ಸಾರಾಂಶ
ಕೊಡಗು ಕ್ರೀಡಾಪಟು ಹಾಗೂ ದೇಶಸೇವೆ ಮಾಡುವ ಸೈನಿಕರನ್ನು ತಯಾರಿ ಮಾಡುವ ಜಿಲ್ಲೆ ಎಂದು ಹರಪಳ್ಳಿ ರವೀಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಕ್ರೀಡಾಪಟುಗಳು ಹಾಗೂ ದೇಶ ಸೇವೆ ಮಾಡುವ ಸೈನಿಕರನ್ನು ತಯಾರಿ ಮಾಡುವ ಜಿಲ್ಲೆ ಎಂದು ಉದ್ಯಮಿ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಡಣದ ಫುಟ್‌ಬಾಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯದವರಿದ್ದಾರೆ. ಹಾಗಾಗಿ ಒಂದು ಸಮುದಾಯದವರಿಗೆಂದು ಸೀಮಿತ ಮಾಡಬಾರದು, ಕೊಡಗು ಎಲ್ಲರಿಗೂ ಸೇರಿದ ಜಿಲ್ಲೆ. ಕೊಡಗು ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಶಾಸಕರು ಈ ಬಗ್ಗೆ ಗಮನ ಹರಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಯುವ ಪೀಳಿಗೆ ಕೂಡ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.ರಿಯಾಯಿತಿ ದರದಲ್ಲಿ ಚಿಕಿತ್ಸೆ : ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ, ಕ್ರೀಡಾಪಟುಗಳಿಗಂತೂ ಸಮಸ್ಯೆ ಬಂದೇ ಬರುತ್ತದೆ. ಯಾರಿಗೇ ಆಗಲೀ ಯಾವುದೇ ಸಮುದಾಯದವರಿಗಾಗಲಿ ಒಕ್ಕಲಿಗರ ಸಂಘದ ಮೂಲಕ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಶೇ.25ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಎಂಸಿಸಿ ಅಧ್ಯಕ್ಷ ಕ್ರಿಸ್ಟೋಫರ್, ಕಾರ್ಯದರ್ಶಿ ಉಮೇಶ್ ಕುಮಾರ್, ಖಜಾಂಚಿ ಪ್ರಸನ್ನ, ಎಂಸಿಸಿ ಹಿರಿಯ ಆಟಗಾರ, ಭಾರತ ತಂಡವನ್ನು ಪ್ರತಿನಿಸಿದ ಬೆಪ್ಪುರನ ಅಣ್ಣಪ್ಪ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಪಾಣತ್ತಲೆ ಜಗಧೀಶ್, ಎಂಸಿಸಿ ಹಿರಿಯ ಆಟಗಾರರುಗಳಾದ ವಾಸು, ರವಿ, ಪೀಟರ್, ಬೆಂಜಮಿನ್ ಪ್ರಶಾಂತ್, ಅಶೋಕ್, ಸುರ್ಜಿತ್, ದಿನೇಶ್ ಸೇರಿದಂತೆ ಇತರರು ಇದ್ದರು. ಪ್ರದೀಪ್ ಮರಗೋಡು ಕಾರ್ಯಕ್ರಮ ನಿರ್ವಹಣೆಯೊಂದಿಗೆ ವೀಕ್ಷಕ ವಿವರಣೆ ನೀಡಿದರು. ತೀರ್ಪುಗಾರರಾಗಿ ರಾಷ್ಟ್ರೀಯ ತೀರ್ಪುಗಾರ ಇಸ್ಮಾಯಲ್ ಕಂಡಕೆರೆ ಕಾರ್ಯ ನಿರ್ವಹಿಸಿದರು.ಎಂಸಿಸಿ ಕಪ್ ಫುಟ್ಬಾಲ್: ಪತ್ರಕರ್ತರ ತಂಡಕ್ಕೆ ಗೆಲವು: ಮಾನ್ಸ್ ಕಾಂಪೌಡ್ ಕ್ಲಬ್( ಎಂಸಿಸಿ) ವತಿಯಿಂದ ಇಲ್ಲಿನ ಜಿಲ್ಲಾ ಕ್ರಿಡಾಂಗಣದಲ್ಲಿ ಏರ್ಪಡಿಸಲಾಗಿರುವ ಫುಟ್ಬಾಲ್ ಪಂದ್ಯಾವಳಿಯ ಪ್ರದರ್ಶನ ಪಂದ್ಯದಲ್ಲಿ ಪತ್ರಕರ್ತರ ತಂಡ ಗೆಲವು ಸಾಧಿಸಿದೆ.
ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ತಂಡ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಇದರಲ್ಲಿ ಪತ್ರಕರ್ತರ ತಂಡ 3-1 ಗೋಲು ದಾಖಲಿಸುವದರೊಂದಿಗೆ ಗೆಲುವು ಸಾಧಿಸಿತು. ಪತ್ರಕರ್ತರ ತಂಡದಲ್ಲಿ ಗೋಪಾಲ್ ಸೋಮಯ್ಯ, ಸುರ್ಜಿತ್, ಅಶೋಕ, ದಿನೇಶ್, ಕುಡೆಕಲ್ ಸಂತೋಷ್, ಇಸ್ಮಾಯಿಲ್ ಕಂಡಕೆರೆ ಆಟವಾಡಿದರು. ನಂತರ ಇತರ ಪಂದ್ಯಾಟಗಳು ನಡೆದವು.