ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮೆರವಣಿಗೆಯಲ್ಲಿ ಗುಂಡೇನಟ್ಟಿಯ ಕೋಲಾಟ ತಂಡ

| Published : Oct 11 2024, 09:46 AM IST / Updated: Oct 11 2024, 11:55 AM IST

ಸಾರಾಂಶ

ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ಶ್ರೀ ಸತ್ಯಮ್ಮದೇವಿ ಕೋಲಾಟ ಕಲಾತಂಡ ಅ.12ರಂದು ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.

 ಖಾನಾಪುರ : ತಾಲೂಕಿನ ಗುಂಡೇನಟ್ಟಿ ಗ್ರಾಮದ ಶ್ರೀ ಸತ್ಯಮ್ಮದೇವಿ ಕೋಲಾಟ ಕಲಾತಂಡ ಅ.12ರಂದು ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ಈ ತಂಡವನ್ನು ದಸರಾ ಆಚರಣೆ ಸಮಿತಿ ಆಹ್ವಾನಿಸಿದೆ. ತಂಡದ ಮುಖ್ಯಸ್ಥೆ ಮಾಲತಿ ಚನ್ನಣ್ಣವರ ನೇತೃತ್ವದಲ್ಲಿ ಗುಂಡೇನಟ್ಟಿಯ 15 ಕಲಾವಿದೆಯರ ತಂಡ ಈಗಾಗಲೇ ಮೈಸೂರು ನಗರ ತಲುಪಿದೆ.

ನಶಿಸಿ ಹೋಗುತ್ತಿರುವ ಜಾನಪದ ಕಲೆಗಳಾದ ಕೋಲಾಟ, ಹೆಜ್ಜೆ ಕುಣಿತ, ದೀಪದ ನೃತ್ಯ, ಸಾಂಪ್ರದಾಯಿಕ ಪದಗಳು, ಸೋಬಾನ ಪದಗಳು, ತತ್ವಪದಗಳು, ಗೀ ಗೀ ಪದಗಳು, ಜಗ್ಗಲಿಗೆ ಮತ್ತಿತರ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಗುಂಡೇನಟ್ಟಿ ಗ್ರಾಮದ 20ಕ್ಕೂ ಹೆಚ್ಚು ಮಹಿಳೆಯರು ಶ್ರೀ ಸತ್ಯಮ್ಮದೇವಿ ಕಲಾಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯಿಂದ ಈಗಾಗಲೇ ವಿವಿಧ ಸರ್ಕಾರಿ ಕಾರ್ಯಕ್ರಮ, ಉತ್ಸವ, ಜಾತ್ರೆ ಮತ್ತು ಶುಭಕಾರ್ಯಗಳು ಸೇರಿದಂತೆ ಅವಕಾಶ ದೊರೆತ ಕಡೆಯಲ್ಲೆಲ್ಲ ಕಾರ್ಯಕ್ರಮ ನೀಡಿದೆ.

ಖಾನಾಪುರ ತಾಲೂಕಿನ ಪುಟ್ಟ ಗ್ರಾಮದ ಗುಡೇನಟ್ಟಿಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಕಲ್ಲವ್ವ ಮುದಿಗೌಡ್ರ ನೇತೃತ್ವದಲ್ಲಿ ಮತ್ತು ಶ್ರೀ ಸತ್ಯಮ್ಮದೇವಿ ಕಲಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪಾರ್ವತಿ ಚನ್ನಣ್ಣವರ ಮಾರ್ಗದರ್ಶನದಲ್ಲಿ ಜಯಶ್ರೀ ಮುಂದಿನಮನಿ, ನಾಗವ್ವ ಹರಿಜನ, ಕಸ್ತೂರಿ ಹೆಗ್ಗಣ್ಣಿ, ಸಾವಿತ್ರಿ ಕುರುಬರ, ಗೀತಾ ತೇಗೂರ, ಮಹಾದೇವಿ ಪೂಜೇರ, ಫಕ್ಕೀರವ್ವ ಪೂಜೇರ, ಶೋಭಾ ಮರಿಗೌಡ್ರ, ಗೀತಾ ಕಿಲಾರಿ, ಸತ್ಯಭಾಮಾ ಎಮ್ಮಿನಕಟ್ಟಿ ಮತ್ತು ಗೀತಾ ನಾವಿ ಸೇರಿದಮತೆ ಕಲಾವಿರು ಮೈಸೂರು ತಲುಪಿದ್ದು, ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿ ಕಲಾ ಪ್ರದರ್ಶನ ನೀಡಲು ಸಿದ್ಧರಾಗಿದ್ದೇವೆ. ನಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟ ದಸರಾ ಉತ್ಸವ ಸಮಿತಿಗೆ ನಾವು ಋಣಿಯಾಗಿದ್ದೇವೆ ಎಂದು ಕೋಲಾಟ ತಂಡದ ಮುಖ್ಯಸ್ಥೆ ಮಾಲತಿ ಚನ್ನಣ್ಣವರ ತಿಳಿಸಿದ್ದಾರೆ.