ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ನೆರವಾಗುವ ಪ್ರಮುಖ ಧ್ಯೇಯದೊಂದಿಗೆ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನಿಂದ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರ ಮಕ್ಕಳು ಹಾಗೂ ಸಾರ್ವಜನಿಕ ಮನವಿಗಳನ್ನು ಪುರಸ್ಕರಿಸಿ ಒಟ್ಟು 32 ಮಕ್ಕಳಿಗೆ ವಿದ್ಯಾನಿಧಿ ವಿತರಿಸಲಾಯಿತು.ನಗರದ ರೆಡ್ ಬ್ರಿಕ್ಸ್‌ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ನಡೆಯಿತು.
ಪತ್ರಕರ್ತರ 22 ಮಕ್ಕಳು ಹಾಗೂ ನೆರವು ಬಯಸಿದ್ದ ಇತರೆ 10 ಮಕ್ಕಳಿಗೆ ತಲಾ 5 ಸಾವಿರ ರು.ಗಳಂತೆ ಒಟ್ಟು 1.60 ಲಕ್ಷ ರು. ವಿದ್ಯಾನಿಧಿ ವಿತರಿಸಲಾಯಿತು.ಹಿರಿಯ ಟ್ರಸ್ಟಿ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ನೆರವು ಮತ್ತು ಪ್ರೋತ್ಸಾಹ ನೀಡಬೇಕೆನ್ನುವ ಚಿಂತನೆಯಡಿ ವಿದ್ಯಾನಿಧಿಯ ಮೂಲಕ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಟ್ರಸ್ಟ್ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಮತ್ತಷ್ಟು ವ್ಯಾಪಕವಾಗಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಕಿಂಚಿತ್ ನೆರವು ನಿಡುವುದು ವಿದ್ಯಾನಿಧಿಯ ಪ್ರಮುಖ ಉದ್ದೇಶ. ವಿದ್ಯಾನಿಧಿ ವಿತರಣೆಯಲ್ಲಿ ಬಡವ ಬಲ್ಲಿದನೆನ್ನುವ ಯಾವುದೇ ತಾರತಮ್ಯ ಭಾವವಿಲ್ಲ ಎಂದರು.ಹಿರಿಯ ಟ್ರಸ್ಟಿಗಳು ಹಾಗೂ ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಪತ್ರಿಕಾ ಭವನ ಟ್ರಸ್ಟ್ ರಚನೆಯ ಸಂದರ್ಭದಲ್ಲೇ ಅದಕ್ಕೆ ಬರುವ ಆದಾಯದಿಂದ ಪತ್ರಕರ್ತರು ಮತ್ತು ಸಾರ್ವಜನಿಕರ ಹಿತಕ್ಕಾಗಿ ಬಳಕೆ ಮಾಡಬೇಕೆನ್ನುವ ಮೂಲ ಚಿಂತನೆ ಹೊಂದಲಾಗಿತ್ತು. ಮುಂಬರುವ ದಿನಗಳಲ್ಲಿ ವಿದ್ಯಾನಿಧಿಯ ಮೂಲ ಮೊತ್ತವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತ್ತಷ್ಟು ನೆರವನ್ನು ನೀಡಲು ಇಂದಿನ ಕಾರ್ಯಕ್ರಮ ಪ್ರೇರಣೆಯನ್ನು ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ವಿದ್ಯಾನಿಧಿಯ ಮೂಲಕ ನೆರವು ಪಡೆದವರು, ಅದನ್ನು ಸದ್ವನಿಯೋಗ ಪಡೆದುಕೊಳ್ಳುವುದರೊಂದಿಗೆ, ಮುಂಬರುವ ದಿನಗಳಲ್ಲಿ ತಮ್ಮ ಶಿಕ್ಷಣಕ್ಕೆ ಈ ಸಮಾಜ ತಮಗೆ ನೆರವಾಗಿದೆಯಾದ್ದರಿಂದ ತಾನು ಸಹ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆನ್ನುವ ಉದಾತ್ತ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನಿಡಿದರು.ಮಕ್ಕಳಿಗೆ ವಿದ್ಯಾನಿಧಿ ವಿತರಿಸಿ ಪ್ರೋತ್ಸಾಹಿಸಲಾಯಿತು. ನೆರವು ಪಡೆದುಕೊಂಡ ಮಕ್ಕಳ ಪೋಷಕರು ಹಾಗೂ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಶ್ರೀಧರ ನೆಲ್ಲಿತ್ತಾಯ, ಉಷಾ ಪ್ರೀತಂ ಮಾತನಾಡಿದರು. ಗಾಯಕರೂ ಆದ ಜಿ. ಚಿದ್ವಿಲಾಸ್, ವಿದ್ಯಾರ್ಥಿನಿ ಕೀರ್ತಿ, ಎಸ್,ಎ, ಮುರಳೀಧರ್ ಗಾಯನ ನಡೆಸಿಕೊಟ್ಟರು.
ಟ್ರಸ್ಟಿ ಮುಲ್ಲೇಂಗಡ ಮಧೋಶ್ ಪೂವಯ್ಯ ಹಾಜರಿದ್ದರು.ವಿದ್ಯಾರ್ಥಿನಿ ತಾನ್ಯ ಮುರಳೀಧರ್ ಪ್ರಾರ್ಥಿಸಿದರು. ಐ್ರಸ್ಟಿ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರು., ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರು. ಖಜಾಂಚಿ ಕೆ. ತಿಮ್ಮಪ್ಪ ವಂದಿಸಿದರು.