26ರಂದು ಕೋಳಿ ಎಸ್ರು, ಹದಿನೇಳೆಂಟು ರಾಜ್ಯಾದ್ಯಂತ ರಿಲೀಸ್‌

| Published : Jan 14 2024, 01:30 AM IST

ಸಾರಾಂಶ

ಶಿವಮೊಗ್ಗ ನಗರಕ್ಕೆಕೋಳಿ ಎಸ್ರು, ಹದಿನೇಳೆಂಟು ಸಿನಿಮಾಗಳ ನಿರ್ದೇಶಕರು ಆಗಮಿಸಿದ್ದರು. ಕಮಲಾ ನೆಹರೂ ಕಾಲೇಜಿನ ಸಭಾಂಗಣದಲ್ಲಿ ಅಂತರಂಗ ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಸಿನಿಮಾಗಳು ಜ.26ರಂದು ಏಕಕಾಲಕ್ಕೆ ಒಟ್ಟಿಗೇ ತೆರೆ ಕಾಳಿವೆ ಎಂದರು. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಟಿಕೆಟ್‌ ಪಡೆಯಲು ವಿಶೇಷ ಅವಕಾಶ ನೀಡಿದ್ದಾಗಿ ವಿವರಿಸಿದರು. ನಿರ್ದೇಶಕರಾದ ಚಂಪಾಶೆಟ್ಟಿ, ಪೃಥ್ವಿ ಕೋಣನೂರು ತಮ್ಮ ಅನುಭವಗಳನ್ನು ಹಂಚಿಕೊಂಡರು.

- ಕಮಲಾ ನೆಹರೂ ಕಾಲೇಜಿನಲ್ಲಿ ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದಿಂದ ಅಂತರಂಗ ರಂಗಸಂವಾದ ಕಾರ್ಯಕ್ರಮ

- ₹400 ಪಾವತಿಸಿ ಎರಡೂ ಚಿತ್ರಗಳ ಒಂದೊಂದು ಟಿಕೆಟ್ ಪಡೆಯಬಹುದು

- 40ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು 24ಕ್ಕೂ ಹೆಚ್ಚು ಪ್ರಶಸ್ತಿಗಳ ಪಡೆದಿರುವ ಸಿನಿಮಾಗಳು

- ಯಾವ ಮಲ್ಪಿಪ್ಲೆಕ್ಸ್‌ನಲ್ಲಿ ಅನುಕೂಲ ಆಗುತ್ತದೆಯೋ ಅಲ್ಲಿ ಟಿಕೆಟ್ ವ್ಯವಸ್ಥೆ

- ಪರಸ್ಪರ.ಲೈವ್ ಎಂಬ ವೆಬ್‍ಸೈಟ್ ಮೂಲಕ ಎರಡು ಚಿತ್ರಗಳ ಟಿಕೆಟ್ ಮಾರಾಟ- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈಗಾಗಲೇ ಹಲವು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಚಂಪಾ ಶೆಟ್ಟಿ ನಿರ್ದೇಶನದ ಕೋಳಿ ಎಸ್ರು ಹಾಗೂ ಪೃಥ್ವಿ ಕೋಣನೂರು ನಿರ್ದೇಶನದ ಹದಿನೇಳೆಂಟು ಸಿನಿಮಾಗಳನ್ನು ಏಕಕಾಲದಲ್ಲಿ ರಾಜ್ಯಾದ್ಯಂತ ರಿಲೀಸ್ ಆಗಲಿವೆ. ಈ ಇಬ್ಬರು ನಿರ್ದೇಶಕರೂ ಒಟ್ಟಿಗೇ ಸಿನಿಮಾಗಳ ಪ್ರಚಾರವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಜೊತೆಗೆ ಮುಂಗಡ ಟಿಕೆಟ್ ಖರೀದಿಸುವ ವಿದ್ಯಾರ್ಥಿಗಳಿಗೆ ವಿನೂತನ ಆಫರ್ ಸಹ ನೀಡಿದ್ದಾರೆ.

ಶಿವಮೊಗ್ಗದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘ ಆಯೋಜಿಸಿದ್ದ ಅಂತರಂಗ ರಂಗಸಂವಾದ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕರಾದ ಚಂಪಾ ಶೆಟ್ಟಿ ಹಾಗೂ ಪೃಥ್ವಿ ಕೋಣನೂರು ತಮ್ಮ ಯೋಜನೆಗಳನ್ನು ಹಂಚಿಕೊಂಡರು.

ಕೋಳಿ ಎಸ್ರು ಹಾಗೂ ಹದಿನೇಳೆಂಟು ಸಿನಿಮಾಗಳು ಬುಸಾನ್, ಹಾಂಗ್‍ಕಾಂಗ್, ಮೆಲ್ಬೋರ್ನ್, ಕೇರಳ, ಗೋವಾ, ಪ್ರೇಗ್, ನ್ಯೂಯಾರ್ಕ್, ಒಟ್ಟಾವ ಸೇರಿದಂತೆ ವಿಶ್ವದ ಹಲವೆಡೆ ನಡೆದ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದ್ದು ಮಾತ್ರವಲ್ಲ, 40ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿವೆ. ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ. ಈ ಎರಡೂ ಸಿನಿಮಾಗಳು ಜ.26ರಂದು ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಆಗುತ್ತಿವೆ ಎಂದರು.

