ಕುಟ್ಟದಿಂದ ಮಡಿಕೇರಿಗೆ ಫೆ.2ರಿಂದ ಕೊಡವರ ಪಾದಯಾತ್ರೆ

| Published : Jan 31 2025, 12:46 AM IST

ಸಾರಾಂಶ

ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ ಮತ್ತು ಹಕ್ಕುಗಳಿಗಾಗಿ ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಟ್ಟದಿಂದ ಮಡಿಕೇರಿ ವರೆಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.2ರಿಂದ 7ರವರೆಗೆ ಪಾದಯಾತ್ರೆ ನಡೆಯಲಿದೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಸಂಸ್ಕೃತಿಯ ಭದ್ರತೆಗಾಗಿ ಮತ್ತು ಹಕ್ಕುಗಳಿಗಾಗಿ ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕುಟ್ಟದಿಂದ ಮಡಿಕೇರಿ ವರೆಗೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.2ರಿಂದ 7ರವರೆಗೆ ಪಾದಯಾತ್ರೆ ನಡೆಯಲಿದೆ. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ದೊರಕಬೇಕಾದ, ಹಕ್ಕು ಮತ್ತು ಬೇಡಿಕೆಗೆ ಇದುವರೆಗೂ ಮನ್ನಣೆ ನೀಡದಿರುವುದು ವಿಪರ್ಯಾಸ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು, ನಮ್ಮ ಸಂವಿಧಾನಿಕ ಹಕ್ಕು ಮತ್ತು ಸಂಸ್ಕೃತಿ ಭದ್ರತೆಗಾಗಿ, ಜನಾಂಗೀಯ ಅಸ್ತಿತ್ವ ಕಾಪಾಡುವ ನಿಟ್ಟಿನಲ್ಲಿ, ಎಲ್ಲಾ ಕೊಡವ ಸಮಾಜ, ಸಂಘಟನೆಗಳು, ಭಾಷಿಕ ಸಮುದಾಯಗಳ ಸಂಘಟನೆಗಳು, ಎಲ್ಲಾ ಕೊಡವ ಅಭಿಮಾನಿಗಳು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಪಾದಯಾತ್ರೆ ನಡೆಸುವ ಮೂಲಕ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕುರಿತಂತೆ ತೀರ್ಮಾನಿಸಿದ್ದೇವೆ

ಎಂದರು.

ಕೊಡಗು 1956 ರವರೆಗೂ ಪ್ರತ್ಯೇಕ ಸಿ ರಾಜ್ಯದ ಸ್ಥಾನಮಾನ ಹೊಂದಿ, ತನ್ನದೇ ಆದ ಕಟ್ಟುಪಾಡು, ಆಚರಣೆ ಹೊಂದಿತ್ತು. ನಂತರ ವಿಶಾಲ ಮೈಸೂರು ಸಂಸ್ಥಾನದೊಂದಿಗೆ ವಿಲೀನವಾಗಿ, ನಂತರ ಕರ್ನಾಟಕದೊಂದಿಗೆ ಸೇರಿಕೊಂಡು ಕೇವಲ ಒಂದು ಜಿಲ್ಲೆಯಾಗಿ

ಉಳಿದುಕೊಂಡಿದೆ. ಪುರಾಣಕಾಲದಿಂದಲೂ, ನಂತರದ ಕಾಲಮಾನದಲ್ಲೂ ಕೂಡ ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳು ಕೊಡವ ಭಾಷೆ ಭಾಷೆ ಮತ್ತು

ಸಂಸ್ಕೃತಿ ಚಾಚೂತಪ್ಪದೆ ಪಾಲಿಸುತ್ತಿದ್ದು, ಇಂದಿಗೂ ಕೂಡ ಅದು ಮುಂದುವರಿದಿದೆ ಎಂದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕಾಣದ ಕೈಗಳು ಕೆಲವರ್ಷಗಳಿಂದ ನಿರಂತರವಾಗಿ ನಮ್ಮ ಸಂಸ್ಕೃತಿ ಮೇಲೆ ದಬ್ಬಾಳಿಕೆ, ದಾಳಿ ನಡೆಸುತ್ತಾ, ನಮ್ಮ ಆಚರಣೆ ಮತ್ತು

ಉಡುಪುಗಳನ್ನು ಉದ್ದೇಶ ಪೂರ್ವಕವಾಗಿ ವಿರೂಪಗೊಳಿಸುತ್ತಿರುವ ಹಲವು ಪ್ರಕರಣಗಳು ನಮ್ಮಕಣ್ಣಮುಂದೆ ಇವೆ ಎಂದು ಆರೋಪಿಸಿದರು.

ಫೆ.2 ರಂದು ಕುಟ್ಟದಲ್ಲಿ ಪಾದಯಾತ್ರೆ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ ಎಲ್ಲಾ ದೇಶತಕ್ಕರು, ಕೊಡವ ಸಮಾಜ, ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುವುದು.

ಕುಟ್ಟ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು ಮೂಲಕ ನಡೆಯುವ ಈ ಬೃಹತ್ ಪಾದಯಾತ್ರೆ ಅಂತಿಮವಾಗಿ ಫೆ.7ರಂದು ಮೇಕೇರಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ.

