ನಾಲ್ನಾಡಿನಲ್ಲಿ ಪ್ರಜ್ವಲಿಸಿದ ಕೊಡವ ಹಾಕಿ ಕ್ರೀಡಾ ಜ್ಯೋತಿ

| Published : Mar 28 2025, 12:34 AM IST

ಸಾರಾಂಶ

ಮುದ್ದಂಡ ಕುಟುಂಬಸ್ಥರ ಹಾಕಿ ಪಂದ್ಯಾಟವು ಯಶಸ್ವಿಯಾಗಿ ನೆರವೇರಲಿ ಎಂದು ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಕುಟುಂಬವು 2023ರಲ್ಲಿ ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ನಾಪೋಕ್ಲಿನಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ಈಗ 25ನೇ ವರ್ಷದ ಪಂದ್ಯಾಟವನ್ನು ಆಯೋಜಿಸುತ್ತಿರುವ ಮುದ್ದಂಡ ಕುಟುಂಬಸ್ಥರ ಹಾಕಿ ಪಂದ್ಯಾಟವು ಯಶಸ್ವಿಯಾಗಿ ನೆರವೇರಲಿ ಎಂದು ಕುಟುಂಬದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.

ಬಲ್ಲಮಾವಟಿ ಗ್ರಾಮದಲ್ಲಿ ಗುರುವಾರ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಐನ್ ಮನೆಯಲ್ಲಿ ಪಾರ್ಥನೆ ಸಲ್ಲಿಸಿ ಅವರು ಮಾತನಾಡಿದರು.

ಕೊಡವ ಕೌಟುಂಬಿಕ ಹಾಕಿ ಪಂದ್ಯಾಟವು ಕೊಡವ ಸಂಸ್ಕೃತಿ ಬೆಳೆಯಲು ಸಹಕಾರಿ. ಮುದ್ದಂಡ ಕುಟುಂಬಸ್ಥರು ಆಯೋಜಿಸಿರುವ 25ನೇ ವರ್ಷದ ಪಂದ್ಯಾವಳಿಯು ದಾಖಲೆ ಆಗಲಿ ಎಂದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಮಾತನಾಡಿ, 25ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಕೊಡವ ಹಾಕಿ ಪಂದ್ಯಾಟದ ಅಂಗವಾಗಿ ವಿನೂತನ ರೀತಿಯಲ್ಲಿ ಕ್ರೀಡಾ ಜ್ಯೋತಿಯನ್ನು ಇದುವರೆಗೆ 24 ಪಂದ್ಯಾಟಗಳನ್ನು ಆಯೋಜಿಸಿದ ಕುಟುಂಬಗಳ ಐನ್‌ಮನೆಗೆ ಕೊಂಡುಹೋಗಿ ಗುರು ಕಾರೋಣರ ಆಶೀರ್ವಾದ ಪಡೆಯಲಾಗುವುದು ಎಂದು ಹೇಳಿದರು.

ತಳಿಯಕ್ಕಿ ಬೊಳಕ್ ದುಡಿಕೊಟ್ಟು ಪಾಟಿನೊಂದಿಗೆ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮುದ್ದಂಡ ಹಾಕಿ ಟೂರ್ನಿಯ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿಕೊಂಡರು. ನಂತರ ಅವರ ಕೈಮಡ ಹಾಗೂ ಐನ್ ಮನೆಗೆ ತೆರಳಿ ಮೆಲ್ಲಕ್ಕಿ ಅಡಿಯಲ್ಲಿ ಪ್ರಾರ್ಥನೆ ಮಾಡಿ, ಮಾಳೆಯಂಡ ಕುಟುಂಬಸ್ಥರು ಕ್ರೀಡಾ ಜ್ಯೋತಿಯನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ನಂತರ ಅತಿಥಿ ಸತ್ಕಾರದ ಬಳಿಕ ಕ್ರೀಡಾಜ್ಯೋತಿ ಮುಂದುವರಿಯಿತು.

ಅಪ್ಪಚೆಟ್ಟೋಳಂಡ ಕುಟುಂಬ ಉಪಾಧ್ಯಕ್ಷ ರಾಜಾ ಭೀಮಯ್ಯ, ಖಜಾಂಜಿ ನವೀನ್, ಕಾರ್ಯದರ್ಶಿ ರೀನಾ ಪೂವಯ್ಯ, ಬಲ್ಲಮಾವಟಿಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮೂವೇರಾ ನಾನಪ್ಪಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ನಾಲ್ನಾಡ್ ಹಾಕಿ ಕ್ಲಬ್‌ ಅಧ್ಯಕ್ಷ ಕರವಂಡ ಸುರೇಶ್ ಹಾಗೂ ಗ್ರಾಮಸ್ಥರು, ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೆರ ಜಯ ಚಿನ್ನಪ್ಪ, ಬಡಕಡ ದೀನಾ ಪೂವಯ್ಯ, ಮುದ್ದಂಡ ರಾಯ್ ತಮ್ಮಯ್ಯ ಸೇರಿದಂತೆ ವಿವಿಧ ಕುಟುಂಬಗಳ ಹಿರಿಯರು, ಕ್ರೀಡಾಪಟುಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ಬಾರಿ ಕ್ರೀಡಾ ಜ್ಯೋತಿ ವಿಶೇಷವಾಗಿದ್ದು, ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್ ಮನೆಯಲ್ಲಿ ಕ್ರೀಡಾ ಜ್ಯೋತಿಯ ಸಂಚಾರ ಆರಂಭವಾಗಿದ್ದು, ಮೊದಲು ಕಕ್ಕಬೆಮಾದಂಡ ಮನೆಯಿಂದ ಹೊರಟು, ನಾಲಡಿ ಕಲಿಯಂಡ ಐನ್ ಮನೆ, ಅಲ್ಲಿಂದ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ನೆಲಜಿ ಮಾಲೆಯಂಡ ಐನ್ ಮನೆ, ಅಲ್ಲಿಂದ ಅಪ್ಪಚೆಟ್ಟೋಳಂಡ ಐನ್ ಮನೆ ನಂತರ ನಾಪೋಕ್ಲು ಕುಲೇಟಿರ ಐನ್ ಮನೆ, ಬಿದ್ದಾಟಂಡ ಐನ್ ಮನೆ, ಕೊಳಕೇರಿ ಕುಂಡಿಯೋಳಂಡ ಐನ್ ಮನೆಗಳಿಗೆ ಸಾಗಿತು. ನಂತರ ನಾಪೋಕ್ಲು ಪಟ್ಟಣದಲ್ಲಿ ಸಾಗಿ ಮುಕ್ಕೋಡ್ಲು ಶಾಂತಯಂಡ ಕುಟುಂಬದ ಮನೆಗೆ ತೆರಳಿತು.