ಕೊಡಿಯಾಲಬೈಲ್‌ ಕೃತಕ ನೆರೆ: ಭಾರಿ ಮಳೆಗೆ ದ್ವೀಪವಾಗುವ ಮಂಗ್ಳೂರು ಹೃದಯ!

| Published : Jun 23 2025, 11:47 PM IST

ಕೊಡಿಯಾಲಬೈಲ್‌ ಕೃತಕ ನೆರೆ: ಭಾರಿ ಮಳೆಗೆ ದ್ವೀಪವಾಗುವ ಮಂಗ್ಳೂರು ಹೃದಯ!
Share this Article
  • FB
  • TW
  • Linkdin
  • Email

ಸಾರಾಂಶ

ಪಿವಿಎಸ್‌ ವೃತ್ತದಿಂದ ಲಾಲ್‌ಬಾಗ್‌ಗೆ ತೆರಳುವ ಮಧ್ಯೆ ಸಿಗುವ ಕೊಡಿಯಾಲಬೈಲ್‌ ಕಳೆದ ಎರಡು ವರ್ಷಗಳಿಂದ ಪ್ರತಿ ಬಾರಿ ಮಳೆ ಬಂದಾಗಲೂ ಜೀವರಕ್ಷಕ ಬೋಟುಗಳನ್ನು ಆಶ್ರಯಿಸುವಂತೆ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪೇಟೆಯಲ್ಲೇ ಪ್ರವಾಹ ಉಂಟಾಗುತ್ತದೆ. ಆಗ ಕೊಡಿಯಾಲಬೈಲ್‌ ಅಕ್ಷರಶಃ ದ್ವೀಪಸದೃಶವಾಗುತ್ತದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಮಳೆಗಾಲದ ಭಾರಿ ಮಳೆಗೆ ನಗರ ಪ್ರದೇಶಗಳಲ್ಲಿ ಕೃತಕ ನೆರೆ ಸಾಮಾನ್ಯ. ಆದರೆ ನಗರದ ಮಧ್ಯಭಾಗವೇ ಮುಳುಗಡೆಯಾದರೆ ಹೇಗಾದೀತು? ಇಂತಹ ಪರಿಸ್ಥಿತಿಗೆ ಜ್ವಲಂತ ಉದಾಹರಣೆ ಮಂಗಳೂರಿನ ಕೊಡಿಯಾಲಬೈಲ್‌.

ಪಿವಿಎಸ್‌ ವೃತ್ತದಿಂದ ಲಾಲ್‌ಬಾಗ್‌ಗೆ ತೆರಳುವ ಮಧ್ಯೆ ಸಿಗುವ ಕೊಡಿಯಾಲಬೈಲ್‌ ಕಳೆದ ಎರಡು ವರ್ಷಗಳಿಂದ ಪ್ರತಿ ಬಾರಿ ಮಳೆ ಬಂದಾಗಲೂ ಜೀವರಕ್ಷಕ ಬೋಟುಗಳನ್ನು ಆಶ್ರಯಿಸುವಂತೆ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪೇಟೆಯಲ್ಲೇ ಪ್ರವಾಹ ಉಂಟಾಗುತ್ತದೆ. ಆಗ ಕೊಡಿಯಾಲಬೈಲ್‌ ಅಕ್ಷರಶಃ ದ್ವೀಪಸದೃಶವಾಗುತ್ತದೆ.

