ಸಾರಾಂಶ
- ವ್ಯಾಪಕ ಮಳೆ : ಜಮೀನುಗಳು ಜಲಾವೃತ, ಅಪಾರ ಪ್ರಮಾಣದಲ್ಲಿ ಹಾನಿ
------ಕನ್ನಡಪ್ರಭ ವಾರ್ತೆ ಕೊಡೇಕಲ್
ಶನಿವಾರ ನಸುಕಿನ ಜಾವ ಗುಡುಗು-ಸಿಡಿಲು, ಗಾಳಿ ಸಹಿತ ಸುರಿದ ವ್ಯಾಪಕ ಮಳೆಯಿಂದಾಗಿ ವಲಯದ ವಿವಿಧೆಡೆ ಜಮೀನುಗಳಿಗೆ ನೀರು ನುಗ್ಗಿದ್ದು, 5 ರಿಂದ 6 ಮನೆಗಳು ಹಾನಿಯಾಗಿದ್ದರೆ, ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿರುವ ಕುರಿತು ವರದಿಯಾಗಿದೆ.ಕೊಡೇಕಲ್‌ನಲ್ಲಿ 18.6 ಮೀಮೀ ಹಾಗೂ ನಾರಾಯಣಪುರದಲ್ಲಿ 20.2 ಮೀಮೀ ಮಳೆಯಾಗಿದ್ದು, ಹಾನಿಯುಂಟಾದ ಪ್ರದೇಶಗಳಿಗೆ ಉಪತಹಶಿಲ್ದಾರ ಕಲ್ಲಪ್ಪ ಜಂಜಿನಗಡ್ಡಿ ಭೇಟಿ ನೀಡಿ ಪರಶೀಲಿಸಿದ್ದಾರೆ.
ಕೊಡೇಕಲ್ ವಲಯಾದಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜುಮಾಲಪುರ ತಾಂಡಾದಲ್ಲಿ ಆಗ ತಾನೇ ನಾಟಿ ಮಾಡಿದ್ದ ಹಣಮಂತ ಹಾಗೂ ವಾಲಪ್ಪ ಅವರ ಭತ್ತದ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು ಬೆಳೆಹಾನಿಯಾದ ಬಗ್ಗೆ ರೈತರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಾಡಳಿತಾಧಿಕಾರಿ ಪರಶುರಾಮ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕಳೆದ ಕೆಲದಿನಗಳಿಂದ ಸರಿಯಾಗಿ ಮಳೆ ಬಾರದಿದ್ದರಿಂದ ತೇವಾಂಶ ಕೊರತೆಯಿಂದಾಗಿ ಹಲವೆಡೆ ಬೆಳೆಗಳು ಕುಂಠಿತಗೊಂಡು ವ್ಯವಸಾಯಕ್ಕೆ ವ್ಯಯಿಸಿದ್ದ ದುಡ್ಡು ಮರಳಿ ಬರುತ್ತದೆಯೋ ಇಲ್ಲವೋ ಎಂದು ರೈತಾಪಿ ವರ್ಗದಲ್ಲಿ ಆತಂಕ ಉಂಟುಮಾಡಿತ್ತು. ಆದರೆ, ಶನಿವಾರ ಸುರಿದ ಮಳೆಯಿಂದಾಗಿ ರೈತರಲ್ಲಿ ಕೊಂಚ ರಿಲ್ಯಾಕ್ಸ್ ನೀಡಿದ್ದು, ಈ ಮಳೆ ಬೆಳೆಗಳಿಗೆ ಪೂರಕವಾಗಿದ್ದರೆ, ಇನ್ನು ಕೆಲವೆಡೆ ಹಾನಿಯುಂಟು ಮಾಡಿದೆ.
ಮಳೆಯಿಂದಾಗಿ ಬಿತ್ತನೆ ಮಾಡಿದ್ದ ಹತ್ತಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಕೆಲವು ಜಮೀನುಗಳಲ್ಲಿ ಜಲಾವೃತಗೊಂಡಿದ್ದು ಕೊಳೆಯುವ ಹಂತದಲ್ಲಿವೆ.ಮಳೆಯ ನೀರು ಸಮರ್ಪಕವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲದ ಕಾರಣ ವಲಯದ ಕೆಲ ರಸ್ತೆಗಳು ಕೆಸರುಮಯವಾಗಿದ್ದು, ನಿತ್ಯ ಸಂಚರಿಸುವ ಪ್ರಮುಖ ರಸ್ತೆಗಳ ಮೇಲೆ ತ್ಯಾಜ್ಯ ತುಂಬಿದ ಮಳೆ ನೀರು ನಿಂತ ಪ್ರಯುಕ್ತ ಗ್ರಾಮಸ್ಥರು ಸಂಚರಿಸಲು ಹರಸಾಹಸ ಪಟ್ಟಿದ್ದಾರೆ.
ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನತೆ ಹೊರಗೆ ಬರದೇ, ಒಳಗೂ ಇರದಂತಹ ಪರಿಸ್ಥಿತಿ ಉಂಟಾಗಿತ್ತು. ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ನಿವಾಸಿಗಳು ರಾತ್ರಿಯಿಡೀ ಪರಿತಪಿಸಿದ್ದಾರೆ.ಮದಲಿಂಗನಾಳದಲ್ಲಿ ಮನೆಯ ಗೋಡೆ ಕುಸಿದಿದ್ದು, ಗ್ರಾಮಾಡಾಳಿತಾಧಿಕಾರಿ ವಿಜಯಲಕ್ಷ್ಮಿ ಅವರು ಭೇಟಿ ಬೀಡಿ ಪರಿಶೀಲಿಸಿದ್ದಾರೆ.
-17ವೈಡಿಆರ್12: ಕೊಡೇಕಲ್ ಸಮೀಪದ ಜುಮಾಲಪುರ ತಾಂಡಾದಲ್ಲಿ ಮಳೆಗೆ ಜಲಾವೃತಗೊಂಡ ಜಮೀನು ಪರಿಶೀಲಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು.
-17ವೈಡಿಆರ್11: ಕೊಡೇಕಲ್ ಸಂಕ್ಪಾ ಮದಲಿಂಗನಾಳದಲ್ಲಿ ಮಳೆಗೆ ಕುಸಿದಿರುವ ಮನೆಯ ಗೋಡೆ.
-17ವೈಡಿಆರ್13: ಕೊಡೇಕಲ್ ಸಮೀಪದ ದ್ಯಾಮನಾಳದ ಕಾಲಬೈರವೇಶ್ವರ ಹತ್ತಿರ ಮಳೆಯಿಂದಾಗಿ ಜಲಪಾತದಂತೆ ನೀರು ಧುಮ್ಮಿಕ್ಕುತ್ತಿರುವುದು.
---000---