ಮೂಲಭೂತ ಸೌಲಭ್ಯಗಳಿಂದ ದೂರ ಉಳಿದ ಕೊಮ್ಮೆನಹಳ್ಳಿ

| Published : Aug 02 2024, 12:47 AM IST

ಸಾರಾಂಶ

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರಗಳು ನೇರವಾಗಿ ಪಂಚಾಯ್ತಿಗೆ ಅನುದಾನ ಕೊಡುತ್ತಿದ್ದರೂ ಆ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನರೇಗಾ ಯೋಜನೆಯಲ್ಲಿ ಸಹ ಚರಂಡಿ ಸೇರಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬಹುದು, ಆದರೆ ಯಾಕೆ ಅದು ಈ ಗ್ರಾಮದಲ್ಲಿ ಬಳಕೆಯಾಗುತ್ತಿಲ್ಲ.ಆದ್ದರಿಂದ ತಾಲೂಕು ಆಡಳಿತ ಇತ್ತ ಗಮನ ಹರಿಸಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದ ಸಮಸ್ಯೆಗಳಿಗೆ ಮುಕ್ತಿ ಎಂದು? । ಪಂಚಾಯ್ತಿಗೆ ಬರುವ ಅನುದಾನ ಯಾರ ಪಾಲಾಗ್ತಿದೆ?

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೇರವಾಗಿ ಗ್ರಾಪಂಗಳಿಗೆ ಕಲ್ಪಿಸುತ್ತಿದ್ದರೂ ಸಹ ಇಂದಿಗೂ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಗ್ರಾಮಸ್ಥರು ಸಮಸ್ಯೆಗಳಲ್ಲೇ ಜೀವನ ನಡೆಸುವಂತಾಗಿದೆ.

ಹೌದು! ತಾಲೂಕಿನ ಆಲಂಬಾಡಿ ಜೋತೇನಹಳ್ಳಿ ಗ್ರಾಪಂಯ ಕೊಮ್ಮೆನಹಳ್ಳಿ ಗ್ರಾಮವೇ ಇದಕ್ಕೆ ಸಾಕ್ಷಿ. ಈ ಗ್ರಾಮ ಪಟ್ಟಣಕ್ಕೆ ಸಮೀಪವಿದ್ದರೂ ಸಹ ಮೂಲಭೂತ ಅನುಕೂಲಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿರುವ ಜನರಲ್ಲಿ ಕೂಲಿ ಕಾರ್ಮಿಕರೇ ಅಧಿಕವಾಗಿದ್ದಾರೆ. ಇಲ್ಲಿನ ಜನರು ಬೆಳಗ್ಗೆ ಮನೆ ಬಿಟ್ಟು ಕೂಲಿ ಕೆಲಸಕ್ಕೆ ಹೋದರೆ ಮತ್ತೆ ಸಂಜೆ ಮನೆಗೆ ಬರುವರು, ವೃದ್ಧರು, ಮಕ್ಕಳು ಮಾತ್ರವಿರುವರು, ಗ್ರಾಮದಲ್ಲಿ ಏನು ನಡೆಯುತ್ತಿದೆ ಎಂಬುದು ಬಹುತೇಕ ಮಂದಿಗೆ ಅರಿವಿಲ್ಲ. ಅಷ್ಟರ ಮಟ್ಟಿಗೆ ಈ ಗ್ರಾಮದ ಜನರಿದ್ದಾರೆ.

