ಕೊಡಗಿನ ಕಿತ್ತಳೆ ಪುನಶ್ಚೇತನ: ಜೇನು, ಅಣಬೆ ಕೃಷಿಗೆ ಉತ್ತೇಜನ

| Published : Jun 29 2024, 12:32 AM IST

ಕೊಡಗಿನ ಕಿತ್ತಳೆ ಪುನಶ್ಚೇತನ: ಜೇನು, ಅಣಬೆ ಕೃಷಿಗೆ ಉತ್ತೇಜನ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಕಿತ್ತಳೆ ಪುನಶ್ಚೇತನ ಸೇರಿದಂತೆ ಜೇನು ಹಾಗೂ ಅಣಬೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸುಮಾರು ರು.2.37 ಕೋಟಿ ವೆಚ್ಚದದಲ್ಲಿ ಮೂರು ವರ್ಷದ ಯೋಜನೆಗಳಿಗೆ ಅನುಮೋದನೆ ದೊರಕಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಕಿತ್ತಳೆ ಪುನಶ್ಚೇತನ ಸೇರಿದಂತೆ ಜೇನು ಹಾಗೂ ಅಣಬೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸುಮಾರು ರು.2.37 ಕೋಟಿ ವೆಚ್ಚದದಲ್ಲಿ ಮೂರು ವರ್ಷದ ಯೋಜನೆಗಳಿಗೆ ಅನುಮೋದನೆ ದೊರಕಿದ್ದು, ರೈತರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಈ ಯೋಜನೆಗೆ ಅನುದಾನ ಬಿಡುಗಡೆಯಾಗಲಿದೆ. ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದಲ್ಲಿನ ವಿಜ್ಞಾನಿಗಳ ಆಸಕ್ತಿಯ ಹಿನ್ನೆಲೆಯಲ್ಲಿ ಈ ಯೋಜನೆಗೆ ಇದೀಗ ಮಂಜೂರಾತಿ ದೊರಕಿದೆ. ಈಗಾಗಲೇ ಈ ಯೋಜನೆಗೆ ಪ್ರಕ್ರಿಯೆ ಆರಂಭವಾಗಿದ್ದು, ಕೊಡಗಿನ ಕಿತ್ತಳೆಯ ಪುನಶ್ಚೇತನದ ನಿರೀಕ್ಷೆ ಮೂಡಿದೆ.

ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಬೆಳೆಗಾರರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಕೊಡಗಿನ ಕಿತ್ತಳೆಗೆ ಸಂಬಂಧಿಸಿದಂತೆ ಮೊದಲ ವರ್ಷ 100 ಮಂದಿ ಕಿತ್ತಳೆ ಬೆಳೆಯುವ ಬೆಳೆಗಾರರನ್ನು ಗುರುತಿಸಿ ಅವರಿಗೆ ಸೂಕ್ತ ಮಾಹಿತಿ, ನಿರ್ವಹಣೆ, ಔಷಧಿ ಹಾಗೂ ತರಬೇತಿ ನೀಡುವ ಮೂಲಕ ಕಿತ್ತಳೆ ಫಲಸಿನ ಇಳುವರಿ ಹೆಚ್ಚಿಸುವುದರೊಂದಿಗೆ ಉತ್ತೇಜನ ನೀಡಲಾಗುತ್ತದೆ.

ಎರಡನೇ ವರ್ಷ 100 ಮಂದಿ ಹೊಸ ಬೆಳೆಗಾರರನ್ನು ಗುರುತಿಸಿ ಅವರಿಗೆ ಕಿತ್ತಳೆ ಗಿಡಗಳನ್ನು ನೀಡುವ ಮೂಲಕ ಕಿತ್ತಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತದೆ. ಇದರಿಂದ ಕೊಡಗಿನ ಕಿತ್ತಳೆಯ ಗತವೈಭವ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿದೆ.

