ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಿಂದಾಗಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಉಭಯ ಅಭ್ಯರ್ಥಿಗಳು ಪಕ್ಷದ ನಾಯಕರೊಡನೆ ಮೆರವಣಿಗೆಯಲ್ಲಿ ತೆರಳಿ, ಬುಧವಾರ ಶಕ್ತಿ ಪ್ರದರ್ಶಿಸುವ ಮೂಲಕ ಅಪಾರ ಬೆಂಬಲಿಗರೊಡಗೂಡಿ ನಾಮಪತ್ರ ಸಲ್ಲಿಸಿದರು.ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ ಸಿಂಹ ಮತ್ತು ಡಾ. ರವಿ ಪ್ರಕಾಶ್ ಜತೆಗೂಡಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ. ವೆಂಕಟೇಶ್, ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಜೊತೆಗೂಡಿ ನಾಮಪತ್ರ ಸಲ್ಲಿಸಿದರು.ಯದುವೀರ್ ಮೆರವಣಿಗೆ:
ಯದುವೀರ್ ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರೆ, ಲಕ್ಷ್ಮಣ್ ಮುಖಂಡರೊಂದಿಗೆ ತೆರಳಿ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.ಯದುವೀರ್ ಅವರು ಶುಭ ದಿನ ಎಂದು ಸೋಮವಾರವೇ ನಾಮಪತ್ರ ಸಲ್ಲಿಸಿದ್ದರು. ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಹಾಗೂ ಎರಡು ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಯಲ್ಲಿ ಸಾಗಿ ಶಕ್ತಿ ಪ್ರದರ್ಶನದ ಮೂಲಕ ಮತ್ತೊಮ್ಮೆ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದರು.
ನಾಮಪತ್ರದ ಜತೆಗೆ ಮತದಾರರ ಗುರುತಿನಪತ್ರ, ಆದಾಯ ಪ್ರಮಾಣ ಪತ್ರ, ಬಿ ಫಾರ್ಮ್‌ಗಳನ್ನು ಸಲ್ಲಿಸಿದರು. ಯದುವೀರ್ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಹಾಲಿ ಸಂಸದ ಪ್ರತಾಪ್ ಸಿಂಹ, ಡಾ. ರವಿ ಪ್ರಕಾಶ್ ಸಾಥ್ ನೀಡಿದರು.ನಾಮಪತ್ರ ಸಲ್ಲಿಕೆಗೂ ಮುನ್ನ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು.
ಮೆರವಣಿಗೆಗೆ ಚಾಲನೆ:ಮೊದಲಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪೂಜೆ ಸಲ್ಲಿಸುವ ಮೂಲಕ ಮೆವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಹ ಸಾಥ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ್, ಎಸ್.ಎ. ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಜಿ ಶಾಸಕರಾದ ಮಾರುತಿರಾವ್ ಪವಾರ್, ಅಶ್ವಿನ್ ಕುಮಾರ್, ಕೆ. ಮಹದೇವು, ಮಾಜಿ ಎಂಎಲ್‌ಸಿ ಗೋ. ಮಧುಸೂದನ್, ಮುಖಂಡರಾದ ಮಾಳವಿಕಾ ಅವಿನಾಶ್, ಅಪ್ಪಣ್ಣ, ರಘು ಕೌಟಿಲ್ಯ ಮೊದಲಾದವರು ಪಾಲ್ಗೊಂಡಿದ್ದರು.ಮೆರವಣಿಗೆಯಲ್ಲಿ ವೇಳೆ ಡೊಳ್ಳು ಕುಣಿತ, ತಮಟೆ, ಪಟ ಕುಣಿತ, ಚಂಡೆ, ನಗಾರಿ ಸೇರಿದಂತೆ ವಿವಿಧ ಜಾನಪದ ಪ್ರಕಾರಗಳು ಮೇಳೈಸಿದವು. ಮೈತ್ರಿ ಪಕ್ಷಗಳ ಸಾವಿರಾರು ಕಾರ್ಯಕರ್ತರು ಮೆರವಣಿಗೆ ಉದ್ದಕ್ಕೂ ಮೈಸೂರು ರಾಜವಂಶಸ್ಥರ ಪರ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿ.ವೈ. ವಿಜಯೇಂದ್ರ ಪರ ಜೈ ಕಾರ ಕೂಗಿದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ತೆರೆದ ವಾಹನದ ಮೂಲಕ ಮೆರವಣಿಗೆಯ ಜತೆ ಆಗಮಿಸಿದ ಅಭ್ಯರ್ಥಿ ಯದುವೀರ್, ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಸೇರಿದಂತೆ ಇತರ ನಾಯಕರು ನಾಮಪತ್ರ ಸಲ್ಲಿಕೆ ಸಮಯ ಮೀರುತ್ತಿದ್ದ ಕಾರಣ ಹಾರ್ಡಿಂಗ್ ವೃತ್ತದ ಬಳಿ ಕಾರಿನ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಳಿಕ ಕಾರ್ಯಕರ್ತರು ಹಾಗೂ ಉಳಿದ ನಾಯಕರು ಮೆರವಣಿಗೆ ಪೂರ್ತಿಗೊಳಿಸಿದರು.ಮಹನೀಯರಿಗೆ ನಮಿಸಿದ ಯದುವೀರ್:ನಾಮಪತ್ರ ಸಲ್ಲಿಕೆಗೂ ಮುನ್ನ ಯದುವೀರ್ ಅವರು ನಗರದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಗನ್ ಹೌಸ್ ವೃತ್ತದ ಕುವೆಂಪು, ಬಸವಣ್ಣ, ಕುರುಬಾರಹಳ್ಳಿ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ, ಪುರಭವನ ಮುಂದಿನ ಡಾ.ಬಿ.ಆರ್. ಅಂಬೇಡ್ಕರ್, ಗಾಂಧಿ ವೃತ್ತದಲ್ಲಿನ ಮಹಾತ್ಮ ಗಾಂಧಿ, ಸುಣ್ಣದ ಕೇರಿಯಲ್ಲಿನ ವಾಲ್ಮೀಕಿ, ರಾಜವಂಶಸ್ಥರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ಜಯಚಾಮರಾಜ ಒಡೆಯರ್, ರೈಲ್ವೆ ನಿಲ್ದಾಣದ ಬಳಿಯ ಬಾಬು ಜಗಜೀವನ್ ರಾಮ್, ಮೆಟ್ರೋಪೋಲ್ ವೃತ್ತದಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ರಾಜ್ ಕುಮಾರ್ ಉದ್ಯಾನವನದಲ್ಲಿನ ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇವರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದರು.ಲಕ್ಷ್ಮಣ್ ನಾಮಪತ್ರ ಸಲ್ಲಿಕೆ :
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ಲಕ್ಷ್ಮಣ್ ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ಮಾಡುವ ಮೂಲಕ 2 ಸೆಟ್ ನಾಮಪತ್ರ ಸಲ್ಲಿಸಿದರು. ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ. ವೆಂಕಟೇಶ್, ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಸಾಥ್ ನೀಡಿದರು.