ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಜಾನಪದ ಕಲೆಯಾದ ವಾಲಗತಾಟ್ನ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹಸ್ತಾಂತರ ಅಗತ್ಯತೆಯಿಂದ ವಾಲಗತಾಟ್ ಮೂಲ ಸ್ವರೂಪವನ್ನು ಮುಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ಕೊಂಡೋಯ್ಯುವ ನಿಟ್ಟಿನಲ್ಲಿ ಕೊಡವ ‘ಪಡಿಪು ಯೋಜನೆ’ ಅಡಿ ಇದೇ ಮೊದಲ ಬಾರಿಗೆ ಮಕ್ಕಳಿಗೆ ಕೊಡವ ವಾಲಗತಾಟ್ ಕಲಿಕಾ ಶಿಬಿರವನ್ನು ಆಗಸ್ಟ್ 6 ರಂದು ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ, ಸಮಾಜದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ತಿಳಿಸಿದರು. ಈ ಬಗ್ಗೆ ಆಡಳಿತ ಮಂಡಳಿಯ ಸಭೆ ನಡೆಸಿ ಮಾಹಿತಿಯನ್ನು ತಿಳಿಸಿದ ಅವರು ಕೊಡವ ಸಮಾಜಗಳು ಕಲ್ಯಾಣ ಮಂಟಪಕ್ಕೆ ಮಾತ್ರ ಸೀಮಿತವಾಗದೆ, ಕೊಡವ ಜಾನಪದ ಕಲೆ, ಸಂಸ್ಕೃತಿ, ಆಟ್-ಪಾಟ್, ಆಚಾರ ವಿಚಾರಗಳನ್ನು ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸಮಾಜವು ಕೊಡವ ಪಡಿಪು ಯೋಜನೆಯನ್ನು ಕೈಗೆತ್ತಿಕೊಂಡು ಈಗಾಗಲೇ ಹಲವಾರು ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಇದರಂತೆ ಇದೀಗ ಪ್ರಥಮ ಬಾರಿಗೆ ವಾಲಗತಾಟ್ ಶಿಬಿರವನ್ನು ಆಗಸ್ಟ್ 6 ರಂದು ಬುಧವಾರ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವುದಕ್ಕೂ, ಕೊಡವ ವಾಲಗತಾಟ್''''''''''''''''ಗೆ ತಕ್ಕಂತೆ ನೃತ್ಯ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದಲ್ಲದೆ ಮಹಿಳೆಯರು ಮತ್ತು ಪುರುಷರಿಗೆ ವಾಲಗ ತಾಟ್ ವಿಭಿನ್ನವಾಗಿದೆ. ಈ ವಿಚಾರಗಳನ್ನು ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಕಲಿತುಕೊಂಡಾಗ ವಾಲಗತಾಟ್ ಪರಂಪರೆಯನ್ನು ಸರಿಯಾಗಿ ಮುಂದಿನ ಪೀಳಿಗೆಗೆ ಹಸ್ತಾಂತರ ವಾಗಲಿದೆ. ಕೊಡವ ಜಾನಪದ ನೃತ್ಯವಾದ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಕಪ್ಪೆಯಾಟ್ ಇದಕ್ಕೆಲ್ಲ ಮೂಲವಾದ ವಾಲಗ ತಾಟ್ ಮೂಲವಾಗಿದ್ದು, ಇದು ಬಲ್ಲವನಿಗೆ ಕೊಡವ ಜಾನಪದ ನೃತ್ಯ ಕಲಿಯಲು ಸುಲಭವಾಗುತ್ತದೆ. ಈ ಒಂದು ನಿಟ್ಟಿನಲ್ಲಿ ನಮ್ಮ ಸಮಾಜದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕೊಡವ ಜನಾಂಗದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಈ ಒಂದು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ, ಈ ಶಿಬಿರಕ್ಕೆ ಭಾಗವಹಿಸಲು ಇಚ್ಛಿಸುವವರು ಇದೇ ಜುಲೈ 31ರೊಳಗೆ ಹೆಸರನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಗೌ. ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಅಲೆಮಾಡ ಡಿ. ಸುಧೀರ್,ನಿರ್ದೇಶಕರಾದ ಕಳ್ಳಿಚಂಡ ಎಸ್.ಚಿಪ್ಪ ದೇವಯ್ಯ, ಗುಮ್ಮಟ್ಟಿರ ಜಿ. ಗಂಗಮ್ಮ, ಮೂಕಳೇರ ಕಾವ್ಯ ಕಾವೇರಮ್ಮ,ಅಡ್ಡಂಡ ಸಿ. ಪ್ರಕಾಶ್ ಕುಶಾಲಪ್ಪ ಹಾಜರಿದ್ದರು.