ಉಳಿದಂತೆ ಕ್ರಮವಾಗಿ ಗಾಳಿಬೀಡು ಮಾರ್ಗವಾಗಿ ಒಂದು, ತಾಳತ್ತಮನೆ ಮಾರ್ಗವಾಗಿ ಎರಡು ತಂಡಗಳು ತಿಮ್ಮಯ್ಯ ವೃತ್ತ ತಲುಪಲಿದೆ. ಕುಶಾಲನಗರ ಸುಂಟಿಕೊಪ್ಪ, ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡ, ಮಕ್ಕಂದೂರು ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡ, ಸಿದ್ದಾಪುರ ಚೆಟ್ಟಳ್ಳಿ ಮಾರ್ಗವಾಗಿ ಮತ್ತೊಂದು ತಂಡ ಬಂದು ಫೀ.ಮಾ.ಕಾರ್ಯಪ್ಪ ವೃತ್ತ ತಲುಪಲಿದೆ ಎಂದು ಮಾಹಿತಿ ನೀಡಿದರು.

ಫೀ.ಮಾ.ಕಾರ್ಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜನರಲ್ ತಿಮ್ಮಯ್ಯ ವೃತ್ತದ ಬಳಿ ಯಾತ್ರೆ ಸೇರಿಲಿದೆ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾಗಮವಾಗುವ ಎಲ್ಲಾ ತಂಡಗಳು ಒಟ್ಟಾಗಿ ಸೇರಿ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಕೊಹಿನೂರ್ ರಸ್ತೆ, ಎಸ್.ಬಿ.ಐ. ಚೌಕಿ, ಜೂನಿಯರ್ ಕಾಲೇಜು ರಸ್ತೆ ಮೂಲಕ ಸಾಗಿ, ಮಡಿಕೇರಿ ಜ.ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜ ಮಂದ್‌ನಲ್ಲಿ ಸಮಾವೇಶಗೊಳ್ಳಲಿದೆ.

ಸಾಗುವ ಮಾರ್ಗದಲ್ಲಿ ನಮ್ಮ ಎಲ್ಲಾ ಮಹಾನ್ ನಾಯಕರ ಪುತ್ಥಳಿಗಳಿಗೆ

ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಗುತ್ತದೆ. ಮಂದ್‌ನಲ್ಲಿ ನಿಂತು ಸರ್ಕಾರದ ಪ್ರತಿನಿಧಿಗೆ ನಮ್ಮ ಬೇಡಿಕೆಯ ಮನವಿ ಪತ್ರ ಸಲ್ಲಿಸುತ್ತೇವೆ. ಸಂವಿಧಾನ ಬದ್ಧವಾಗಿರುವ

ನಮ್ಮ ಹಕ್ಕನ್ನು ಪ್ರತಿಪಾದಿಸುವ ಮೂಲಕ ಬೇಡಿಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ ಎಂದರು.

ಯಾವುದೇ ಘೋಷಣೆಗಳಿಲ್ಲದೆ ಭಾಷಣಗಳನ್ನು ಮಾಡದೆ, ಸಮುದಾಯಗಳ ಭಾವನೆಗಳಿಗೆ ಆಗಿರುವ ವೇದನೆಗಳಿಗೆ ಒತ್ತುಕೊಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ. ಮಾರ್ಗದುದ್ದಕ್ಕೂ ಶುಚಿತ್ವಕ್ಕೆ ಒತ್ತು ನೀಡಿದ್ದು, ಆಹಾರ, ನೀರು, ಪಾನೀಯಗಳ ವ್ಯವಸ್ಥೆಗಳಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸ್ಕೃತಿ, ಭದ್ರತೆ, ಸಂವಿಧಾನಬದ್ಧ

ಹಕ್ಕಿಗಾಗಿ ಎಲ್ಲೆಲ್ಲೂ ವ್ಯಾಪಕ ಅಗ್ರಹ ಕೇಳಿ ಬರುತ್ತಿದೆ. ಸುಮಾರು 12 -15 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಇದಕ್ಕೆ ಪೂರಕ ಎಂಬಂತೆ ಪ್ರತೀ ನಾಡ್, ಊರ್, ಒಕ್ಕಗಳಲ್ಲಿ ಸ್ವಯಂಪ್ರೇರಿತ ತಯಾರಿಯಲ್ಲಿ ಜನರೇ ತೊಡಗಿದ್ದು, ನಮ್ಮ ಹಕ್ಕಿಗಾಗಿ ಹೋರಾಡಲು ಸದಾ ಸಿದ್ಧ ಎಂಬ ಸಂದೇಶವನ್ನು ಸಾರುತ್ತಿರುವುದು ವಿಶೇಷ ಎನಿಸಿದೆ ಎಂದು ಪರದಂಡ ಸುಬ್ರಮಣಿ ಕಾವೇರಪ್ಪ ವಿವರಿಸಿದರು.

ಕಟ್ಟೆಮಾಡು ಪ್ರೇರಣೆ ಅಲ್ಲ:

ಕೊಡವರ ಪಾದಯಾತ್ರೆಗೆ ಕಟ್ಟೆಮಾಡು ದೇವಾಲಯ ಪ್ರಕರಣ ಪ್ರೇರಣೆಯಲ್ಲ, ಮನವಿ ಪತ್ರದಲ್ಲಿ ಕಟ್ಟೆಮಾಡಿಗೆ ಸಂಬಂಧಿಸಿದ ಯಾವುದೇ ಬೇಡಿಕೆ ಇರುವುದಿಲ್ಲ. ಸರ್ಕಾರಗಳು ಕೊಡವರ ಹಕ್ಕುಗಳು ಮತ್ತು ಬೇಡಿಕೆಗಳಿಗೆ ಇಲ್ಲಿಯವರೆಗೆ ಮನ್ನಣೆ ನೀಡದೆ ಇರುವುದರಿಂದ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವುದಕ್ಕಾಗಿ ಪಾದಯಾತ್ರೆ ನಡೆಸುತ್ತಿರುವುದಾಗಿ

ಸ್ಪಷ್ಟಪಡಿಸಿದರು.

ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯ್‌ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.