ಮೂರನೇ ವರ್ಷ ತರಬೇತಿ ಬಳಿಕ ಬಂದ ಫಸಲು ಹಾಗೂ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದುಕೊಂಡು ಅದರ ವರದಿ ಸಂಗ್ರಹಿಸಲಾಗುತ್ತದೆ.

ಕೊಡಗಿನ ಕಿತ್ತಳೆ ಅವನತಿ:

ಕೊಡಗಿನ ಕಿತ್ತಳೆ ಹುಳಿ ಮಿಶ್ರಿತ ಸಿಹಿ ಹೊಂದಿದೆ. ಇದರಿಂದಲೇ ಇದಕ್ಕೆ ವಿಶೇಷ ಬೇಡಿಕೆಯಿದೆ. ಆದರೆ ಬೆಲೆ ಇಳಿಮುಖ ಸೇರಿದಂತೆ ಗಿಡಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಕಿತ್ತಳೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕೂರ್ಗ್ ಮ್ಯಾಂಡರಿನ್ ಅವನತಿಯ ಸಮಸ್ಯೆಯನ್ನು ಅಧ್ಯಯನ ಮಾಡಲು ಕೇಂದ್ರವನ್ನು ಚೆಟ್ಟಳ್ಳಿಯಲ್ಲಿ 1947 ರಲ್ಲಿ ಕಿತ್ತಳೆ ಸಂಶೋಧನಾ ಕೇಂದ್ರವಾಗಿ ಪ್ರಾರಂಭಿಸಿತು. ಇದೀಗ ಈ ದೊಡ್ಡ ಯೋಜನೆಯಿಂದ ಕೊಡಗಿನ ಕಿತ್ತಳೆ ಬೆಳೆಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ.

ಈಗಾಗಲೇ ಹಲವು ಕಿತ್ತಳೆ ಬೆಳೆಗಾರರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದೆ ಬಂದಿದ್ದು, ಆಸಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಈ ಸುವರ್ಣಾವಕಾಶವನ್ನು ಬೆಳೆಗಾರರು ಸದ್ಭಳಕೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಕೃಷಿಯಲ್ಲಿ ಕ್ರಾಂತಿ ಮಾಡಬಹುದಾಗಿದೆ. ಈ ಯೋಜನೆಯ ನೇತೃತ್ವವನ್ನು ವಿಜ್ಞಾನಿ ಮುರುಳೀಧರ್ ವಹಿಸಿಕೊಂಡಿದ್ದಾರೆ.

ಜೇನು ಕೃಷಿ ಬಗ್ಗೆ ಮಾಹಿತಿ:

ಜೇನು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಮೊದಲ ವರ್ಷ 50 ಮಂದಿಗೆ ತರಬೇತಿ ನೀಡುವುದರೊಂದಿಗೆ ಎರಡು ಜೇನು ಪೆಟ್ಟಿಗೆ ಹಾಗೂ ಜೇನು ನೊಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ಕೃಷಿಕರಿಗೆ ಕಾಲ ಕಾಲಕ್ಕೆ ತಕ್ಕಂತೆ ತರಬೇತಿ ನೀಡುವುದರೊಂದಿಗೆ ಜೇನು ಉತ್ಪಾದನೆ ಮಾಡುವುದು, ಸಂಪೂರ್ಣ ನಿರ್ವಹಣೆ ಮಾಡುವ ಬಗ್ಗೆ ತಿಳಿಸಲಾಗುತ್ತದೆ. ಈ ಯೋಜನೆಯೂ ಮೂರು ಜಿಲ್ಲೆಯವರಿಗೆ ಸಿಗಲಿದೆ.