ಇಡೀ ನಗರದ ನೀರು ಇಲ್ಲಿಗೆ!:

ಕೊಡಿಯಾಲಬೈಲ್‌ ವಾಟರ್‌ ಕ್ಯಾಚ್‌ಮೆಂಟ್‌ ಪ್ರದೇಶ. ಇಲ್ಲಿಗೆ ನಗರದ ವಿವಿಧ ಕಡೆಗಳಿಂದ ನೀರು ಹರಿದು ಬರುತ್ತದೆ. ದೂರದ ಯೆಯ್ಯಾಡಿಯಿಂದ ರಾಜಕಾಲುವೆ ಸೇರುವ ನೀರು ಕೂಡ ಇಲ್ಲಿನ ಕಾಲುವೆಯಲ್ಲೇ ಬರುತ್ತದೆ. ಕುಂಟಿಕಾನ, ಎ.ಜೆ. ಆಸ್ಪತ್ರೆಯ ಬಳಿಯ ಹೆದ್ದಾರಿಯ ನೀರು, ಬಿಜೈನ ಭಾರತ್‌ಮಾಲ್‌, ಬಿಜೈ ಕೈಬಟ್ಟಲು, ನಂತೂರು ಜಂಕ್ಷನ್‌, ಕದ್ರಿ ಗುಡ್ಡ, ಕದ್ರಿ ಕೆರೆ, ಬಾವುಗುಡ್ಡೆ, ಬಂಟ್ಸ್‌ ಹಾಸ್ಟೆಲ್‌, ನವಭಾರತ್‌ ವೃತ್ತ ಮೊದಲಾದ ಕಡೆಗಳಿಂದಲೂ ಇಳಿಜಾರು ಪ್ರದೇಶವಾದ ಇಲ್ಲಿಗೆ ನೀರು ಸರಾಗ ಹರಿಯುತ್ತದೆ. ಒಂದು ಗಂಟೆ ನಿರಂತರ ಮಳೆಯಾದರೆ ಸಾಕು, ಕೂಡಲೇ ರಾಜಕಾಲುವೆಯ ನೀರು ಸುತ್ತಮುತ್ತಲಿನ ಪ್ರದೇಶಕ್ಕೆ ಉಕ್ಕೇರುತ್ತದೆ.

ಈ ಬಾರಿ ಜೂನ್‌ ಪ್ರಥಮದಲ್ಲಿ ಸುರಿದ ಧಾರಾಕಾರ ಮಳೆಗೆ ಭಗವತಿ ನಗರದಲ್ಲಿ ರಸ್ತೆಯಲ್ಲೇ ಹೊಳೆಯಂತೆ ನೀರು ಹರಿದು ಬಂದಿದೆ. ಈ ಬಾರಿಯ ಮಳೆಗೆ ಅಗ್ನಿಶಾಮಕ ದಳದವರು ಬೋಟ್‌ ಮೂಲಕ ರಕ್ಷಣಾ ಕಾರ್ಯ ನಡೆಸಬೇಕಾಯಿತು. ನಾಲ್ಕೈದು ವರ್ಷಗಳ ಬಳಿಕ ಪತ್ತುಮುಡಿ ಸೌಧಕ್ಕೂ ಪ್ರವಾಹ ನೀರು ಪ್ರವೇಶಿಸಿದೆ. ಅಳಕೆ, ಕಂಬಳ, ಕೊಡಿಯಾಲಬೈಲ್‌, ಭಗವತಿ ನಗರ, ಕೊಡಿಯಾಲಗುತ್ತು, ಭಾರತಿನಗರ ಸೇರಿದಂತೆ ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆಯ ಆಸುಪಾಸಿನ ಭಾಗಗಳು ತಗ್ಗು ಪ್ರದೇಶದ ಮನೆಗಳು ನೆರೆ ನೀರಿನಿಂದ ಆವೃತಗೊಂಡು ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಭಗವತಿ ನಗರದಲ್ಲಿ ತಿಂಗಳ ಹಿಂದೆ ಹಾಕಲಾದ ಡಾಂಬರು ಸಂಪೂರ್ಣವಾಗಿ ಎದ್ದು ಹೋಗಿದೆ. ಎಲ್ಲೆಲ್ಲೂ ಹದಗೆಟ್ಟ ರಸ್ತೆ, ಮರಳು ಮಣ್ಣಿನಿಂದ ತುಂಬಿರುವ ರಸ್ತೆ, ಕೆಸರುಮಯವಾದ ಸುಮಾರು 30ಕ್ಕೂ ಅಧಿಕ ಮನೆಗಳು, ಮನೆಗಳ ಆವರಣ, ಸ್ವಚ್ಛಗೊಳಿಸುವುದೇ ಸವಾಲಾಗಿ ಪರಿಣಮಿಸಿದೆ.ರಾಜಕಾಲುವೆ ನೀರು ಉಕ್ಕಿ ಹರಿದು ಜಲಾವೃತಗೊಂಡಾಗ ನೀರಿನೊಂದಿಗೆ ಬರುವ ಹಾವುಗಳು, ಚೇಳುಗಳು ಸೇರಿದಂತೆ ವಿವಿಧ ರೀತಿಯ ಜೀವಿಗಳು ಕೂಡಾ ಮನೆಯ ಆವರಣಕ್ಕೆ ಬಂದು ಸೇರುತ್ತದೆ. ರಸ್ತೆಯಲ್ಲಿ ಅಡ್ಡಾಡಿಕೊಂಡಿದ್ದ ಕೆಲವು ಬೀದಿ ನಾಯಿಗಳು ಕೂಡಾ ನೀರು ಪಾಲಾದ ಸಂದರ್ಭಗಳಿವೆ.

