ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಸಾಂಸ್ಕೃತಿಕ ದಿನಾಚರಣೆ ಹಾಗೂ ಪುತ್ತರಿ ಕೋಲ್‌ ಮಂದ್‌ ನಮ್ಮೆ ಸಭಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡಗಿನಲ್ಲಿ ರಾಜರ ಆಡಳಿತದಲ್ಲಿ ಲಿಂಗಾಧಾರಣೆ ಮಾಡಿ ಲಿಂಗಾಯಿತ ಧರ್ಮಕ್ಕೆ ಹಾಗೂ ಬ್ರಿಟಿಷ್ ಆಡಳಿತದಲ್ಲಿ ಪಾದ್ರಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಅನಾದಿ ಕಾಲದಿಂದಲೂ ಕೊಡವರನ್ನು ಮತಾಂತರ ಮಾಡಲು ಪ್ರಯತ್ನಿಸಿದರೂ ಸಹ ಕೊಡವರು ತಮ್ಮ ಧರ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳನ್ನು ಬಿಟ್ಟುಕೊಡದೇ ಕೊಡವರಾಗಿಯೇ ಉಳಿದಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ, ಗುರು ಕಾರೋಣು ಪೂರ್ವಿಕರನ್ನು ಪೂಜಿಸುವ ಧಾರ್ಮಿಕ ಪದ್ಧತಿ, ಹಬ್ಬ - ಆಚರಣೆ, ಉಳಿದುಕೊಂಡು ಬಂದಿದೆ. ಇದು ಕೊಡವ ಸಂಸ್ಕೃತಿಯ ಹೆಮ್ಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅಭಿಪ್ರಾಯಪಟ್ಟರು.ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕೊಡವ ಸಾಂಸ್ಕೃತಿಕ ದಿನಾಚರಣೆ ಹಾಗೂ ಪುತ್ತರಿ ಕೋಲ್ ಮಂದ್ ನಮ್ಮೆ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ಹಣ ತರಬಹುದಾಗಿತ್ತು. ಈಗ ಆ ಯೋಜನೆ ಸ್ಥಗಿತವಾಗಿದೆ, ಆದರೆ ಈಗ ಖೇಲೋ ಇಂಡಿಯಾ ಯೋಜನೆ ಜಾರಿಯಲ್ಲಿದೆ. ಸಂಸದ ಯದುವೀರ್ ಒಡೆಯರ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅಗತ್ಯವಾದ ಪ್ರಸ್ತಾವನೆಯನ್ನು ಸಲ್ಲಿಸಿದರೆ ಕೇಂದ್ರ ಸರ್ಕಾರದ ಮುಂದೆ ತಂದು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅರುಣ್ ಮಾಚಯ್ಯ ಹೇಳಿದರು.ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಪೊನ್ನಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ಕೊಡವ ಕಲೆ ಸಂಸ್ಕೃತಿ ಆಚಾರ ವಿಚಾರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕೊಡವ ಸಾಂಸ್ಕೃತಿಕ ದಿನ ಹಾಗೂ ಪುತ್ತರಿ ಕೋಲ್ ಮಂದ್ ನಮ್ಮೆ ಆಚರಿಸುತ್ತಿದ್ದು, ಇದರೊಂದಿಗೆ ಕೊಡವ ಜಾನಪದ ಕಲೆ ಕಲಿಸುವ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ಮಾತನಾಡಿ ನಮ್ಮ ಜನಪದ ಕಲೆ ಹಬ್ಬ ಹರಿದಿನಗಳನ್ನು ಪ್ರದರ್ಶನ ಹಾಗೂ ಆಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆ ಅದನ್ನು ಅನುಸರಣೆ ಮಾಡಿಕೊಂಡು ಹೋಗಲು ಸಾಧ್ಯವಾಗಲಿದೆ. ಈ ನೆಲ- ಮಣ್ಣಿನಲ್ಲಿ ಬೇರೆ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ನಮ್ಮ ಸಂಸ್ಕೃತಿಯ ಜೀವಂತಿಕೆ ಉಳಿಸಿಕೊಳ್ಳಲು ಅದರ ಆಚರಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭ ಕೊಡವ ಸಮಾಜದ ಆವರಣದಲ್ಲಿರುವ ಮಂದಿನಲ್ಲಿ ಪುತ್ತರಿ ನಮ್ಮೆಯ ಪ್ರಯುಕ್ತ ಮಂದ್ ಪುಡಿಪ ಕಾರ್ಯಕ್ರಮ ನಡೆದು, ಪುತ್ತರಿ ಕೋಲಾಟ್ ನಡೆಸಲಾಯಿತು.ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ತಂಡದಿಂದ ಸ್ವಾಗತ ಮತ್ತು ನೃತ್ಯ ಉಮ್ಮತಾಟ್, ಅಪ್ಪಚ್ಚಕವಿ ಶಾಲಾ ತಂಡದಿಂದ ನೃತ್ಯ, ಡಾ. ಕಾಳಿಮಾಡ ಶಿವಪ್ಪ ಅವರಿಂದ ಅಪ್ಪಚ್ಚ ಕವಿ ರಚಿತ ಹಾಡು ಮನರಂಜಿಸಿತು.ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ ಅತಿಥಿಗಳ ಸಾಧನೆ ವಿವರಿಸಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ ಸ್ವಾಗತಿಸಿ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ವಂದಿಸಿದರು. ಈ ಸಂದರ್ಭ ಅತಿಥಿ ಅರುಣ್ ಮಾಚಯ್ಯ ಅವರನ್ನು ಕೊಡವ ಸಮಾಜದಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ಸದಸ್ಯರಾದ ಕೊಣಿಯಂಡ ಸಂಜುಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ ಗಂಗಮ್ಮ, ಖಾಯಂ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಹಾಜರಿದ್ದರು.