ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಸೊರಬ/ ತೀರ್ಥಹಳ್ಳಿ/ ಸಾಗರ
ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಮತ್ತು ನಂತರ ಪ್ರತಿಭಟನಾನಿರತ ವೈದ್ಯ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಐಎಂಎ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲಿ ಶನಿವಾರ ವೈದ್ಯರ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಸಿಮ್ಸ್ ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು, ಟಿಎಸ್‌ಬಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಮನವಿ ಸಲ್ಲಿಸಿದರು.
ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ವೈದ್ಯರು ಒಪಿಡಿ ಬಂದ್ ಮಾಡಿದ್ದರು. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರ ತಾಗಿ ಬೇರೆ ಸೇವೆ ಇಲ್ಲದ ಕಾರಣ ರೋಗಿಗಳಿಗೆ ತೊಂದರೆಯಾಗಿತ್ತು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ವೈದ್ಯರಿಗೆ ಮತ್ತು ವೈದ್ಯ ವಿದ್ಯಾರ್ಥಿಗಳು ದಿನದ ೨೪ ಗಂಟೆಯೂ ತುರ್ತು ಸೇವೆ ಮಾಡಬೇಕಿರುತ್ತದೆ. ಆದರೆ, ವೈದ್ಯರಿಗೆ ಇತ್ತೀಚಿನದ ದಿನಗಳಲ್ಲಿ ರಕ್ಷಣೆ ಇಲ್ಲದಂತಾಗಿದೆ. ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಇಂತಹ ಘಟನೆಗಳು ಸಂಭವಿಸಿದ ತಕ್ಷಣ ಮುಚ್ಚಿಡುವ ಪ್ರಯತ್ನ ಕೂಡ ನಡೆಯುತ್ತಿದೆ. ಕೂಡಲೇ ಇಂತಹ ಪ್ರಕರಣ ಸಂಭವಿಸಿದಾಗ ಸರ್ಕಾರ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು. ಕಾಲಹರಣ ಮಾಡದೇ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ.ಶ್ರೀಧರ್, ಡಾ.ಸುರೇಶ್, ಡಾ.ಸತೀಶ್ ಕುಮಾರ್, ಡಾ.ಸಂಜಯ್, ಡಾ.ಹೇಮಂತ್, ಡಾ.ರಮ್ಯಾ, ಡಾ.ಜಿತೇಂದ್ರ ಕುಮಾರ್, ಡಾ.ಶ್ರೀಕಾಂತ್ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು, ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.೨೦೨೦ರ ನಿಯಮಾವಳಿ ಜಾರಿಯಾಗಲಿ
ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ, ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದನ್ನು ಸರ್ಕಾರಗಳು ತಪ್ಪಿಸಬೇಕು. ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೂಡಲೇ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಬೇಕು ಎಂದು ಡಾ.ಧನಂಜಯ ಸರ್ಜಿ ಆಗ್ರಹಿಸಿದರಲ್ಲದೆ,೨೦೨೦ರ ವೈದ್ಯಕೀಯ ನಿಯಮಾವಳಿಗಳನ್ನು ಕೂಡಲೇ ಜಾರಿಗೊಳಿಸಬೇಕು. ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ನೆರವಿನ ಜೊತೆಗೆ ಅವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.ಆಸ್ಪತ್ರೆ ಸುರಕ್ಷಿತ ವಲಯವೆಂದು ಘೋಷಿಸಿ: ಡಾ.ಎಂ.ಕೆ.ಭಟ್
ಸೊರಬ: ಸರ್ಕಾರ ದೇಶಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳನ್ನು ವಿಮಾನ ನಿಲ್ದಾಣಗಳಂತೆ ಸುರಕ್ಷಿತ ವಲಯಗಳನ್ನಾಗಿ ಘೋಷಿಸಿ ವೈದ್ಯರು ಮತ್ತು ಸಿಬ್ಬಂದಿ ನಿರ್ಭಯವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ.ಎಂ.ಕೆ.ಭಟ್ ಒತ್ತಾಯ ಮಾಡಿದರು.