...............ಹಿಂದೆ ಗದ್ದೆ, ಈಗ ಕಾಂಕ್ರಿಟ್‌ ಸಿಟಿ!ಕೊಡಿಯಾಲಬೈಲ್‌ ಹೆಸರೇ ಹೇಳುವಂತೆ ಹಿಂದೆ ಬೈಲು ಗದ್ದೆಯಾಗಿದ್ದ ಪ್ರದೇಶ. ಕುದ್ರೋಳಿಯಿಂದ ಕದ್ರಿ ವರೆಗೂ ಸುತ್ತಮುತ್ತ ವಿಶಾಲ ಗದ್ದೆ, ಬೇಸಾಯಕ್ಕೆ ಯಥೇಚ್ಛ ನೀರಿನ ಒಸರು ಸಿಗುತ್ತಿತ್ತು. ಬೇಸಗೆಯಲ್ಲಿ ಬೃಹತ್‌ ಆಟದ ಮೈದಾನದಂತೆ ಈ ಪ್ರದೇಶ ಕಂಡುಬರುತ್ತಿತ್ತು. ಕ್ರಮೇಣ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿ, ಈಗ ಪೂರ್ಣ ಪ್ರಮಾಣದಲ್ಲಿ ಕಾಂಕ್ರಿಟ್‌ಮಯ ಆಗಿದೆ. ಹೀಗಾಗಿ ಇಲ್ಲಿಗೆ ಎತ್ತರ ಪ್ರದೇಶದ ನೀರು, ಮಳೆ ನೀರು, ನೆರೆ ನೀರು ಬಂದರೂ ಭೂಮಿಯಲ್ಲಿ ಇಂಗಲು ಜಾಗ ಇಲ್ಲ, ಮತ್ತದೇ ಕೃತಕ ನೆರೆ, ದ್ವೀಪ ಸದೃಶ್ಯ ವಾತಾವರಣ ಉಂಟಾಗುತ್ತದೆ ಎನ್ನುತ್ತಾರೆ ಸ್ಥಳೀಯರು.1947ರಲ್ಲಿ ಮಹಾಮಳೆ ಬಂದಾಗ ಕೊಡಿಯಾಲಬೈಲ್‌ ಪ್ರದೇಶದ ಭಾಗಗಳು ಅಷ್ಟಾಗಿ ಮುಳುಗುತ್ತಿರಲಿಲ್ಲ. ಸಂತ್ರಸ್ತರು ಇಲ್ಲಿಯೇ ಬಂದು ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಅಂಥದ್ದರಲ್ಲಿ ಈಗ ಇಲ್ಲಿನವರೇ ಸಂತ್ರಸ್ತರಾಗಿ ಆಶ್ರಯಕ್ಕೆ ಬೇರೆ ಕಡೆ ತೆರಳುವಂತಾಗಿದೆ. ಪಾಲಿಕೆ ಮಾಜಿ ಸದಸ್ಯರ ಮನೆಗೂ ನೀರು!ಕೊಡಿಯಾಲಬೈಲ್‌ನಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಿಬ್ಬರ ಮನೆ ಇದೆ. ಇವರ ಮನೆಯೂ ಕೃತಕ ನೆರೆಯಿಂದ ತೊಂದರೆಗೆ ಒಳಗಾಗುತ್ತದೆ. ಇವರು ಸದಸ್ಯರಿದ್ದಾಗ ಕೃತಕ ನೆರೆಯಿಂದ ಪ್ರದೇಶವನ್ನು ಮುಕ್ತಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ತಮ್ಮ ಮನೆಯನ್ನೇ ನೆರೆ ನೀರಿನಿಂದ ರಕ್ಷಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.

