಯಭೀತರಾಗಿದ್ದಾರೆ. ಗುರುವಾರ ಸಿದ್ದಾಪುರದ ಕಾಫಿ ತೋಟವೊಂದರಲ್ಲಿ ಗಣಪತಿ(49) ಮೃತಪಟ್ಟಿದ್ದಾರೆ. ಕಾಡಾನೆ ದಾಳಿಯಿಂದ ಕೊಡಗು ಜಿಲ್ಲೆಯಲ್ಲಿ ಜ.1ರಂದು ಶನಿವಾರಸಂತೆ ಸಮೀಪದ ಗಣಗೂರಿನಲ್ಲಿ ಪೊನ್ನಪ್ಪ(61), ಜನವರಿ 29ರಂದು ವಿರಾಜಪೇಟೆ ತಾಲೂಕಿನ ಸಿದ್ದಾಪುರ ಕಾಫಿ ತೋಟದಲ್ಲಿ ಲತೀಫ್ (72), ಫೆ.28ರಂದು ಮಡಿಕೇರಿ ತಾಲೂಕಿನ ಮದೆನಾಡುವಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಪೂಜ್ಯ(17) ಮೃತಪಟ್ಟಿದ್ದಾರೆ. ಮಾ.9ರಂದು ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯೆ ಜಲಜಾಕ್ಷಿ (53) ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.ಗಂಭೀರವಾಗಿ ಪರಿಗಣಿಸಿಲ್ಲ: ಎರಡೂವರೆ ತಿಂಗಳಲ್ಲಿ ಐದು ಮಂದಿ ಮೃತಪಟ್ಟಿದ್ದರೂ ಕೂಡ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗೆ ಪರಿಸ್ಥಿತಿ ಮುಂದುವರೆದರೆ ಮತ್ತಷ್ಟು ಮಂದಿ ಕಾಡಾನೆ ದಾಳಿಗೆ ಒಳಗಾಗುವ ಸಾಧ್ಯತೆಯಿದ್ದು, ಸಂಬಂಧಿಸಿದ ಇಲಾಖೆ ಈ ಬಗ್ಗೆ ಜಾಗೃತವಾಗಬೇಕೆಂಬ ಒತ್ತಾಯ ಕೇಳಿಬಂದಿದೆ.
ತೋಟದಲ್ಲಿಯೇ ವಾಸ್ತವ್ಯ: ಕಾಡಿನಲ್ಲಿ ಆಹಾರ ಕೊರತೆ ಪರಿಣಾಮ ಪ್ರತಿ ದಿನ ಕೂಡ ನಾಡಿಗೆ ಕಾಡಾನೆಗಳು ಬರುತ್ತಿದೆ. ಕಾಫಿ ತೋಟಗಳಲ್ಲೇ ಆನೆಗಳು ವಾಸ್ತವ್ಯ ಹೂಡಿದ್ದು ಕಾರ್ಮಿಕರು, ಬೆಳೆಗಾರರು, ವಿದ್ಯಾರ್ಥಿ ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿದೆ.ಬ್ಯಾರಿಕೇಡ್ ಪೂರ್ಣಗೊಂಡಿಲ್ಲ: ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಇದೀಗ ರೈಲ್ವೇ ಬ್ಯಾರಿಕೇಡ್ ಗೆ ಹೆಚ್ಚಿನ ಅನುದಾನ ಮೀಸಲಿಡುತ್ತಿದೆ. ಆದರೆ ಈ ಕೆಲಸ ಎಲ್ಲ ಕಡೆ ಪೂರ್ಣಗೊಂಡಿಲ್ಲ. ಆದ್ದರಿಂದ ಸುಲಭವಾಗಿ ನಾಡಿಗೆ ಬರುತ್ತಿದೆ. ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತವಾದ ವೈಜ್ಞಾನಿಕ ಕ್ರಮ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.
ಪೊನ್ನಣ್ಣ ಸದನದಲ್ಲಿ ಪ್ರಸ್ತಾಪ: ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಗುರುವಾರ ವಿಧನಸಭಾ ಅಧಿವೇಶನದಲ್ಲಿ ಕಾಡಾನೆ ಹಾವಳಿಯ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿ, ಕೂಡಲೇ ಸರ್ಕಾರ ವೈಜ್ಞಾನಿಕ ಕ್ರಮಕ್ಕೆ ಮುಂದಾಗಲು ಸಂಪುಟ ಸಭೆ ನಡೆಸುವಂತೆ ಆಗ್ರಹಿಸಿದ್ದಾರೆ.ಬಿಜೆಪಿ ಪ್ರತಿಭಟನೆ: ಜಿಲ್ಲೆಯಲ್ಲಿ ನಿರಂತರವಾಗಿ ಆನೆ ಹಾವಳಿಯಿಂದ ಜನರು ಮೃತಪಟ್ಟಿದ್ದು, ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಜಿಲ್ಲಾ ಬಿಜೆಪಿಯಿಂದ ಮಡಿಕೇರಿಯ ಅರಣ್ಯ ಭವನದಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.*ಕಾಡಾನೆ ಹಾವಳಿಯಿಂದಾಗಿ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಈ ಬಗ್ಗೆ ಮೌನ ವಹಿಸಿದ್ದು, ಸರ್ಕಾರ ಕೂಡಾ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ಅರಣ್ಯ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
-ರವಿ ಕಾಳಪ್ಪ, ಅಧ್ಯಕ್ಷರು ಕೊಡಗು ಜಿಲ್ಲಾ ಬಿಜೆಪಿ*ಕೊಡಗಿನಲ್ಲಿ ಹತ್ತು ದಿನದಲ್ಲಿ ಮೂವರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಇದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಪುಟ ಸಭೆಯನ್ನು ನಡೆಸಿ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮ ತೆಗೆದುಕೊಳ್ಳಬೇಕು. ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಬಜೆಟ್ ನಲ್ಲಿ ರು.1500 ಕೋಟಿ ಅನುದಾನ ಘೋಷಿಸಿದ್ದು, ಹೆಚ್ಚಿನ ಪಾಲನ್ನು ಕೊಡಗಿಗೆ ನೀಡಬೇಕು.
-ಎ.ಎಸ್. ಪೊನ್ನಣ್ಣ, ಶಾಸಕರು ವಿರಾಜಪೇಟೆ ಕ್ಷೇತ್ರ