ಸಾರಾಂಶ
ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಹೆಚ್ಚಬೇಕು. ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಅನಾವರಣಗೊಳ್ಳಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿದೆ.
ಭಟ್ಕಳ: ತಾಲೂಕಿನ ಮಾರುಕೇರಿಯ ಎಸ್.ಪಿ. ಹೈಸ್ಕೂಲ್ ಆವರಣದಲ್ಲಿ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕೋಟಖಂಡ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ಕೋಣಾರ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಮಾರುಕೇರಿ ಗ್ರಾಪಂ ಉಪಾಧ್ಯಕ್ಷ ಎಂ.ಡಿ. ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಕ್ರೀಡಾ ಮನೋಭಾವ ಹೆಚ್ಚಬೇಕು. ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಅನಾವರಣಗೊಳ್ಳಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿದೆ. ಗ್ರಾಮಾಂತರ ಭಾಗದಲ್ಲಿ ಅನೇಕ ಕ್ರೀಡಾಪಟುಗಳಿದ್ದು, ಹಲವರು ಹಲವು ರೀತಿಯ ಸಾಧನೆ ಮಾಡಿದ್ದಾರೆ. ಇವರಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಲಭಿಸಬೇಕು ಎಂದರು.ಗ್ರಾಮೀಣ ಭಾಗದ ಕೋಣಾರದ ಪ್ರತಿಭಾವಂತೆ ಕಾವ್ಯ ಗೊಂಡ ಅವರು ಪ್ರಬಂಧ ಮಂಡಿಸಲು ಅಮೆರಿಕಕ್ಕೆ ಹೋಗಿರುವುದು ಶ್ಲಾಘನೀಯ ಎಂದರು.
ಬಿಇಒ ವೆಂಕಟೇಶ ನಾಯಕ ಮಾತನಾಡಿ, ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಗ್ರಾಮಾಂತರ ಭಾಗದಲ್ಲಿ ದಾನಿಗಳ ಸಹಕಾರದಿಂದ ಉತ್ತಮ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಆಡುವುದರ ಮೂಲಕ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.
ಮಾರುಕೇರಿ ಎಸ್.ಪಿ. ಹೈಸ್ಕೂಲಿನ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್. ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ಕೋಟಖಂಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ, ಕೋಟಖಂಡ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣಾ ಹೆಬ್ಬಾರ, ಗ್ರಾಪಂ ಸದಸ್ಯರಾದ ಮಾಸ್ತಿ ಗೊಂಡ, ನಾರಾಯಣ ಗೊಂಡ, ಮೋಹಿನಿ ಗೊಂಡ, ನಾಗವೇಣಿ ಮೊಗೇರ, ಎಸ್.ಪಿ. ಹೈಸ್ಕೂಲಿನ ಮುಖ್ಯ ಶಿಕ್ಷಕ ಪಿ.ಟಿ. ಚವ್ಹಾಣ ಮುಂತಾದವರಿದ್ದರು.ಕೋಟಖಂಡ ಶಾಲೆಯ ಮುಖ್ಯಶಿಕ್ಷಕ ಚಿದಾನಂದ ಪಟಗಾರ ಸ್ವಾಗತಿಸಿ, ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ಪಟಗಾರ ವಂದಿಸಿದರು.