ಕನ್ನಡಪ್ರಭ ವಾರ್ತೆ ಮಡಿಕೇರಿ

ಯಾರಿಗೂ ಹೋಲಿಕೆಯಿಲ್ಲದ ಒಂದು ಅಪರೂಪದ ಮಾನವ ಸಂಕುಲವಾಗಿರುವ ಕೊಡವರು ತಮ್ಮತನ ಉಳಿಸಿಕೊಳ್ಳಲು ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆಯೇ ಹೊರತು ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಅಲ್ಲವೆಂದು ಖ್ಯಾತ ವಕೀಲ, ಲೇಖಕ ಹಾಗೂ ಚಿಂತಕ ಕೆ.ಪಿ.ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟಿದ್ದಾರೆ.ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರು ಕೊಡಗಿನ ಆದಿಮಸಂಜಾತರು, ಕೊಡವರು ಪ್ರತ್ಯೇಕ ರೇಸ್ ಅಥವಾ ಮೂಲ ವಂಶಸ್ತ ಜನಾಂಗವಾಗಿದ್ದು , ಈ ಜನಾಂಗದ ನೆಲೆ ಮತ್ತು ನೆಲ ಇಲ್ಲಿಯೇ ಇದೆ ಎಂದರು. ಕೊಡವರು ಸಂವಿಧಾನದಲ್ಲಿ ತಾವು ಬೇರೆ ಜನಾಂಗವೆಂದು ಪರಿಗಣಿಸಲ್ಪಡಬೇಕು. ಹಾಗೆ ಪರಿಗಣಿಸಲ್ಪಡಬೇಕಾದರೆ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರು ಪ್ರತ್ಯೇಕವೆಂದು ಗುರುತಿಸಲ್ಪಡಬೇಕು. ಈ ಸಂಬಂಧ ಮತ್ತು ಕೊಡವರ ಹಕ್ಕುಗಳ ಪರವಾಗಿ ತಪಸ್ಸಿನಂತೆ ಅವಿರತವಾಗಿ ಹೋರಾಡುತ್ತಿರುವ ಸಿಎನ್‌ಸಿ ಯನ್ನು ಬೆಂಬಲಿಸಬೇಕೆಂದು ಕೆ.ಪಿ.ಬಾಲಸುಬ್ರಮಣ್ಯ ಕರೆ ನೀಡಿದರು. ಹಿರಿಯ ವಿದ್ವಾಂಸ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ ಬಲಾಢ್ಯ ಜನಾಂಗದ ಮಧ್ಯೆ ಕೊಡವರು ಮುಳುಗಿ ಹೋದರೆ ಕೊಡವರ ಅಸ್ಮಿತೆ ಉಳಿಯುವುದಿಲ್ಲ, ಕೊಡವರಿಗೆ ಸಂವಿಧಾನಿಕ ಹಕ್ಕು ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಕೊಡವರ ಹೆಗ್ಗುರುತಾದ ಅಪರೂಪದ ಹಬ್ಬ, ಭಾಷೆ, ಆರಾಧನಾ ಪದ್ಧತಿ, ಆಹಾರ ಪದ್ಧತಿ, ಉಡುಗೆ ತೊಡುಗೆ, ಶವ ಸಂಸ್ಕಾರ, ಸಪ್ತಪದಿ ಇಲ್ಲದ ಮದುವೆ, ಜಾನಪದ ನೃತ್ಯ, ಹಾಡುಗಳು, ಮಾನವ ಶಾಸ್ತ್ರ ಮತ್ತು ಜನಾಂಗೀಯ ನರಶಾಸ್ತ್ರದ ಎಲ್ಲಾ ವಿಧಿ ವಿಧಾನಗಳನ್ನು ಬೇರೆಯವರೊಂದಿಗೆ ಬೆರೆತು ಸಮೀಕರಣಗೊಳ್ಳದಂತೆ ಎಚ್ಚರವಹಿಸಿ ಪ್ರತ್ಯೇಕವಾಗಿ ಮುಂದುವರೆಸಿ ಜತನದಿಂದ ಕಾಪಾಡಬೇಕೆಂದು ಸಲಹೆ ನೀಡಿದರು.ಜಾನಪದ ಸಂಶೋಧಕಿ ಪ್ರೊ.ಡಾ.ಮುಲ್ಲೇಂಗಡ ರೇವತಿ ಪೂವಯ್ಯಮಾತನಾಡಿ ಕೊಡವ ಭಾಷಾ ಸಮೃದ್ಧಿ, ಕೊಡವ ಜನಾಂಗೀಯ ಹಿರಿಮೆ ಹೆಗ್ಗುರುತಿನ ಬಗ್ಗೆ ಸುದೀರ್ಘ ಪ್ರಬಂಧ ಮಂಡಿಸಿ ಕೊಡವರ ಶ್ರೀಮಂತ ಜಾನಪದ ಪರಂಪರೆ ಸುಮಾರು ನಾಲ್ಕೂವರೆ ಸಾವಿರ ವರ್ಷಗಳ ಸುದೀರ್ಘ ಹಿನ್ನೆಲೆಯನ್ನು ಹೊಂದಿದೆ ಎಂದರು.