ಶನಿವಾರ ಪಟ್ಟಣದಲ್ಲಿ ಕೋಲ್ಕತ್ತಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ, ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಆರೋಗ್ಯ ಇಲಾಖೆ ನೌಕರರ ಸಂಘದ ಸೊರಬ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿ, ವೈದ್ಯರ ಮೇಲೆ ಆಗಾಗ್ಗೆ ಇಂತಹ ಪ್ರಕರಣಗಳು ಮರುಕಳಿಸುತ್ತಿದ್ದು, ದೈಹಿಕವಾಗಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾದ ಸಂದರ್ಭದಲ್ಲಿ ಸರ್ಕಾರ ರಕ್ಷಣೆ ನೀಡಿ ನಷ್ಟ ತುಂಬಬೇಕು, ಘಟನೆಗೆ ಕಾರಣರಾದ ವ್ಯಕ್ತಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಪ್ರಮುಖ ಆಸ್ಪತ್ರೆ ಗಳಲ್ಲಿ ಭದ್ರತಾ ಪ್ರೊಟೋಕಾಲ್ ಇರಬೇಕು. ಅವುಗಳನ್ನು ಸುರಕ್ಷಿತ ವಲಯವನ್ನಾಗಿ ಘೋಷಿಸಬೇಕು. ಆರೋಗ್ಯ ಕಾರ್ಯಕರ್ತರ ಮೇಲಿನ ಹಿಂಸಾಚಾರ ತಡೆಯಲು ಕಾನೂನು ರೂಪಿಸಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ತಾಲೂಕು ಆಡಳಿತ ವೈದ್ಯಧಿಕಾರಿ ಡಾ.ಕೆ.ಪ್ರಭು ಸಾಹುಕಾರ ಮಾತನಾಡಿ, ಕಲ್ಕತ್ತಾದಲ್ಲಿ ನಡೆದ ಘಟನೆ ಮಾನವ ಕುಲ ತಲೆತಗ್ಗಿಸುವ ವಿಚಾರವಾಗಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಆ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ನಡೆದಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ವಿನಯ್ ಪಾಟೀಲ್, ದಂತವೈದ್ಯ ಡಾ.ಹೆಚ್.ಇ. ಜ್ಞಾನೇಶ, ಡಾ.ಸಾವಿತ್ರಿ ಆನವಟ್ಟಿ, ಡಾ.ಅಭಿಷೇಕ್ ಪ್ರತಿಭಟನೆಯಲ್ಲಿ ಮಾತನಾಡಿದರು.ನಂತರ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಐಎಂಎ ತಾಲೂಕು ಕಾರ್ಯದರ್ಶಿ ಡಾ.ಸೈಯದ್ ಹಾಷಂ, ಡಾ.ಗೋಪಾಲಕೃಷ್ಣ, ಡಾ.ಮಹೇಶ್ ಎಂ.ಕೆ. ಉದ್ರಿ, ಡಾ.ಸತೀಶ್, ಡಾ.ರವಿಕುಮಾರ್, ತಾಲೂಕು ಆರೋಗ್ಯ ನೌಕರರ ಒಕ್ಕೂಟದ ಅಧ್ಯಕ್ಷ ನಾಗರಾಜ್, ಡಾ.ನದಾಫ್, ಡಾ. ಭರತ್, ಡಾ. ನವೀನ್, ಡಾ. ಸತೀಶ್, ಶ್ರುಷಾಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಶುಶ್ರೂಷಕಿಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ವೈದ್ಯೆ ವಿದ್ಯಾರ್ಥಿನಿ ಹತ್ಯೆ ಹೇಯ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ಕೊಲ್ಕತ್ತಾ ನಗರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವ ಹೇಯ ಕೃತ್ಯ ನಾಗರಿಕ ಸಮಾಜಕ್ಕೆ ಅವಮಾನವಾಗಿದ್ದು, ಈ ಪ್ರಕರಣಕ್ಕೆ ಸಂಭಂದಿಸಿ ಅಪರಾಧಿಗಳಿಗೆ ರಕ್ಷಣೆಯಾಗುವ ರೀತಿ ಅಮಾನವೀಯವಾಗಿ ನಡೆದುಕೊಂಡಿರುವ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಈ ಪ್ರಕರಣವನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಐಎಂಎ ಸಂಘಟನೆ ವತಿಯಿಂದ ಶನಿವಾರ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಸಂತ್ರಸ್ತ ವಿದ್ಯಾರ್ಥಿನಿಯ ಸಾವಿಗೆ ಸಾಂತ್ವನ ಹೇಳುವ ಬದಲು ಸಿಎಂ ನೇತೃತ್ವದಲ್ಲಿ ಬೀದಿಗಿಳಿದು ಆರೋಪಿಯನ್ನು ಗಲ್ಲಿಗೇರಿಸುವಂತೆ ಮೆರವಣಿಗೆ ನಡೆಸಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರದ ನಡೆಯ ಬಗ್ಗೆ ಪಶ್ಚಿಮ ಬಂಗಾಳ ಉಚ್ಚ ನ್ಯಾಯಾಲಯ ಕೂಡಾ ಛೀಮಾರಿ ಹಾಕಿದೆ ಎಂದರು.