ಮಾರಕ ಕೃಷಿ ಕಾಯ್ದೆ ಕೈಬಿಡಲು ಸಿಎಂಗೆ ಕೋಡಿಹಳ್ಳಿ ಒತ್ತಾಯ

| Published : Sep 20 2024, 01:39 AM IST

ಸಾರಾಂಶ

ದಾವಣಗೆರೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿಗೆ ಮಾರಕವಾದ ಕಾಯ್ದೆಯನ್ನು ಸಿಎಂ ಸಿದ್ದರಾಮಯ್ಯ ಹಿಂಪಡೆಯದ ಕಾರಣಕ್ಕೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಇನ್ನಾದರೂ ಸರ್ಕಾರ ರೈತರಿಗೆ, ಕೃಷಿಗೆ ಮಾರಕವಾದ ಕಾಯ್ದೆ ಹಿಂಪಡೆಯಲಿ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಭೂ ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತಂದಿದ್ದರು, ನಂತರ ಅದನ್ನು ರದ್ದುಪಡಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈವರೆಗೂ ಅಂತಹ ಕಾಯ್ದೆಯನ್ನೇ ರದ್ದುಪಡಿಸಿಲ್ಲ ಎಂದರು.

ಚುನಾವಣೆ ಪೂರ್ವದಲ್ಲಿ ರೈತರಿಗೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯನವರು ಭೂ ಸುಧಾರಣಾ ಕಾಯ್ದೆ ರದ್ದುಪಡಿಸಬೇಕು. ಇಂತಹ ಕಾಯ್ದೆಯಿಂದಾಗಿ ರೈತರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ತಕ್ಷಣ‍ವೇ ರಾಜ್ಯಸರ್ಕಾರ ಕಾಯ್ದೆ ಹಿಂಪಡೆದು, ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಆಗ್ರಹಿಸಿದರು.

ರಾಜ್ಯವನ್ನು ರಾಷ್ಟ್ರೀಯ ಪಕ್ಷಗಳು ತೀರಾ ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವ ಶಕ್ತಿ ಮತ್ತು ನೈತಿಕತೆಯನ್ನೇ ಇಂತಹ ಪಕ್ಷಗಳು ಕಳೆದುಕೊಂಡಿವೆ. ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದರೆ ಭ್ರಷ್ಟಾಚಾರ ಬಯಲಿಗೆಳೆದು ಜೈಲಿಗೆ ಹಾಕುತ್ತೇವೆನ್ನುತ್ತಾರೆ. ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ, ಅದೇ ರೀತಿ ಸಿದ್ದರಾಮಯ್ಯನವರಿಗೆ ಯಡಿಯೂರಪ್ಪ ಪರ್ಯಾಯ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕೋಡಿಹಳ್ಳಿ ಆರೋಪಿಸಿದರು.

ಯಡಿಯೂರಪ್ಪ-ಸಿದ್ದರಾಮಯ್ಯಗೆ ಪರ್ಯಾಯ ಇಲ್ಲವೇ ಎಂಬ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸೆ.22ರಂದು ಬೆಂಗಳೂರಿನ ರ್‍ಯಾಡಿಸನ್ ಬ್ಲೂ ಹೊಟೆಲ್ ಸಭಾಂಗಣದಲ್ಲಿ ಕರ್ನಾಟಕ ಮುಂದೇನು? ವಿಷಯದ ಕುರಿತಂತೆ ಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆವರೆಗೆ ನಡೆಯುವ ಸಭೆಯಲ್ಲಿ ರೈತರು, ದಲಿತರು, ಮಹಿಳೆಯರು, ಯುವ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದವರು ಭಾಗವಹಿಸುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ, ಮಲ್ಲನಗೌಡ ಪಾಟೀಲ್, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರನಾಯ್ಕ, ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ, ಕಾನೂನು ಸಲಹೆಗಾರ ವೀರನಗೌಡ ಪಾಟೀಲ್ ಇದ್ದರು.