ದೇಶದ ಪಶ್ಚಿಮ ಕರಾವಳಿ ಉದ್ದಕ್ಕೂ ವ್ಯಾಪಿಸಿದ ಕೊಂಕಣ ಖಾರ್ವಿ ಸಮಾಜ : ರಾಜಗೋಪಾಲ ಅಡಿ ಗುರೂಜಿ

| N/A | Published : Mar 09 2025, 01:52 AM IST / Updated: Mar 09 2025, 08:15 AM IST

ಸಾರಾಂಶ

ಕೊಂಕಣಖಾರ್ವಿ ಸಮಾಜವು ದೇಶದ ಪಶ್ಚಿಮ ಕರಾವಳಿ ಉದ್ದಕ್ಕೂ ವ್ಯಾಪಿಸಿದೆ ಎಂದು ಗೋಕರ್ಣದ ಆನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಹೇಳಿದರು.

ಗೋಕರ್ಣ: ಕೊಂಕಣಖಾರ್ವಿ ಸಮಾಜವು ದೇಶದ ಪಶ್ಚಿಮ ಕರಾವಳಿ ಉದ್ದಕ್ಕೂ ವ್ಯಾಪಿಸಿದೆ ಎಂದು ಗೋಕರ್ಣದ ಆನುವಂಶೀಯ ಉಪಾಧಿವಂತ ಮಂಡಲದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಹೇಳಿದರು.

ಅವರು ಅಖಿಲ ಭಾರತ ಕೊಂಕಣಿಖಾರ್ವಿ ಸಮಾಜದ ಆಶ್ರಯದಲ್ಲಿ 10ನೇ ವರ್ಷದ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದ ಬಹುಮಾನ ವಿತರಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಂಕಣಿ ಖಾರ್ವಿ ಸಮಾಜದವರು ಸಮುದ್ರದ ಮೀನುಗಾರಿಕೆಯಲ್ಲಿ ಅನಾದಿ ಕಾಲದಿಂದಲೂ ಪಳಗಿದವರಾಗಿದ್ದಾರೆ. ಖಾರ್ವಿ ಎಂಬ ಶಬ್ದವು ಸಂಸ್ಕೃತದ "ಕ್ಷಾರ " ಎಂಬ ಶಬ್ದದಿಂದ ಉತ್ಪನ್ನವಾಗಿದೆ, "ಕ್ಷಾರ ಎಂದರೆ ಉಪ್ಪು ". ಉಪ್ಪು ನೀರಲ್ಲಿ ಅರ್ಥಾತ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರೇ ಖಾರ್ವಿಗಳೆಂದು ಹೆಸರಾಗಿದ್ದಾರೆ ಎಂದು ಹೇಳಿದರು.

ಖಾರ್ವಿಗಳು ಕರ್ನಾಟಕದ ಸಮುದ್ರ ತೀರದಲ್ಲಿ ಮಾತ್ರವಲ್ಲದೆ, ಉತ್ತರದಲ್ಲಿ ಗೋವಾ, ಮಹಾರಾಷ್ಟ್ರ, ಗುಜರಾತ ರಾಜ್ಯಗಳಲ್ಲೂ ಹಾಗೂ ದೇಶದ ಆಚೆಯ ಪಶ್ಚಿಮ ಕಡಲ ತೀರದಲ್ಲೂ ಇದ್ದಾರೆ. ಅವರು ಸಹ ತಮ್ಮನ್ನು ಖಾರ್ವಿ ಸಮಾಜದವರೆಂದೇ ಗುರುತಿಸಿಕೊಂಡಿರುವುದರ ಬಗ್ಗೆ ಅಧ್ಯಯನದಿಂದ ತಿಳಿದು ಬಂದಿದೆ. ಸಮಾಜದ ವಿಶಾಲ ವಿಸ್ತಾರದಂತೆಯೇ ಆರ್ಥಿಕ ಮತ್ತು ಸಾಮಾಜಿಕ ಹೆಚ್ಚಿನ ಪ್ರಗತಿ ಹೊಂದುವಂತಾಗಬೇಕು ಎಂದರು.

ದೇಹ ಚೈತನ್ಯಕ್ಕೆ ಕ್ರೀಡೆ ಅತ್ಯಾವಶ್ಯ ಅಂತೆಯೇ ಉತ್ತಮ ಸಮಾಜ ನಿರ್ಮಾಣಕ್ಕೆ ದುರ್ವೇಸನ ದುಶ್ಚಟಗಳು ಹಾಗೂ ಈಗ ಕ್ರೀಡೆಯಲ್ಲಿ ಹೆಚ್ಚುತ್ತಿರುವ ಬೆಟ್ಟಿಂಗ್‌ನಂತಹ ಅನಿಷ್ಟಗಳಿಂದ ಯುವಕರು ದೂರವಿರುವುದು ಅಷ್ಟೇ ಅವಶ್ಯ. ಮೀನುಗಾರ ಸಮಾಜದ ಅಭ್ಯುದಯಕ್ಕಾಗಿ ಮೀನುಗಾರಿಕೆ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳಿದ್ದು ಅದರ ಪ್ರಯೋಜನವನ್ನು ಸಮಾಜ ಸಂಪೂರ್ಣ ಪಡೆಯುವಂತಾಗಬೇಕು. ಸರ್ಕಾರದ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಇಂದಿನ ಯುವಕರ ಮೇಲಿದೆ. ಅವರಿಗೆ ಸದಾ ಸೂಕ್ತ ಮಾರ್ಗದರ್ಶನ,ಮತ್ತು ಎಲ್ಲ ರೀತಿಯ ಸಹಾಯ ನೀಡಲು ಬದ್ದ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡುಮಸ್ಕೇರಿ ಗ್ರಾಪಂ ಅಧ್ಯಕ್ಷ ಈಶ್ವರ ವಿ.ಗೌಡ ವಹಿಸಿದ್ದರು.

ಈ ವೇಳೆ ಗ್ರಾಪಂ ಸದಸ್ಯರಾದ ರಾಜೇಶ ನಾಯಕ, ದಯಾನಂದ ಮೆಥಾ, ನಾಗರಾಜ ತಾಂಡೇಲ್, ರೋಹಿಣಿ ನಾಯ್ಕ, ಚಂದ್ರಶೇಖರ ನಾಯ್ಕ, ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಶ್ರೀನಿವಾಸ ನಾಯಕ, ನಾರಾಯಣ ಎಂ ತಾಂಡೇಲ ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಭಜರಂಗಿ ಬಾಯ್ಸ್ ಬೆಳಂಬರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ರನ್ನರ್‌ಅಪ್ ಪ್ರಶಸ್ತಿಯನ್ನು ಮಂಡದ ಮನೆ ಗಂಗೆಕೊಳ್ಳ ತನ್ನದಾಗಿಸಿಕೊಂಡಿತು. ಮಂಜುಗೌಡ ಕಾರ್ಯಕ್ರಮ ನಿರ್ವಹಿಸಿದರು.