ಆರೋಪಿಗೆ ಶಿಕ್ಷೆ ಕೊಡುವ ಬದಲು ಕೊಲೆ ಪ್ರಕರಣದ ಸಾಕ್ಷ್ಯವನ್ನೇ ನಾಶ ಮಾಡಲು ಹೊರಟಿರುವ ಪಶ್ಚಿಮ ಬಂಗಾಳ ಸರ್ಕಾರ ನಾಗರಿಕರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ. ಆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕಾರಣ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು ಎಂದೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಗಣೇಶಭಟ್ ಮಾತನಾಡಿ ದಿನದ 24 ತಾಸು ಕರ್ತವ್ಯ ನಿರ್ವಹಿಸಬೇಕಾದ ನಮ್ಮ ಸಿಬ್ಬಂದಿಗಳಿಗೆ ಈ ಘಟನೆಯಿಂದ ಆತ್ಮ ವಿಶ್ವಾಸವೇ ಕಳೆದಿದೆ. ಈ ಘಟನೆಯ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದೂ ಶಾಸಕರ ಮೂಲಕ ಸರ್ಕಾರಕ್ಕೆ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ. ವೈದ್ಯರು ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿಗಳು ತುರ್ತು ಸೇವೆಯನ್ನು ಹೊರತು ಪಡಿಸಿ ಧರಣಿ ನಡೆಸಿದರು.ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಡಾ. ಗಣೇಶ್ ಕಾಮತ್, ಹಿರಿಯ ವೈದ್ಯರುಗಳಾದ ಡಾ.ಟಿ.ನಾರಾಯಣಸ್ವಾಮಿ, ಡಾ.ಎಸ್.ಮನೋಹರ್, ಡಾ.ಪದ್ಮಜಾ, ಡಾ. ನಂದಕಿಶೋರ್, ಡಾ.ಸತ್ಯನಾರಾಯಣ, ಡಾ.ಮಂಜುಳಾ, ಡಾ.ಅನಂತಮೂರ್ತಿ ಐತಾಳ್, ಡಾ.ಗಣೇಶ್ ನಾಯಕ್ ಸೇರಿದಂತೆ ಎಲ್ಲಾ ವೈದ್ಯರು ಹಾಗೂ ಸರ್ಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ವೈದ್ಯಕೀಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಸಾಗರದಲ್ಲಿ ಆರೋಗ್ಯಸೇವೆ ಬಹುತೇಕ ಸ್ಥಗಿತ
ಸಾಗರ: ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಸಾಗರ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಬಿ.ಜಿ.ಸಂಗಮ್ ಮಾತನಾಡಿ, ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಮಹಿಳಾ ವೈದ್ಯರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ನಡೆದಿರುವ ಕೃತ್ಯದಿಂದ ವೈದ್ಯ ಸಮೂಹ ಭಯಭೀತಿಗೊಂಡಿದೆ ಎಂದರು.ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಕೊಲ್ಕತ್ತಾದಲ್ಲಿ ಪ್ರತಿಭಟನೆ ಮಾಡುವಾಗ ಗೂಂಡಾಗಳು ವೈದ್ಯರ ಮೇಲೆ ಹಲ್ಲೆ ನಡೆಸಿರುವ ಕೃತ್ಯವೂ ಖಂಡನೀಯ. ವೈದ್ಯರ ಮೇಲೆ ಹಲ್ಲೆ ಮಾಡುವ ಜೊತೆಗೆ ಸಾಕ್ಷಿನಾಶಕ್ಕೆ ಪ್ರಯತ್ನ ನಡೆದಿದೆ. ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ.ಕಿಶನ್ ಭಾಗವತ್, ಡಾ.ರಾಜನಂದಿನಿ ಕಾಗೋಡು, ಡಾ.ಪುಟ್ಟಪ್ಪ ಬೇತೂರು, ಡಾ.ಶಿವಯೋಗಿ ಬಿ. ಮಂಡಕ್ಕಿ, ಡಾ.ರವಿಕಿರಣ್, ಡಾ.ಶಶಿಕುಮಾರ್, ಡಾ.ಪ್ರಸನ್ನ ಇನ್ನಿತರರು ಹಾಜರಿದ್ದರು.ಸೇವೆ ಸ್ಥಗಿತ: ವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಆಸ್ಪತ್ರೆಗಳಲ್ಲಿ ಆರೋಗ್ಯಸೇವೆ ಬಹುತೇಕ ಸ್ಥಗಿತವಾಗಿತ್ತು. ಉಪವಿಭಾಗೀಯ ಆಸ್ಪತ್ರೆಯಲ್ಲಿ ತುರ್ತು ಸೇವಾ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಸ್ಥಗಿತವಾಗಿತ್ತು. ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ಕೂಡ ಬಂದ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಓಪಿಡಿ ಬಂದ್ಆನಂದಪುರ: ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯಯ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಆಸ್ಪತ್ರೆಯಲ್ಲಿ ಓ.ಪಿ.ಡಿ ಸಂಪೂರ್ಣ ಬಂದ್ ಮಾಡಿದ್ದ ಕಾರಣ ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 250ಕ್ಕೂ ಹೆಚ್ಚು ಹೊರರೋಗಿಗಳು ವೈದ್ಯರ ಸೇವೆಯನ್ನು ಪಡೆಯುತ್ತಿದ್ದರು. ಆದರೆ ವೈದ್ಯರ ಮುಷ್ಕರ ದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಖಾಸಗಿ ವೈದ್ಯರ ಕ್ಲಿನಿಕ್ ಗಳನ್ನು ಬಂದ್ ಮಾಡಿದ್ದ ಕಾರಣ ರೋಗಿಗಳು ಪರದಾಡುವಂಥಾಗಿತ್ತು.