ಫೆ. 4 ರಂದು ಕೋಳಿ ಬೆಸ್ತ ಸಮಾಜದ ಸ್ವಾಭಿಮಾನ ಸಮಾವೇಶ

| Published : Feb 01 2024, 02:02 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೂ ಕೋಳಿ ಬೆಸ್ತ ಸಮಾಜದ ಸ್ವಾಭಿಮಾನ ಸಮಾವೇಶಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದ ವತಿಯಿಂದ ಫೆ. 4 ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ದಾರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಬೃಹತ್‌ ಜನಜಾಗೃತಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಸಾಬಣ್ಣ ತಳವಾರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗೂ ಕೋಳಿ ಬೆಸ್ತ ಸಮಾಜದ ಸ್ವಾಭಿಮಾನ ಸಮಾವೇಶಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ನಾವು ನ್ಯಾಯಕ್ಕಾಗಿ, ನಮ್ಮ ಹಕ್ಕಿಗಾಗಿ ಹೋರಾಟಮಾಡುತ್ತಿದ್ದೇವೆ. ಈ ಸಮಾವೇಶದ ಮೂಲಕ ಸರ್ಕಾರದ ಮೇಲೆ ಹಕ್ಕೊತ್ತಾಯ ಮಾಡಲಾಗುವುದು. ನಮ್ಮ ಸಮಾಜ ಆರ್ಥಿಕವಾಗಿ,ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದೆ. ಎಸ್‌ಸಿ ಮೀಸಲಾತಿ ವಿಚಾರದಲ್ಲಿ ನಮ್ಮ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ನಮ್ಮ ಸಮುದಾಯದ ಕೆಲ ಒಳಪಂಗಡಗಳು ಎಸ್‌ಸಿ ಮೀಸಲಾತಿ ಪಟ್ಟಿಯಲ್ಲಿವೆ. ಆದರೆ, ಕೋಳಿ ಬೆಸ್ತ ಸಮಾಜಕ್ಕೆ ಅನ್ಯಾಯವಾಗಿದೆ. ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ. ನಮ್ಮ ಸಮಾಜ ರಾಜಕೀಯವಾಗಿ ತೀರಾ ಹಿಂದುಳಿದಿದೆ. ಬೆಳಗಾವಿ ಜಿಲ್ಲೆಯಲ್ಲಿ 3 ಲಕ್ಷ ಜನಸಂಖ್ಯೆಯನ್ನು ನಮ್ಮ ಸಮಾಜ ಹೊಂದಿದೆ. ಈ ಸಮಾವೇಶದಲ್ಲಿ ಉತ್ತರಕರ್ನಾಟಕ ವಿವಿಧ ಭಾಗಗಳಿಂದ 35 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದ ಅಧ್ಯಕ್ಷ ದಿಲೀಪಕುಮಾರ ಕುರಂದವಾಡೆ ಮಾತನಾಡಿ, ಫೆ. 4 ರಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಮ್ಮ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಅವರ 904ನೇ ಜಯಂತಿ ಉತ್ಸವವನ್ನು ಅತೀ ಅದ್ಧೂರಿಯಿಂದ ಆಚರಿಸಲಾಗುವುದು. ಅಲ್ಲದೇ, ಶಿವಾಜಿ ಮಹಾರಾಜರ ಸೇನೆಯಲ್ಲಿ ಗುರುತಿಸಿಕೊಂಡಿದ್ದ ಕೋಳಿ ಸಮಾಜದ ವೀರ ತಾನಾಜಿ ಮಾಲಸೂರೆ ಅವರ ಪುಣ್ಯದಿನವನ್ನು ಆಚರಿಸಲಾಗುವುದು ಎಂದರು.ಅಂದು ಬೆಳಗ್ಗೆ 8 ಗಂಟೆಗೆ ಕೋಟೆ ಕೆರೆಯಿಂದ ಸಮಾವೇಶ ನಡೆಯುವ ಸರ್ದಾರ ಮೈದಾನದವರೆಗೆ ಎರಡು ಸಾವಿರ ಶರಣೆಯರಿಂದ ಕುಂಭ ಮೆರವಣೆಗೆ ನಡೆಯಲಿದೆ. ಆನೆಯ ಮೇಲೆ ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಹೊರಡಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು, ಡೊಳ್ಳು,ಜಾಂಜಪದಕ, ಕಂಸಾಳೆ, ವಾದ್ಯಮೇಳ ಕಲಾತಂಡಗಳು ಪಾಲ್ಗೊಳ್ಳಲಿವೆ. ಸಮಾವೇಶಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕುರಂದವಾಡೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸಂಜಯ ಪಾಟೀಲ, ಅಮರೇಶ ಕಾಮನಕೇರಿ, ಮಾಜಿ ಉಪಮೇಯರ್‌ ಮಧಶ್ರೀ ಪೂಜಾರಿ, ಗಿರಿರಾಜ ಸಿರಗೆ ಉಪಸ್ಥಿತರಿದ್ದರು.