..............ಕೊಡಿಯಾಲಬೈಲ್‌ ಪ್ರದೇಶದ ಕೃತಕ ನೆರೆ ಸಮಸ್ಯೆಗೆ ಪರಿಹಾರ ಕಷ್ಟ. ಆದರೆ ರಸ್ತೆಯ ಮಟ್ಟವನ್ನು ಸ್ವಲ್ಪ ಎತ್ತರ ಮಾಡಿದರೆ, ಮನೆಗಳು ಮುಳುಗಿದರೂ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾಧ್ಯವಾಗಬಹುದು. ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ವಹಿಸಿಲ್ಲ. ಎಂಜಿ ರಸ್ತೆಯಿಂದ ಜನತಾ ಡಿಲಕ್ಸ್‌ ಕಡೆ ಹರಿಯುತ್ತಿರುವ ತೋಡನ್ನು ನೇರವಾಗಿ ಕುದ್ರೋಳಿ ಕಡೆ ಸಂಪರ್ಕಿಸುವಂತೆ ಸಮಾನಾಂತರ ತೋಡು ನಿರ್ಮಿಸಬೇಕು. ಆದರೆ ಅದು ಕಾರ್ಯ ಸಾಧುವಲ್ಲ.- ನವೀನ್‌ ಚಂದ್ರ, ಸ್ಥಳೀಯ ನಿವಾಸಿ, ಪಾಲಿಕೆ ಮಾಜಿ ಸದಸ್ಯರು.

ಕೊಡಿಯಾಲಬೈಲ್‌ನಲ್ಲಿ ಕುದ್ರೋಳಿ ಕಡೆಗೆ ಹಾದುಹೋಗುವ ತೋಡಿಗೆ ಸುತ್ತ ತಡೆಗೋಡೆ ನಿರ್ಮಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕರ ಪ್ರಯತ್ನದಿಂದ 1.50 ಕೋಟಿ ರು. ಬಿಡುಗಡೆಯಾಗಿತ್ತು. ಆದರೆ ಹಾಲಿ ಸರ್ಕಾರದ ಅವಧಿಯಲ್ಲಿ ಈ ಅನುದಾನ ವಾಪಸ್‌ ಹೋಗಿದೆ. ಪಾಲಿಕೆ ಆಡಳಿತ ಇರುವಾಗ ಕುದ್ರೋಳಿಯಲ್ಲಿ ಜೆಸಿಬಿ ಇರಿಸಿ ಸಮುದ್ರ ಕಡೆಗೆ ಪ್ರವಾಹ ನೀರು ಸರಾಗ ಹರಿದುಹೊಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಇಲ್ಲಿ ಕೃತಕ ನೆರೆಗೆ ಮುಕ್ತಿ ನೀಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಯೋಜನೆ ಹಾಕಿಕೊಳ್ಳಬೇಕು.

-ಲೀಲಾವತಿ ಪ್ರಕಾಶ್‌, ಪಾಲಿಕೆ ನಿಕಟಪೂರ್ವ ಸದಸ್ಯೆ.