ಗ್ರಾಮದಲ್ಲಿ ಸೂಕ್ತವಾದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆಯಂತೂ ಮೊದಲೇ ಇಲ್ಲ, ಬೀದಿ ದೀಪಗಳಿಲ್ಲ, ವಸತಿ ಯೋಜನೆ ಮನೆಗಳು ಈ ಗ್ರಾಮದ ಬಡವರಿಗೆ ದಕ್ಕುತ್ತಿಲ್ಲ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರೆಲ್ಲಾ ರಸ್ತೆಯ ಮೇಲೆಯೇ ಹರಿಯುವಂತಾಗಿದೆ. ಇದರಿಂದ ನಿತ್ಯ ಜನರು ಮೂಗು ಮುಚ್ಚಿಕೊಂಡೇ ಓಡಾಟ ಮಾಡುವಂತಾಗಿದೆ. ಮನೆಗಳ ಮುಂದೆ ಸಹ ಚರಂಡಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗುವಂತಾಗಿದೆ. ಸಮಸ್ಯೆಗಳ ಬಗ್ಗೆ ಜನರು ಧ್ವನಿ ಎತ್ತಿದಾಗ ಮಾತ್ರ ಅಧಿಕಾರಿಗಳು ಬಂದು ತಾತ್ಕಾಲಿಕ ಪರಿಹಾರ ನೀಡಿ ಹೋಗುವರೇ ವಿನಃ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕೊಮ್ಮೆನಹಳ್ಳಿ ಬೂದಿಕೋಟೆ ಮುಖ್ಯ ರಸ್ತೆಯಲ್ಲಿದ್ದು, ಚರಂಡಿ ನೀರೆಲ್ಲಾ ಮುಖ್ಯ ರಸ್ತೆಯಲ್ಲಿ ಹರಿಯುವಂತಾಗಿದೆ. ಕೊಳಚೆ ನೀರು ಹರಿದು ಡಾಂಬರು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಹ ಕೊಳಚೆ ನೀರಿನ ಮೇಲೆಯೇ ಹಾದು ಹೋಗಬೇಕು. ಒಮ್ಮೆ ಗ್ರಾಮಸ್ಥರ ದೂರಿನ ಮೇರೆಗೆ ಪಂಚಾಯಿತಿ ಅಧಿಕಾರಿಗಳು ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ತಾತ್ಕಾಲಿಕ ಪರಿಹಾರ ಕಲ್ಪಿಸಿ ಹೋದರು. ಆದರೆ ಈಗ ಮತ್ತೆ ಕೊಳಚೆ ನೀರು ಬೇರೆಡೆ ಹರಿಯಲು ಸ್ಥಳವಿಲ್ಲದೆ ರಸ್ತೆ ಮೇಲೆ ಹರಿಯುವಂತಾಗಿದೆ.

ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಕನಸಿನ ಮಾತಾಗಿದೆ, ಎಲ್ಲೆಂದರಲ್ಲಿ ಕಸ, ಗಿಡ-ಗಂಟಿಗಳು ಕಾಣಿಸಿಕೊಂಡು ನೋಡುಗರಿಗೆ ವಾಕರಿಕೆ ಬರುವಂತ ಸ್ಥಿತಿ ತಲೆ ದೂರಿದ್ದರೂ ಪಂಚಾಯ್ತಿ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ. ಗ್ರಾಮದ ಪಂಚಾಯ್ತಿ ಸದಸ್ಯರೂ ಸಮಸ್ಯೆಗಳ ಬಗ್ಗೆ ಗಮನ ಕೊಡುತ್ತಿಲ್ಲ, ಗ್ರಾಮಗಳ ಅಭಿವೃದ್ಧಿಗೆ ಸರ್ಕಾರಗಳು ನೇರವಾಗಿ ಪಂಚಾಯ್ತಿಗೆ ಅನುದಾನ ಕೊಡುತ್ತಿದ್ದರೂ ಆ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ನರೇಗಾ ಯೋಜನೆಯಲ್ಲಿ ಸಹ ಚರಂಡಿ ಸೇರಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬಹುದು, ಆದರೆ ಯಾಕೆ ಅದು ಈ ಗ್ರಾಮದಲ್ಲಿ ಬಳಕೆಯಾಗುತ್ತಿಲ್ಲ.ಆದ್ದರಿಂದ ತಾಲೂಕು ಆಡಳಿತ ಇತ್ತ ಗಮನ ಹರಿಸಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.