ಸಾರಾಂಶ
-ಸಮುದಾಯ ಭವನದ ಸದುಪಯೋಗ ಪಡೆದುಕೊಳ್ಳಿ: ಬಬ್ಲೂಗೌಡ
--ಕನ್ನಡಪ್ರಭ ವಾರ್ತೆ ಕೊಡೇಕಲ್
ಮಾನ ರಕ್ಷಣೆಗೆ ಉಡುಪು ಸಿದ್ಧಪಡಿಸುವ ನೇಕಾರರು ಸಹ ಸಮಾಜಕ್ಕೆ ಅಷ್ಟೇ ಮುಖ್ಯವಾಗಿದ್ದಾರೆ ಎಂದು ಆರಟಿಜೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹನುಮಂತನಾಯಕ ಹೇಳಿದರು.2021-22ನೇ ಸಾಲಿನಲ್ಲಿ ಎಚ್‌ಕೆಆರ್‌ಡಿಬಿ ಯೋಜನೆಯಡಿ ಕೊಡೇಕಲ್ ದಲ್ಲಿ ನಿಮಾರ್ಣಗೊಂಡ ನೇಕಾರ ಸಮುದಾಯ ಭವನ ಕಟ್ಟಡ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನೇಕಾರ ಜನಕ್ಕೆ ಹಿತಕಾರ ಎನ್ನುವ ಮಾತಿನಂತೆ, ದೇವರ ದಾಸಿಮಯ್ಯನವರ ಕಾಯಕ ವೃತ್ತಿ ನೇಕಾರಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತ ವೃತ್ತಿಯಲ್ಲಿಯೇ ನೆಮ್ಮದಿಯ ಜೀವನ ಸಾಗಿಸುತ್ತಿರುವ ನೇಕಾರರು ಇಂದು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ.
ನೇಕಾರ ಮಕ್ಕಳು ಇಂದು ಶಿಕ್ಷಣದಲ್ಲಿಯೂ ಉನ್ನತ ಮಟ್ದದ ಹುದ್ದೆಯಲ್ಲಿ ಸೇವೆ, ಸಾಧನೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ಹೇಳಿದ ಅವರು ಗ್ರಾಮದಲ್ಲಿ ಇಂದಿಗೂ ನೇಕಾರರು ಕೈಮಗ್ಗ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ನೇಕಾರ ಸಮುದಾಯಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಕೋನದಿಂದ ಸಹೋದರ ರಾಜೂಗೌಡ ತಮ್ಮ ಆಡಳಿತಾವಧಿಯಲ್ಲಿ ನೇಕಾರ ಸಮುದಾಯ ಭವನ ಮಂಜೂರು ಮಾಡಿಸಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಸಮುದಾಯ, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ನೇಕಾರ ಒಕ್ಕೂಟಗಳ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ ಮಾತನಾಡಿ, ಸಮುದಯದ ಮನವಿಗೆ ಸ್ಪಂದಿಸಿದ್ದ ಮಾಜಿ ಸಚಿವ ನರಸಿಂಹನಾಯಕ ಅವರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದರು ಎಂದು ಹೇಳಿದರು. ನೇಕಾರ ಸಮುದಾಯದವರಿಗೆ ಅನುಕೂಲವಾಗಿದೆ ಎಂದು ಹೇಳಿದ ಅವರು ಸರ್ಕಾರದಿಂದ ನೇಕಾರರಿಗೆ ಸಿಗುವ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಬಸವೇಶ್ವರ ಮತ್ತು ದೇವರ ದಾಸಿಮಯ್ಯನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಆರಂಭಿಸಲಾದ ಕಾರ್ಯಕ್ರಮದಲ್ಲಿ ಬಸವ ಪೀಠಾಧಿಪತಿ ಶ್ರೀವೃಷಭೇಂದ್ರ ಅಪ್ಪನವರು ಸಾನಿಧ್ಯವಹಿಸಿದ್ದರು. ರಾಜ ಮನೆತನದ ರಾಣಿ ರಂಗಮ್ಮ ಜಹಾಗೀರದಾರ ಮತ್ತು ರಾಜಾ ಸುಜಯಸಿಂಹನಾಯಕ ಜಹಾಗೀರದಾರ ಅಧ್ಯಕ್ಷತೆಯನ್ನು ವಹಿಸಿದ್ದರು.ಸಂಗಪ್ಪ ಶಿವಪೂರ, ಕೈಮಗ್ಗ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸಂಗಣ್ಣ ಹಾವೇರಿ, ಉಪಾಧ್ಯಕ್ಷ ಸಂಗನಬಸ್ಸಪ್ಪ ಅಡ್ಡಿ, ಹಣಮಯ್ಯ ಕೆಂಡದ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ಪಿಡಿಒ ಸಂಗಣ್ಣ ನಾಗಬೇನಾಳ, ತಿಪ್ಪಣ್ಣ ದ್ಯಾಮನಾಳ, ಬಸವರಾಜ ಹೊಸಪೂಜಾರಿ ಮುಂತಾದವರಿದ್ದರು. ಶಿಕ್ಷಕ ಕೋರಿಸಂಗಯ್ಯ ಗಡ್ಡದ ನಿರೂಪಣೆ ಮಾಡಿದರು, ಬಸವರಾಜ ಕೆಂಡದ ಸ್ವಾಗತಿಸಿದರು, ಸೋಮಶೇಖರ ಪಂಜಗಲ್ ಪ್ರಾರ್ಥಿಸಿದರು, ಈರಸಂಗಪ್ಪ ಡಂಬಳ ವಂದಿಸಿದರು.
--ಕೊಡೇಕಲ್ ಗ್ರಾಮದಲ್ಲಿ ನಿರ್ಮಿಸಲಾಗಿರುವ ನೇಕಾರ ಸಮುದಾಯ ಭವನವನ್ನು ಸೋಮವಾರ ಶ್ರೀವೃಷಭೇಂದ್ರ ಅಪ್ಪನವರ ಸಾನಿಧ್ಯದಲ್ಲಿ ಹನುಮಂತನಾಯಕ ಉದ್ಘಾಟಿಸಿದರು.
11ವೈಡಿಆರ್14 :