ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 2025ನೇ ಸಾಲಿನ ಕೊಂಕಣಿ ಗೌರವ ಪ್ರಶಸ್ತಿ ಮತ್ತು ಕೊಂಕಣಿ ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಿರಂತರ ಉದ್ಯಾವರ ಮತ್ತು ಪರಿಚಯ ಪಾಂಬೂರು ಸಂಸ್ಥೆಯ ಸಹಕಾರದೊಂದಿಗೆ ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ರೇವಿಯರ್ ಚರ್ಚ್ ವಠಾರದಲ್ಲಿ ಭಾನುವಾರ ನಡೆಯಿತು.

ಉಡುಪಿ ಕಥೋಲಿಕ್ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮ ಉದ್ಘಾಟಿಸಿ, ಕೊಂಕಣಿ ಭಾಷೆ, ಸಾಹಿತ್ಯ, ಜನಪದ ಪ್ರಕಾರಗಳನ್ನು ಬೆಳೆಸಲು ಕೊಂಕಣಿ ಅಕಾಡೆಮಿ ಒತ್ತು ನೀಡುತ್ತಿದೆ. ಕೊಂಕಣಿ ಲೇಖಕರು ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುವ ಮೂಲಕ ಭಾಷೆ ಉತ್ತುಂಗಕ್ಕೆ ಏರಿಸಿದ್ದಾರೆ. ಕೊಂಕಣಿ ಸಮಾನತೆಯ ಭಾಷೆಯಾಗಿದ್ದು, ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರೂ ಕೊಂಕಣಿ ಮಾತನಾಡುತ್ತಾರೆ ಎಂದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಪ್ಯಾನಿ ಅಲ್ವಾರಿಸ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರು ಚಾರ್ಲ್ಸ್ ಮಿನೇಜಸ್, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕೇವಿಯರ್ ಚರ್ಚ್ ಧರ್ಮಗುರು ಅನಿಲ್ ಡಿಸೋಜ, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ., ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಪ್ನಾ ಕ್ರಾಸ್ತಾ, ಸುನಿಲ್ ಆಂಟನಿ ಸಿದ್ದಿ, ದಯಾನಂದ ಮಡೇಕರ್ ಭಾಗವಹಿಸಿದ್ದರು.

ಜೋಕಿಂ ಸ್ನಾನಿ ಅಲ್ವಾರಿಸ್ ಸ್ವಾಗತಿಸಿದರು. ಪ್ರಕಾಶ್ ನೊರೋನ್ನಾ ನಿರೂಪಿಸಿದರು. ಸಿದ್ದಿ ಸಮುದಾಯ ನೃತ್ಯ, ಕುಡುಬಿ ನೃತ್ಯ, ಖಾರ್ವಿ ನೃತ್ಯ ಬ್ರಾಸ್ ಬ್ಯಾಂಡ್, ಕೊಂಕಣಿ ಸಂಗೀತ ರಸಮಂಜರಿ ಜರುಗಿತು.

ಗೌರವ ಪ್ರಶಸ್ತಿ ಪುರಸ್ಕೃತರು: ಕೊಂಕಣಿ ಅಕಾಡೆಮಿ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ರೊನ್ ರೊಚ್ ಕಾಸ್ತಿಯಾ ಅವರಿಗೆ, ಕೊಂಕಣಿ ಕಲಾ ಪ್ರಶಸ್ತಿಯನ್ನು ರಾಮ್’ದಾಸ್ ದತ್ತಾತ್ರೇಯ ಗುಲ್ವಾಡಿ ಅವರಿಗೆ, ಕೊಂಕಣಿ ಜಾನಪದ ಪ್ರಶಸ್ತಿಯನ್ನು ಸೈರು ಪುತ್ತು ನಾಯ್ಕ ಅವರಿಗೆ ತಲಾ 50 ಸಾವಿರ ರು. ನಗದು ಸಹಿತ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.


ಕೊಂಕಣಿ ಪುಸ್ತಕ ಪುರಸ್ಕೃತರು: ಕೊಂಕಣಿ ಪುಸ್ತಕ ಪುರಸ್ಕಾರವನ್ನು ಕವಿತಾ ವಿಭಾಗದಲ್ಲಿ ಅಂಡ್ರೂ ಎಲ್. ಡಿಕುನ್ಹಾ ಅವರಿಗೆ, ಲೇಖನ ವಿಭಾಗದಲ್ಲಿ ರೋಶನ್ ಮೆಲ್ವಿ ಸಿಕ್ಕೇರ ಅವರಿಗೆ, ಸಣ್ಣ ಕತೆಗಳು ವಿಭಾಗದಲ್ಲಿ ರಿಚಾರ್ಡ್ ಅಲ್ವಾರಿಸ್ ಅವರಿಗೆ ತಲಾ 25 ಸಾವಿರ ರು. ನಗದು ಸಹಿತ, ಫಲಕದೊಂದಿಗೆ ನೀಡಿ ಗೌರವಿಸಲಾಯಿತು.