ಹೈ ಕೋರ್ಟ್ ನ ಹಿರಿಯ ವಕೀಲ ಎಂ.ಟಿ.ನಾಣಯ್ಯ ಮಾತನಾಡಿ ಸಿಎನ್‌ಸಿಯ 36 ವರ್ಷಗಳ ಸುದೀರ್ಘ ಹೋರಾಟಕ್ಕೆ ಎಲ್ಲಾ ಕೊಡವರು ಸಂಪೂರ್ಣ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು. ಆದಿಮಸಂಜಾತ ಏಕ ಜನಾಂಗೀಯ ಅನಿಮಿಸ್ಟಿಕ್ ನಂಬುಗೆಯ ಕೊಡವರ ಜನ್ಮ ಭೂಮಿಯಾದ ಪ್ರಾಚೀನ ನಾಡುಗಳನ್ನು ಸಂವಿಧಾನದ 244, 371, ಮತ್ತು 6ನೇಯ ಶೆಡ್ಯೂಲ್ ನ ಪ್ರಕಾರ ಕೊಡವ ಲ್ಯಾಂಡ್ ಗಾಗಿ ಕಳೆದ 36 ವರ್ಷಗಳಿಂದ ಸಿಎನ್‌ಸಿ ಹೋರಾಟ ನಡೆಸುತ್ತಿದೆ ಎಂದರು.ಕೊಡವ ಲ್ಯಾಂಡ್ ಭೂರಾಜಕೀಯ ಸ್ವಯಂ ಆಡಳಿತ, ಸ್ವಯಂ ನಿರ್ಣಯದ ಹಕ್ಕು, ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಭದ್ರತೆ ನೀಡಬೇಕು, ಕೊಡವರ ಕೋವಿ ಹಕ್ಕನ್ನು ಸಿಖ್ಖರ ಕೃಪಾಣದ ಮಾದರಿಯಲ್ಲಿ ಧಾರ್ಮಿಕ ಸಂಸ್ಕಾರವೆಂದು ಪರಿಗಣಿಸಬೇಕು, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರ್ಪಡೆಗೊಳಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು.ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಅಜ್ಜಿಕ್ಕುಟ್ಟಿರ ಲೋಕೇಶ್ ವಂದಿಸಿದರು, ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು. ನಂದಿನೆರವಂಡ ನಿಶಾ ಅಚ್ಚಯ್ಯ ಕಾರೋಣ ಪಾಟ್ ಹಾಡಿದರು. ರಾಷ್ಟ್ರಗೀತೆ ಜನಗಣಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ ಗಣಪತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದೇಟಿರ ಕವಿತಾ ಸುಬ್ಬಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದಿನೆರವಂಡ ನಿಶಾ ಅಚ್ಚಯ್ಯ, ಪಚ್ಚರಂಡ ಶಾಂತಿ ಪೂನ್ನಪ್ಪ ಮತ್ತಿತರರು ಪಾಲ್ಗೊಂಡಿದ್ದರು.............-ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಪ್ರದಾಯದಂತೆ ಬಾಳೆ ಕಡಿದು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

-ದುಡಿ ಕೊಟ್ಟ್ ಪಾಟ್ ಮೂಲಕ ಅತಿಥಿಗಳನ್ನು ಬರ ಮಾಡಿಕೊಳ್ಳಲಾಯಿತು. -ಅಂತಿಮವಾಗಿ ಸೂರ್ಯ ಚಂದ್ರ, ಭೂದೇವಿ, ಜಲದೇವಿ, ಪ್ರಕೃತಿ ದೇವಿ, ಗುರುಕಾರೋಣ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿ ಯ ಕೊಡವ ಲ್ಯಾಂಡ್ ಹೋರಾಟಕ್ಕೆ ಅರ್ಪಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ನೆರೆದಿದ್ದವರು ಸ್ವೀಕರಿಸಿದರು.