ಕೊಡವ ಕೌಟುಂಬಿಕ ಹಾಕಿ ಉತ್ಸವ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಗೆ ಚಾಲನೆ

| Published : Mar 31 2024, 02:03 AM IST

ಕೊಡವ ಕೌಟುಂಬಿಕ ಹಾಕಿ ಉತ್ಸವ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

24ನೇ ಹಾಕಿ ಉತ್ಸವ ವಿಭಿನ್ನವಾಗಿ ಕಂಡು ಬಂತು. ಕುಂಡ್ಯೋಳಂಡ ಕುಟುಂಬಸ್ಥರು ವಿಶೇಷ ರೀತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು.

ವಿಘ್ನೇಶ್ ಎಂ. ಭೂತನಕಾಡು/ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಸುಮಾರು ಒಂದು ತಿಂಗಳ ಕಾಲ ಕೊಡವ ಕುಟುಂಬಗಳ ನಡುವೆ ನಡೆಯುವ ಕೌಟುಂಬಿಕ ಹಾಕಿ ಉತ್ಸವದ ಜವಾಬ್ದಾರಿಯನ್ನು ಈ ಬಾರಿ ಕುಂಡ್ಯೋಳಂಡ ಕುಟುಂಬ ವಹಿಸಿದ್ದು, ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಗೆ ಶನಿವಾರ ಸಂಭ್ರಮದ ಚಾಲನೆ ದೊರೆಯಿತು.

24ನೇ ಹಾಕಿ ಉತ್ಸವ ವಿಭಿನ್ನವಾಗಿ ಕಂಡುಬಂತು. 120 ಸದಸ್ಯರನ್ನು ಒಳಗೊಂಡಿರುವ ಕುಂಡೋಳಂಡ ಕುಟುಂಬಸ್ಥರು ವಿಶೇಷ ರೀತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರು.

ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ್ದ ಕುಂಡೋಳಂಡ ಕುಟುಂಬಸ್ಥರು 24 ಬಾರಿ ಬಾನಿನಲ್ಲಿ ಗುಂಡು ಹಾರಿಸುವ ಮೂಲಕ 24ನೇ ವರ್ಷದ ಹಾಕಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಬಾರಿಯ ಹಾಕಿ ಉತ್ಸವದಲ್ಲಿ ಸುಮಾರು 360 ತಂಡಗಳು ನೋಂದಣಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 360 ಬಲೂನ್ ಗಳನ್ನು ಗಾಳಿಯಲ್ಲಿ ಗಣ್ಯರು ಹಾರಿಸಿಬಿಟ್ಟರು. ಅಲ್ಲದೆ ಕುಂಡ್ಯೋಳಂಡ ಹಾಕಿ ಉತ್ಸವದ ಗಾಳಿಪಟವನ್ನು ಹಾರಿಸಲಾಯಿತು.

ಹಾಕಿ ಉತ್ಸವ ಅಂಗವಾಗಿ ಕುಂಡ್ಯೋಳಂಡ ಕುಟುಂಬಸ್ಥರು ನಾಪೋಕ್ಲುವಿನ ಶ್ರೀರಾಮ ಮಂದಿರದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಸಿದರು. ಸಾಂಪ್ರದಾಯಿಕ ದಿರಿಸಿನಲ್ಲಿ ಕುಟುಂಬದ ಸದಸ್ಯರು ವಾಲಗದೊಂದಿಗೆ ಪಟ್ಟಣದಲ್ಲಿ ಹೆಜ್ಜೆ ಹಾಕಿದರು. ಮೈದಾನ ಪ್ರವೇಶಿಸುತ್ತಿದ್ದಂತೆ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹೂಮಾಲೆ ಹಾಕಿ ಸ್ವಾಗತಿಸಿದರು.

ಒಂದು ತಿಂಗಳು ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಮೂರು ಮೈದಾನದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ. ಮೈದಾನದಲ್ಲಿ ಸುಮಾರು 40 ಸಾವಿರ ಮಂದಿ ಕ್ರೀಡಾ ಪ್ರೇಮಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿದ್ದ ಐನ್ ಮನೆ ಹಾಗೂ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು, ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡಂಡ ಕಟ್ಟಣಿ ಕುಟ್ಟಪ್ಪ ಅವರ ಪುತ್ತಳಿಗೆ ಹೂವಿನ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.