ಅಣಬೆ ಕೃಷಿ:

ಇತ್ತೀಚಿನ ದಿನಗಳಲ್ಲಿ ಅಣಬೆ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಣಬೆ ಕೃಷಿಯತ್ತ ಆಸಕ್ತರನ್ನು ತೊಡಗಿಸಿಕೊಳ್ಳವಂತೆ ಮಾಡುವ ಸಲುವಾಗಿ ಅಣಬೆ ಕೃಷಿಯ ಬಗ್ಗೆಯೂ ಈ ಯೋಜನೆಯಲ್ಲಿ ತರಬೇತಿ ನೀಡುವುದರೊಂದಿಗೆ ಕೃಷಿಗೆ ಬೇಕಾದ ಎಲ್ಲಾ ಮಾಹಿತಿ ನೀಡಲಾಗುತ್ತಿದೆ. ಜೇನು ಹಾಗೂ ಅಣಬೆ ಕೃಷಿ ತರಬೇತಿ ಜವಾಬ್ದಾರಿಯನ್ನು ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿ ರಾಣಿ ವಹಿಸಿಕೊಂಡಿದ್ದಾರೆ.

ಕೊಡಗಿನ ಕಿತ್ತಳೆ, ಜೇನು ಹಾಗೂ ಅಣಬೆ ಕೃಷಿಯಲ್ಲಿ ಆಸಕ್ತಿ ಇರುವವರು ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ತಾವು ಕೂಡ ಪಾಲ್ಗೊಳ್ಳಬಹುದಾಗಿದೆ ಎಂದು ಕೇಂದ್ರದ ವಿಜ್ಞಾನಿ ಡಾ. ಬಿ.ಎಂ. ಮುರುಳೀಧರ್ ಹೇಳುತ್ತಾರೆ. .................

21 ದಿನಗಳ ನರ್ಸರಿ ತರಬೇತಿನರ್ಸರಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಆಸಕ್ತ ಯುವಕ, ಯುವತಿಯರಿಗೆ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸುಮಾರು 21 ದಿನಗಳ ಉಚಿತ ತರಬೇತಿ ನೀಡಲಾಗುತ್ತಿದೆ. ವಾಸ್ತವ್ಯ ವ್ಯವಸ್ಥೆ ಕೂಡ ಇಲ್ಲಿ ಇರಲಿದೆ. ಗಿಡಗಳಿಗೆ ಕಸಿ ಮಾಡುವ ವಿಧಾನ, ಜೈವಿಕ ಔಷಧಿ ತಯಾರು ಮಾಡುವುದು, ಕೀಟಗಳನ್ನು ಆಕರ್ಷಿಸುವ ಟ್ರಾಪರ್ ಗಳನ್ನು ಅಳವಡಿಸುವುದು ಸೇರಿದಂತೆ ಹಲವು ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. ಆಸಕ್ತರು ಚೆಟ್ಟಳ್ಳಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ...........ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ತರಬೇತಿ, ಔಷಧಿ, ನಿರ್ವಹಣೆ ಸೇರಿದಂತೆ ಎಲ್ಲ ಮಾಹಿತಿ ನೀಡುವುದರೊಂದಿಗೆ ಬೆಳೆಗಾರರ ಆದಾಯ ಹೆಚ್ಚಿಸಲು ಕೆಲಸ ಮಾಡಲಾಗುತ್ತದೆ.

-ಬಿ.ಎಂ. ಮುರುಳೀಧರ್, ಹಣ್ಣಿನ ವಿಜ್ಞಾನಿ ಚೆಟ್ಟಳ್ಳಿ..........ಜೇನು ಹಾಗೂ ಹಣಬೆ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಉಚಿತ ತರಬೇತಿ ನೀಡಲಾಗುತ್ತದೆ. ವರ್ಷಕ್ಕೆ ತಲಾ 50 ಮಂದಿಗೆ ಅವಕಾಶ ಇರಲಿದೆ. ಈ ಯೋಜನೆಯಲ್ಲಿ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಸಕ್ತ ರೈತರು ಭಾಗವಹಿಸಬಹುದಾಗಿದೆ.

-ಎ.ಟಿ. ರಾಣಿ, ವಿಜ್ಞಾನಿ ಕೀಟಶಾಸ್ತ್ರ ಚೆಟ್ಟಳ್ಳಿ.