ಸಾರಾಂಶ
ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಅಯೋಧ್ಯೆಯ ಭವ್ಯವಾದ ರಾಮ ಮಂದಿರದಂತೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಪುನರುಜ್ಜೀವನದ ಸಮಯ ಪಕ್ವವಾಗಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಯೋಧ್ಯೆಯ ಶ್ರೀರಾಮಚಂದ್ರನ ಜನ್ಮಸ್ಥಳದಲ್ಲಿರುವ ಭವ್ಯವಾದ ರಾಮ ದೇವಾಲಯವು ಭರತ ವರ್ಷದ ಪ್ರಾಚೀನ ಆಧ್ಯಾತ್ಮಿಕ ನಾಗರಿಕತೆಯ ನಿಜವಾದ ಪುನರುತ್ಥಾನವಾಗಿದೆ. ಇದೇ ಮಾದರಿಯಲ್ಲಿ ಅಪರಿಮಿತ ದೇಶಭಕ್ತಿಯ ಯೋಧ ಜನಾಂಗವಾದ ಕೊಡವರಿಗಾಗಿ ಕೊಡವ ಲ್ಯಾಂಡ್‌ನಲ್ಲಿ ರಾಮರಾಜ್ಯದ ಪುನರ್ ಜೀವವಾಗಬೇಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸ್ವತಃ ರಾಮ ಭಕ್ತರಾದ ಡಾ.ಸುಬ್ರಣಿಯನ್ ಸ್ವಾಮಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಕೊಡವ ಲ್ಯಾಂಡ್‌ನಲ್ಲಿ ರಾಮರಾಜ್ಯದ ಪುನರುಜ್ಜೀವನದ ಪರಿಕಲ್ಪನೆ, ಎರಡಕ್ಕೂ ಪ್ರಮುಖ ವಕೀಲರಾಗಿದ್ದಾರೆ. ಆದ್ದರಿಂದ ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಅಯೋಧ್ಯೆಯ ಭವ್ಯವಾದ ರಾಮ ಮಂದಿರದಂತೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಪುನರುಜ್ಜೀವನದ ಸಮಯ ಪಕ್ವವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಪುನರುಜ್ಜೀವನದ ಸಮಯ ಪಕ್ವವಾಗಿದೆ. ಕೊಡವ ನೆಲ ಅರ್ಥಾತ್ ಕ್ರೋಢ ದೇಶವು ಕೋಸಲ ರಾಜ್ಯದ ರಾಜಾಧಿಪತಿ ಭರತ ವರ್ಷದ ಚಕ್ರವರ್ತಿಯಾಗಿದ್ದ ದಶರಥನ ಆಳ್ವಿಕೆಯ ಅಡಿಯಲ್ಲಿತ್ತು. ೧೯೫೬ರ ವರೆಗೆ ಈ ಕೊಡವ ಲ್ಯಾಂಡ್ ಅನ್ನು ರಾಮರಾಜ್ಯ ಎಂದು ಕರೆಯಲಾಗುತ್ತಿತ್ತು. ಕೂರ್ಗ್ ಪ್ರದೇಶ ಭಾರತದ ಏಕೈಕ ರಾಮರಾಜ್ಯ ಎಂಬ ಶೀರ್ಷಿಕೆಯನ್ನು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರು ೧೯೪೯ ರಲ್ಲಿ ಸಂಸತ್ತಿನಲ್ಲಿ ಅನುಮೋದಿಸಿದರು ಮತ್ತು ದೃಢೀಕರಿಸಿದರು.ಅಯೋಧ್ಯೆಯಲ್ಲಿ ತಲೆ ಎತ್ತಿರುವ ಪುರುಷೋತ್ತಮ ಶ್ರೀ ರಾಮಚಂದ್ರರ ಜನ್ಮಸ್ಥಳದಲ್ಲಿರುವ ಭವ್ಯವಾದ ರಾಮ ದೇವಾಲಯ ಭರತವರ್ಷದ ಪ್ರಾಚೀನ ಆಧ್ಯಾತ್ಮಿಕ ಜೀವಂತ ನಾಗರಿಕತೆಯ ನಿಜವಾದ ಪುನರುತ್ಥಾನವಾಗಿದೆ. ಅದಕ್ಕಾಗಿ ನಾವೆಲ್ಲರೂ ಸಂತೋಷಪಡುತ್ತೇವೆ. ಈ ಭವ್ಯ ದೇವಾಲಯ ಇಡೀ ಬ್ರಹ್ಮಾಂಡದಾದ್ಯಂತ ಆಸ್ತಿಕರು ಹಾಗೂ ವಿಶ್ವಾಸಿಗಳಿಗೆ ಮಹತ್ವ ಹೊಂದಿದೆ.
ಈ ದೇವಾಲಯದ ನೈಜತೆಗಾಗಿ, ನಿಸ್ವಾರ್ಥವಾಗಿ ವಿವಿಧ ವೇದಿಕೆಗಳಲ್ಲಿ ಹೋರಾಟ ಮಾಡಿದವರನ್ನು, ಅದರಲ್ಲೂ ವಿಶೇಷವಾಗಿ ರಾಜಕೀಯ ರಂಗದಲ್ಲಿ ಮತ್ತು ನ್ಯಾಯಾಂಗದಲ್ಲಿ ಹೋರಾಡಿದವರನ್ನು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ ಎಂದು ಹೇಳಿದ್ದಾರೆ.