ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ

| N/A | Published : Jul 31 2025, 12:45 AM IST / Updated: Jul 31 2025, 11:18 AM IST

ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕವಾಗಿ ಈ ಮೊದಲು ಎಲ್ಲೂ ಗುರುತಿಸಲಾಗದ ಹೊಸ ರಕ್ತದ ಗುಂಪು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ಇದನ್ನು ‘ಸಿಆರ್‌ಐಬಿ’ ಎಂದು ಹೆಸರಿಸಲಾಗಿದೆ.

 ಬೆಂಗಳೂರು : ಜಾಗತಿಕವಾಗಿ ಈ ಮೊದಲು ಎಲ್ಲೂ ಗುರುತಿಸಲಾಗದ ಹೊಸ ರಕ್ತದ ಗುಂಪು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದು, ಇದನ್ನು ‘ಸಿಆರ್‌ಐಬಿ’ ಎಂದು ಹೆಸರಿಸಲಾಗಿದೆ.

ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಪ್ರಯತ್ನದಿಂದಾಗಿ ಹೊಸ ಗುಂಪು ಗುರುತಿಸಲಾಗಿದೆ. ಯುಕೆ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯ (ಐಬಿಜಿಆರ್‌ಎಲ್) ಈ ಹೊಸ ರಕ್ತದ ಗುಂಪನ್ನು ಪತ್ತೆ ಹೆಚ್ಚಿದೆ. ರಕ್ತಕಣಗಳನ್ನು 10 ತಿಂಗಳ ವ್ಯಾಪಕ ಸಂಶೋಧನೆಗೆ ಒಳಪಡಿಸಿದ ಬಳಿಕ ಈ ಹೊಸ ಪ್ರತಿಜನಕವು ಕ್ರೋಮರ್ (ಸಿಆರ್) ರಕ್ತದ ಗುಂಪು ವ್ಯವಸ್ಥೆಯ ಭಾಗವಾಗಿರುವುದು ತಿಳಿದುಬಂದಿದೆ. ಇದರ ಮೂಲವನ್ನು ಗುರುತಿಸಿ ಈ ರಕ್ತದ ಗುಂಪಿಗೆ ಅಧಿಕೃತವಾಗಿ ‘ಸಿಆರ್‌ಐಬಿ’ ಎಂದು ಹೆಸರಿಡಲಾಗಿದೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 38 ವರ್ಷದ ಕೋಲಾರದ ಮಹಿಳೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದರು. ಆಗ ಅವರಿಗೆ ತಮ್ಮ ಅಪರೂಪದ ರಕ್ತದ ಗುಂಪಿನ ಬಗ್ಗೆ ತಿಳಿದಿರಲಿಲ್ಲ. ಆ ವೇಳೆ ಅವರ ರಕ್ತದ ಗುಂಪು ‘ಒ ಆರ್‌ಎಚ್‌+’ ಪಾಸಿಟಿವ್ ಎಂದು ಬರೆದುಕೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಅವರಿಗೆ ಹೊಂದಾಣಿಕೆಯ ರಕ್ತ ಸಂಗ್ರಹಿಸಿಡಲು ಆಸ್ಪತ್ರೆಯ ರಕ್ತ ನಿಧಿಗೆ ಸೂಚಿಸಲಾಗಿತ್ತು. ಆದರೆ, ಅವರ ರಕ್ತ ಆಸ್ಪತ್ರೆಯಲ್ಲಿ ಲಭ್ಯವಿದ್ದ ಯಾವುದೇ ‘ಒ+’ ಗುಂಪಿನ ರಕ್ತಕ್ಕೆ ಹೊಂದಾಣಿಕೆ ಆಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಮಹಿಳೆಯ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆರೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಪ್ರಯೋಗಾಲಯದಲ್ಲಿ ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿ ರಕ್ತ ಪರೀಕ್ಷೆಗೆ ಒಳಪಡಿಸಲಾಯಿತು. ಮಹಿಳೆಯ ರಕ್ತವು ‘ಪ್ಯಾನ್ರಿಯಾಕ್ಟಿವ್’ ಅಂದರೆ ಅವರ ರಕ್ತವು ಯಾವುದೇ ಮಾದರಿ ಜೊತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ತಿಳಿಯಿತು ಎಂದು ವರದಿ ಬಂದಿದ್ದಾಗಿ ರಕ್ತ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಮಾಥುರ್ ತಿಳಿಸಿದ್ದಾರೆ.

