ಸಾರಾಂಶ
ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ವ್ಯಾಪಾರ ನಿರ್ಬಂಧ ಹೇರಿದೆ.
ಕೋಲಾರಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ವ್ಯಾಪಾರ ನಿರ್ಬಂಧ ಹೇರಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವ ಕೋಲಾರದ ರೈತರು ಪಾಕಿಸ್ತಾನಕ್ಕೆ ಟೊಮೆಟೋ ರಫ್ತು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.
ಕೋಲಾರದ ಎಪಿಎಂಸಿ ಮಾರುಕಟ್ಟೆ ಇಡೀ ಏಷ್ಯಾ ಖಂಡದಲ್ಲಿಯೇ 2ನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೋ, ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ರಫ್ತಾಗುತ್ತದೆ. ಇನ್ನು, ಜೂನ್ ಮತ್ತು ಜುಲೈ ತಿಂಗಳು ಟೊಮೆಟೋ ಸುಗ್ಗಿಯ ಕಾಲ. ಈ ಸಂದರ್ಭದಲ್ಲಿ ಕೋಲಾರದ ಟೊಮೆಟೋ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ರಫ್ತಾಗುತ್ತದೆ.
ಈ ಪೈಕಿ ಪಾಕಿಸ್ತಾನಕ್ಕೆ ಸಾಮಾನ್ಯವಾಗಿ ವಾರಕ್ಕೆ 800 ರಿಂದ 900 ಟನ್ ಟೊಮೆಟೋ ರಫ್ತಾಗುತ್ತಿತ್ತು. ಜೊತೆಗೆ, ಪಾಕಿಸ್ತಾನದ ಜೊತೆ ಇಲ್ಲಿನ ವರ್ತಕರು ಉತ್ತಮ ಸಂಬಂಧವನ್ನು ಹೊಂದಿದ್ದು, ಟೊಮೆಟೋ ಜೊತೆ ಮಾವು, ಇತರ ತರಕಾರಿಗಳನ್ನೂ ಸಹ ರಫ್ತು ಮಾಡುತ್ತಿದ್ದರು. ಆ ಮೂಲಕ ಕೋಟ್ಯಾಂತರ ರುಪಾಯಿ ವ್ಯವಹಾರವನ್ನು ಇಲ್ಲಿನ ರೈತರು, ವರ್ತಕರು ಮಾಡುತ್ತಿದ್ದರು. ಅದರಲ್ಲೂ, ಜೂನ್‌ನಲ್ಲಿ ಅತಿ ಹೆಚ್ಚು ಟೊಮೆಟೋವನ್ನು ರಪ್ತು ಮಾಡಲಾಗುತ್ತಿತ್ತು.
ಇಲ್ಲಿಂದ ಸುಮಾರು 42 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಟ್ರಕ್, ಲಾರಿ, ಟೆಂಪೊಗಳ ಮೂಲಕ ರಸ್ತೆ ಮಾರ್ಗವಾಗಿ ಇವುಗಳನ್ನು ಪಾಕಿಸ್ತಾನದ ಗಡಿವರೆಗೆ ತಲುಪಿಸಲಾಗುತ್ತದೆ. ಅಲ್ಲಿಂದ ಪಾಕಿಸ್ತಾನ ಹಾಗೂ ವಿವಿಧ ನೆರೆ ದೇಶಗಳಿಗೆ ಅಲ್ಲಿನ ವರ್ತಕರು ತಮ್ಮ ವಾಹನಗಳಿಗೆ ತುಂಬಿಕೊಂಡು ಹೋಗುತ್ತಾರೆ. ಈಗ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ನರಮೇಧದ ಹಿನ್ನೆಲೆಯಲ್ಲಿ ಇಲ್ಲಿನ ರೈತರು, ವರ್ತಕರು ಪಾಕಿಸ್ತಾನಕ್ಕೆ ಟೊಮೆಟೋ ಸರಬರಾಜು ಮಾಡದಿರಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ಸಿ.ಎಂ.ಆರ್ ಮಂಡಿ ಮಾಲೀಕ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್.
ಪಾಕ್‌ಗೆ ಒಂದೂ ಟೊಮೆಟೋ ನೀಡಲ್ಲ
ಪುಲ್ವಾಮ ಉಗ್ರ ದಾಳಿ ನಡೆದಾಗ ಕೂಡ ಪಾಕ್‌ಗೆ ಟೊಮೆಟೋ ರಫ್ತು ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದೆವು. ಆದರೆ, ಇನ್ನುಳಿದ ಉಗ್ರರ ದಾಳಿ ವೇಳೆ ಮಾನವೀಯ ದೃಷ್ಟಿಯಿಂದ ಟೊಮೆಟೋ ಕೊಟ್ಟಿದ್ದೆವು. ಆದರೆ, ಈಗ ನಮಗೆ ನಷ್ಟವಾದರೂ ಪರವಾಗಿಲ್ಲ, ಒಂದು ಟೊಮೆಟೋ ಸಹ ಪಾಕಿಸ್ತಾನಕ್ಕೆ ಕೊಡಲ್ಲ.
- ಸಿಎಂಆರ್ ಶ್ರೀನಾಥ್, ಕೋಲಾರ ವ್ಯಾಪಾರಿ
- ಪಹಲ್ಗಾಂ ದಾಳಿಗೆ ಕಿಡಿ । ಕೋಲಾರದಿಂದ ಪಾಕ್‌ಗೆ ಟೊಮೆಟೋ ರಪ್ತು ಪೂರ್ಣ ಬಂದ್
- ವಾರಕ್ಕೆ 900 ಟನ್ ಟೊಮೆಟೋ ರಫ್ತು ಮಾಡುತ್ತಿದ್ದ ರೈತರಿಂದ ದೇಶಪ್ರೇಮಿ ನಿರ್ಧಾರ
- ಕೋಲಾರದ ಎಪಿಎಂಸಿ ಏಷ್ಯಾದ 2ನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ
- ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕೂ ಇಲ್ಲಿಂದ ಟೊಮೆಟೋ ಸರಬರಾಜು
- ಪಹಲ್ಗಾಂ ದಾಳಿ ಕಾರಣ ಭಾರತದಿಂದ ಪಾಕ್ ಜತೆ ವ್ಯಾಪಾರ ಸಂಪರ್ಕ ಕಡಿತ
- ಕೇಂದ್ರದ ನಿರ್ಧಾರ ಬೆಂಬಲಿಸಿ ಪಾಕ್‌ಗೆ ಟೊಮೆಟೋ ರಫ್ತು ನಿಲ್ಲಿಸಿದ ರೈತರು