ಕುಂಡ್ಯೋಳಂಡ ಕುಟುಂಬಸ್ಥರಿಂದ ಮೈದಾನದಲ್ಲಿ ಆಕರ್ಷಕ ಪಥಸಂಚನ ನಡೆಯಿತು. ತಳಿಯಕ್ಕಿ ಬೊಳಕ್ ಹಾಗೂ ದುಡಿ ಕೊಟ್ ಪಾಟ್ ನೊಂದಿಗೆ ಕುಟುಂಬದ ಸದಸ್ಯರು ಮೈದಾನದಲ್ಲಿ ಹೆಜ್ಜೆ ಹಾಕಿದರು. ಬಳಿಕ ಪಾಂಡಂಡ ಬೋಪಣ್ಣ ಧ್ವಜಾರೋಹಣ ನೆರವೇರಿಸಿದರು.

ಸಾಯಿ ತಂಡಕ್ಕೆ ಗೆಲುವು: ಹಾಕಿ ಉತ್ಸವದ ಉದ್ಘಾಟನಾ ದಿನದ ಅಂಗವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯಿ) ಬಾಲಕಿಯರು ಹಾಗೂ ಕೂರ್ಗ್ 11 ಬಾಲಕಿಯರ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಅತಿಥಿಗಳು ಆಟಗಾರರ ಪರಿಚಯ ಮಾಡಿಕೊಂಡರು. 2-0 ಗೋಲಿನ ಅಂತರದಿಂದ ಸಾಯಿ ಬಾಲಕಿಯರ ತಂಡ ಕೂರ್ಗ್ 11 ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

ಕೂರ್ಗ್ 11 - ನೇವಿ ತಂಡದ ನಡುವೆ ರೋಚಕ ಪಂದ್ಯ : ಹಾಕಿ ಹಬ್ಬದ ಉದ್ಘಾಟನಾ ದಿನದ ಅಂಗವಾಗಿ ಕೂರ್ಗ್ 11 ಹಾಗೂ ಭಾರತೀಯ ನೇವಿ ತಂಡದ ನಡುವೆ ರೋಚಕ ಪ್ರದರ್ಶನ ಪಂದ್ಯ ನಡೆಯಿತು. 2-2 ಗೋಲಿನಿಂದ ಸಮಬಲ ಸಾಧಿಸಿತು. ಕೂರ್ಗ್ 11 ತಂಡದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ಅವರು ಹಾಕಿ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದು, ಕ್ರೀಡಾ ಸ್ಫೂರ್ತಿ ಮೆರೆದರು. ಪಂದ್ಯದ ಮೊದಲಾರ್ಧದಲ್ಲಿ ಜಿಲ್ಲಾಧಿಕಾರಿ ಆಟವಾಡಿದರು.

ಕೂರ್ಗ್ 11 ತಂಡದಲ್ಲಿ ಒಲಿಂಪಿಯನ್ ಗಳಾದ ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಸಣ್ಣುವಂಡ ಉತ್ತಪ್ಪ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.

ಪಂದ್ಯ ಆರಂಭದ ಮೂರು ಅವಧಿಯಲ್ಲೂ ಕೂಡ ಕೂರ್ಗ್ 11 ತಂಡ ರೋಚಕ ಪ್ರದರ್ಶನ ನೀಡಿತು. ನೇವಿ ತಂಡಕ್ಕೆ ದೊರಕಿದ 5 ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಆಟಗಾರರು ಎಡವಿದರು. 2-2 ಗೋಲಿನಿಂದ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು.

ಗ್ರಾಮ, ತಾಲೂಕು ಮಟ್ಟದಲ್ಲಿ ಕ್ರೀಡೆಗೆ ಪುನಶ್ಚೇತನ : ಕೊಡಗಿನ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಕ್ರೀಡೆಗೆ ಪುನಶ್ಚೇತನ ನೀಡುವ ಸಲುವಾಗಿ ಮೈದಾನಗಳ ಅಭಿವೃದ್ಧಿಗೆ ಸಹಕರಿಸಲಾಗುವುದು ಹಾಗೂ ಕೊಡವ ಹಾಕಿ ಅಕಾಡೆಮಿಗೆ ತೋರದಲ್ಲಿ 5 ಎಕರೆ ಜಾಗ ನೀಡಲು ಪ್ರಯತ್ನಿಸಲಾಗುವುದು. ಈ ಚುನಾವಣೆ ಬಳಿಕ ಆ ಕೆಲಸ ಆಗಲಿದೆ ಎಂದು ಶಾಸಕ ಎ.ಎಸ್. ಪೊನಣ್ಣ ಹೇಳಿದರು.

ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಡ್ಯೋಳಂಡ ಕುಟುಂಬದ ವತಿಯಿಂದ ಆಯೋಜಿಸಲಾಗಿರುವ 24 ನೇ ವರ್ಷದ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಕೌಟುಂಬಿಕ ಹಾಕಿ ಕೊಡವರ ಸಂಪ್ರದಾಯದ ಮಹತ್ವದ ಭಾಗವಾಗಿದ್ದು ಈ ವರ್ಷ 360 ಕುಟುಂಬಗಳ ತಂಡಗಳು ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಕುಂಡ್ಯೋಳಂಡ ಹಾಕಿ ಉತ್ಸವ ವಿಶ್ವದಾಖಲೆ ಮಾಡಲಿದೆ ಎಂದು ಹೇಳಿದರು.

ಹಾಕಿಗೆ ಪುನಶ್ಚೇತನ ನೀಡಿದ ಪಾಂಡಂಡ ಕುಟ್ಟಪ್ಪ ಅವರ ಹಾಕಿ ಕೊಡುಗೆಯನ್ನು ಮರೆಯುವ ಹಾಗಿಲ್ಲ. ಹಾಕಿ ಕ್ರೀಡೆಯ ಮೇಲಿನ ನಮ್ಮ ಪ್ರೀತಿಯನ್ನು ಸದಾ ಕಾಪಾಡಿಕೊಳ್ಳಬೇಕು. ಕೊಡವ ಕೌಟುಂಬಿಕ ಹಾಕಿ ಕೊಡವರ ಸಂಪ್ರದಾಯದ ಮಹತ್ವದ ಭಾಗವಾಗಿದೆ. ಕೊಡವ ಕೌಟುಂಬಿಕ ಹಾಕಿ ಯಶಸ್ಸಿಗೆ ಹಾಕಿ ಆಟಗಾರರು, ಕೊಡಗಿನ ಜನತೆಯ ಪಾಲು ಅತ್ಯಂತ ಪ್ರಮುಖವಾದದ್ದು, ಐದು ಎಕರೆ ಜಾಗವನ್ನು ಕೊಡವ ಹಾಕಿ ಅಕಾಡೆಮಿಗೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ನಮ್ಮ ಅಜ್ಜಿಕುಟ್ಟೀರ ಕುಟುಂಬಕ್ಕೂ 2027 ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜನೆಗೆ ಅವಕಾಶ ಕಲ್ಪಿಸಿ ಎಂದು ಬೇಡಿಕೆ ಮುಂದಿಟ್ಟ ಶಾಸಕ ಎ.ಎಸ್. ಪೊನ್ನಣ್ಣ, ರೋಹನ್ ಬೋಪಣ್ಣ ನೇತೖತ್ವದಲ್ಲಿ ಟೆನ್ನಿಸ್ ಅಕಾಡೆಮಿ ಸ್ಥಾಪನೆ ಜಿಲ್ಲಾಡಳಿತದಿಂದ ಜಾಗ ದೊರಕದಿದ್ದರೆ ನಾನೇ ಸ್ವತಃ ಜಾಗ ನೀಡಲು ಮುಂದಾಗುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ವೆಂಕಟರಾಜ ಮಾತನಾಡಿ, ವಿಶ್ವ ಪ್ರಸಿದ್ಧ ಕೊಡವ ಹಾಕಿ ಹಬ್ಬದಲ್ಲಿ ಪಾಲ್ಗೊಂಡಿದ್ದು ಹೆಮ್ಮೆ ತಂದಿದೆ. ನಾನು ಕೂಡ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ 20 ವರ್ಷಗಳ ಹಿಂದೆ ಹಾಕಿ ಕ್ರೀಡಾಪಟುವಾಗಿದ್ದೆ. ಜಿಲ್ಲಾಧಿಕಾರಿ ಆಗಿ ಮಾತ್ರ ಬರಲಿಲ್ಲ. ನಾನೂ ಹಾಕಿ ಪ್ರೇಮಿಯಾಗಿದ್ದೇನೆ, ನಾನೂ ಈ ಪಂದ್ಯಾವಳಿಯಲ್ಲಿ ಹಾಕಿ ಆಡುವೆ ಎಂದರು.