ರಕ್ತ ನೀಡದೆ ಶಸ್ತ್ರಚಿಕಿತ್ಸೆ:

ಹೀಗಾಗಿ ಅಪರೂಪದ ರಕ್ತದ ಗುಂಪಿನ ಬಗ್ಗೆ ನಮಗೆ ಸಂದೇಹ ಉಂಟಾಯಿತು. ಅಪರೂಪದ ರಕ್ತದ ಪ್ರಕಾರಗಳು ಕೆಲವೊಮ್ಮೆ ಒಂದು ಕುಟುಂಬದಲ್ಲಿ ಸಾಮೂಹಿಕವಾಗಿ ಕಂಡುಬರುವುದರಿಂದ, ಮಹಿಳೆಯ ಮಕ್ಕಳು ಸೇರಿ ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಆಗಲೂ ಅವರ ರಕ್ತ ಯಾರ ಮಾದರಿಗೂ ಹೊಂದಿಕೆ ಆಗಲಿಲ್ಲ. ಈ ಕುರಿತು ರೋಗಿಯ ವೈದ್ಯರಿಗೆ ತಿಳಿಸಲಾಯಿತು. ಬಳಿಕ ಅನಿವಾರ್ಯವಾಗಿ ಮಹಿಳೆಗೆ ಯಾವುದೇ ರಕ್ತ ನೀಡದೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಮುಂದುವರಿದ ಪರೀಕ್ಷೆ:

ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಮಹಿಳೆ ಮತ್ತು ಕುಟುಂಬದವರ ರಕ್ತದ ಮಾದರಿ ಸಂಗ್ರಹಿಸಿ ಯುಕೆಯ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ 10 ತಿಂಗಳ ಸಂಶೋಧನೆ ಬಳಿಕ ರಕ್ತದ ಮೂಲ ಗುರುತಿಸಿ ಈ ರಕ್ತದ ಗುಂಪನ್ನು ಪತ್ತೆ ಮಾಡಲಾಯಿತು. ಜೂ.4ರಂದು ಇಟಲಿಯ ಮಿಲನ್‌ನಲ್ಲಿ ನಡೆದ ಅಂತಾರಾರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿ (ಐಎಸ್‌ಬಿಟಿ)ಯ 35ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ ಈ ವಿಚಾರ ಮಂಡಿಸಲಾಯಿತು. ಆಗ ಈ ರಕ್ತದ ಪ್ರತಿಜನಕವನ್ನು (ಸಿಬಿಐಆರ್) ಎಂದು ಹೆಸರಿಸಲಾಯಿತು. ಇದರೊಂದಿಗೆ ಈ ಅಪರೂಪದ ರಕ್ತದ ಗುಂಪು ಹೊಂದಿರುವ ವಿಶ್ವದ ಮೊದಲ ವ್ಯಕ್ತಿ ಎಂದು ಕೋಲಾರದ ಮಹಿಳೆ ಎಂದು ಗುರುತಿಸಲಾಗಿದೆ.

ಅಟೋಲೋಗಸ್ ವರ್ಗಾವಣೆ:

ಪ್ರಸ್ತುತ ಈ ಗುಂಪಿನ ರಕ್ತ ಹೊಂದಿದ ಇತರೆ ಯಾರೂ ಪತ್ತೆಯಾಗದ ಕಾರಣ, ಭವಿಷ್ಯದಲ್ಲಿ ಮಹಿಳೆಗೆ ರಕ್ತ ವರ್ಗಾವಣೆಯ ಅಗತ್ಯವಿದ್ದರೆ, ಆಟೋಲೋಗಸ್ ವರ್ಗಾವಣೆ ಮಾಡಬೇಕಾಗಬಹುದು. ಇದು ಯೋಜಿತ ಶಸ್ತ್ರಚಿಕಿತ್ಸೆಯಾಗಿದ್ದು, ಇದಕ್ಕಾಗಿ ಮಹಿಳೆಯ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಕಬ್ಬಿಣದ ಪೂರಕ ಔಷಧ ನೀಡಬೇಕಾಗಬಹುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಆಕೆಯ ಸ್ವಂತ ರಕ್ತವನ್ನು ಸಂಗ್ರಹಿಸಿ ಶಸ್ತ್ರಚಿಕಿತ್ಸೆಗೆ ಬಳಸಬೇಕಾಗಬಹುದು ಎಂದು ಮಾಥುರ್ ತಿಳಿಸಿದ್ದಾರೆ.

ದಾನಿಗಳ ನೋಂದಣಿ:

ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳ ರಕ್ತದ ಅವಶ್ಯಕತೆ ಪೂರೈಸಲು, ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರವು ಕಳೆದ ವರ್ಷ ಜನವರಿಯಲ್ಲಿ ‘ಅಪರೂಪದ ರಕ್ತದಾನಿಗಳು’ ಅಭಿಯಾನ ಪ್ರಾರಂಭಿಸಿದೆ. ಈವರೆಗೆ ಟಿಟಿಕೆ ರಕ್ತ ಕೇಂದ್ರವು 2,108 ನಿಯಮಿತ ಪುನರಾವರ್ತಿತ ದಾನಿಗಳಲ್ಲಿ ಪರೀಕ್ಷೆ ನಡೆಸಿ, 21 ದಾನಿಗಳು ಅಪರೂಪದ ರಕ್ತ ಗುಂಪು ಹೊಂದಿರುವುದನ್ನು (ಉದಾ: D- -, Rh null, In b negative) ಪತ್ತೆ ಮಾಡಿರುವುದಾಗಿ ಡಾ। ಮಾಥುರ್ ತಿಳಿಸಿದ್ದಾರೆ.

Read more Articles on