ಈ ಸಿನಿಮಾಗಳ ಬಿಡುಗಡೆ ಹಿನ್ನಲೆಯಲ್ಲಿ ಎರಡೂ ಚಿತ್ರತಂಡಗಳು ವಿನೂತನ ಯೋಜನೆ ಹಮ್ಮಿಕೊಂಡಿವೆ. ಪರಸ್ಪರ.ಲೈವ್ ಎಂಬ ವೆಬ್‍ಸೈಟ್ ಮೂಲಕ ಎರಡು ಚಿತ್ರಗಳ ಟಿಕೆಟ್ ಮಾರಾಟಕ್ಕಿವೆ. ₹400 ಪಾವತಿಸಿ ಎರಡೂ ಚಿತ್ರಗಳ ಒಂದೊಂದು ಟಿಕೆಟ್ ಪಡೆಯಬಹುದು. ಸಿನಿಮಾ ಬಿಡುಗಡೆಯ ಹಿಂದಿನ ದಿನ ನಿಮಗೆ ಯಾವ ಮಲ್ಪಿಪ್ಲೆಕ್ಸ್‌ನಲ್ಲಿ ಅನುಕೂಲ ಆಗುತ್ತದೆಯೋ ಅಲ್ಲಿ ಟಿಕೆಟ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಚಿತ್ರಮಂದಿರಗಳಲ್ಲಿ, ಬುಕ್ ಮೈ ಶೋನಲ್ಲೂ ಟಿಕೆಟ್ ಸಿಗುತ್ತದೆ ಎಂದರು.

ಟಿಕೆಟ್ ಪಡೆದ ವಿದ್ಯಾರ್ಥಿಗಳು ಆನ್‍ಲೈನ್ ಆಡಿಷನ್‍ನಲ್ಲಿ ಭಾಗವಹಿಸಬಹುದು. ವೆಬ್‍ಸೈಟ್‍ನಲ್ಲಿ ಜನರೇಟ್ ಆಗುವ ಕೋಡ್ ಬಳಸಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನದ 30 ಸೆಕೆಂಡ್‍ಗಳ ವೀಡಿಯೋ ಅಪ್ ಮಾಡಿದರೆ ನಮ್ಮ ಮುಂದಿನ ಸಿನಿಮಾಗಳಲ್ಲಿ ಅದನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎಂದರು.

ಇನ್ನು ಚಂಪಾ ಶೆಟ್ಟಿ ಅವರು ನಿರ್ದೇಶಿಸಿದ ಹಲವು ನಾಟಕಗಳು ಶಿವಮೊಗ್ಗದಲ್ಲಿ ಪ್ರದರ್ಶನ ಆಗಿದ್ದನ್ನು ನೆನಪಿಸಿಕೊಂಡರು. ತಮ್ಮ ನಿರ್ದೇಶನದ ಸಿನಿಮಾ ಅಮ್ಮಚ್ಚಿ ಎಂಬ ನೆನಪು ಸಿನಿಮಾಕ್ಕೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಪ್ರೇಕ್ಷಕರು ಬೆಂಬಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಪೃಥ್ವಿ ಕೋಣನೂರು ಶಿವಮೊಗ್ಗದಲ್ಲಿಯೇ ಕಾಲೇಜು ಓದಿದ್ದನ್ನು ಪ್ರಸ್ತಾಪಿಸಿ, ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಪ್ರೋತ್ಸಾಹ ಸಿಕ್ಕರೆ ಮುಂದಿನ ದಿನಗಳಲ್ಲಿ ಇಂತಹ ಸಿನಿಮಾಗಳ ನಿರ್ಮಾಣ ಹೆಚ್ಚಾಗುತ್ತದೆ ಎಂದರು.

ಕಲಾವಿದೆ ಅಕ್ಷತಾ ಪಾಂಡವಪುರ ಅವರು, ಎರಡೂ ಸಿನಿಮಾಗಳು ಕನ್ನಡ ಸಿನಿಮಾ ರಂಗದ ವಿನೂತನ ಮಾದರಿಯ ಸಿನಿಮಾಗಳಾಗಿವೆ. ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದಿರುವ ಸಿನಿಮಾಗಳು ಗೆಲ್ಲಬೇಕು. ಅದಕ್ಕೆ ಎಲ್ಲರ ಬೆಂಬಲ ಬೇಕು ಎಂದು ಹೇಳಿದರು.

ಭಾಗವಹಿಸಿದ್ದ ಸರಿಸುಮಾರು 100ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದ ವೇಳೆ ಹಾಗೂ ನಂತರ ಚಿತ್ರತಂಡದೊಂದಿಗೆ ಸಂವಾದ ನಡೆಸಿದರು. ಡಾ. ನಾಗಭೂಷಣ, ಡಾ. ಸಾಸ್ವೆಹಳ್ಳಿ ಸತೀಶ್, ರೇಖಾಂಬ ಸೇರಿದಂತೆ ಹಲವರು ಸಂವಾದದಲ್ಲಿ ಭಾಗವಹಿಸಿದ್ದರು.ಕಲಾವಿದರು ಒಕ್ಕೂಟದ ಅಧ್ಯಕ್ಷರಾದ ಕಾಂತೇಶ್ ಕದರಮಂಡಲಗಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು.

- - - -13ಎಸ್ಎಂಜಿಕೆಪಿ04:

ಶಿವಮೊಗ್ಗದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದಿಂದ ಅಂತರಂಗ ರಂಗಸಂವಾದ ನಡೆಯಿತು.