ಒಲಂಪಿಯನ್ ಅಂಜಪಂರವಂಡ ಸುಬ್ಬಯ್ಯ ಮಾತನಾಡಿ, ನಾವು ಮೈದಾನಕ್ಕೆ ಇಳಿದರೆ ಯುವಕರಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಈ ಹಿನ್ನೆಲೆ ನಾನು ಕೂಡ ನಮ್ಮ ತಂಡದಲ್ಲಿ ಆಡುತ್ತಿದ್ದೇನೆ. ಕೊಡಗಿನಲ್ಲಿ ಯುವಕರಿಗೆ ಹಾಕಿಯ ಟೆಕ್ನಿಕಲ್ ಎಂಪೈರ್ ಗಳನ್ನು ಮಾಡಲು ಸಹಕಾರ ನೀಡಲಾಗುವುದು. 18-31 ವರ್ಷದ ಯುವಕರು ಏಪ್ರಿಲ್ 5ರಿಂದ 7 ರ ವರೆಗೆ ನಡೆಯುವ ಎಂಪೈರ್ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ ಮಾತನಾಡಿ, ಭಾರತ ಹಾಕಿ ತಂಡದಲ್ಲಿ ಇಂದು ಆಟಗಾರರನ್ನು ಹುಡುಕುವಂತಹ ಪರಿಸ್ಥಿತಿಯಾಗಿದೆ. ಮುಂದೆ ಕೊಡಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಲಿ ಎಂದರು.

ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ ಕೊಡವ ಹಾಕಿ ಅಕಾಡೆಮಿ ಮೂಲಕ ಕೊಡವ ಹಾಕಿ ಪಂದ್ಯಾವಳಿ ಮುಂದುವರೆಸಲಾಗುತ್ತಿದೆ. ನಾಪೋಕ್ಲುವಿನಲ್ಲಿ ಅತ್ಯುತ್ತಮ ವ್ಯವಸ್ಥೆ ಮಾಡಿ ಹಾಕಿ ಉತ್ಸವ ಆಯೋಜಿಸಿರುವ ಕುಂಡ್ಯೋಳಂಡ ಕುಟುಂಬಸ್ಥರ ಶ್ರಮ ಶ್ಲಾಘನೀಯ ಎಂದರು.

ಕುಂಡ್ಯೋಳಂಡ ಹಾಕಿ ಉತ್ಸವ ಸಮಿತಿ ಸಂಚಾಲಕ ದಿನೇಶ್ ಕಾರ್ಯಪ್ಪ ಮಾತನಾಡಿ, ಹಾಕಿ ನಮ್ಮೆ ಹಾಕಿ ಪಂದ್ಯಗಳೊಂದಿಗೆ ತಂದ್ ಬೆಂದ್ ಶಿಬಿರ, ಆರೋಗ್ಯ ಚಿಕಿತ್ಸಾ ಶಿಬಿರ, ಮ್ಯಾರಥಾನ್, ಆಹಾರಮೇಳ, ವೖತ್ತಿ ಮಾರ್ಗದರ್ಶನ ಶಿಬಿರ ಇತ್ಯಾದಿ ವಿನೂತನ ಕಾಯ೯ಕ್ರಮಗಳನ್ನು ಹಾಕಿ ಹಬ್ಬದ ಸಂದರ್ಭ ಆಯೋಜಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಂ ಎಲ್ಸಿ ಸುಜಾಕುಶಾಲಪ್ಪ, ಕುಂಡ್ಯೋಳಂಡ ಕುಟುಂಬದ ಪಟ್ಟೇದಾರ ಎ.ನಾಣಯ್ಯ, ಹಾಕಿ ಹಬ್ಬದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಸಾಹಿತಿ ಕಂಬೀರಂಡ ಕಾವೇರಿ ಸುಬ್ಬಯ್ಯ , ಹಾಕಿ ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಅಖಿಲ ಕೊಡವ ಸಮಾಜ ಅಧ್ಯಕ್ಷ ಸುಮನ್ ಸುಬ್ರಮಣಿ, ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ವನಾಜಾಕ್ಷಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮದಲ್ಲಿ ಕುಂಡ್ಯೋಳಂಡ ಜಯಮ್ಮ ಪ್ರಾರ್ಥಿಸಿದರು. ಕ್ರೀಡಾ ಉತ್ಸವದ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ವಿಶು ಪೂವಯ್ಯ ವಂದಿಸಿದರು.