ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನನ್ನ ಜೀವನದಲ್ಲಿ ಎಷ್ಟೋ ಪ್ರಮುಖ ಘಟನೆಗಳು ನಡೆದಿವೆ. ಕ್ರೈಸ್ತರಿಗೆ, ಮುಸ್ಲಿಮರಿಗೆ ಬೇರೆ ಬೇರೆ ತೀರ್ಥ ಕ್ಷೇತ್ರಗಳಿದ್ದರೆ, ಶರಣರಿಗೆ ಕೂಡಲಸಂಗಮ ತೀರ್ಥ ಕ್ಷೇತ್ರವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.ಕೂಡಲಸಂಗಮದಲ್ಲಿ ನಡೆದ 37ನೇ ಶರಣಮೇಳದಲ್ಲಿ ರಾಷ್ಟ್ರಮಟ್ಟದ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಪ್ರಶಸ್ತಿ ಕೊಡುತ್ತಾರೆ ಎಂದರೆ ಅದು ಜಿಲ್ಲೆಯ ಸುದ್ದಿ. ರಾಷ್ಟ್ರದಲ್ಲಿ ಸುದ್ದಿಯಾಗುವುದು ರಾಷ್ಟ್ರೀಯ ಪ್ರಶಸ್ತಿ ಆಗುತ್ತದೆ. ಇವತ್ತು ರಾಷ್ಟ್ರದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಪ್ರಶಸ್ತಿಗೆ ರಾಷ್ಟ್ರೀಯತೆ ಹೇಗೆ ಬಂತು ಎಂದರೆ, ಕಾವೇರಿ, ನರ್ಮದಾ ನದಿ ಕೂಡಲು ಆಗಲ್ಲ. ಈ ಸಮಾಜದ ದಿಟ್ಟ ಮಹಿಳೆ, ಮೇಧಾ ಪಾಟ್ಕರ್ ಅವರು ಬಂದಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದ ಇಂಬು ಬಂದಿದೆ ಎಂದು ಬಣ್ಣಿಸಿದರು.
ನಮ್ಮ ದೇಶದಲ್ಲಿ ನದಿಗಳಿಗೆ ಹೆಣ್ಣು ಮಕ್ಕಳ ಹೆಸರಿದೆ. ಈ ಸಮಾಜದ ದಿಟ್ಟ ಮಹಿಳೆ ಮೇಧಾ ಪಾಟ್ಕರ್ ಬಂದಿರುವುದರಿಂದ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದ ಇಂಬು ಬಂದಿದೆ ಎಂದ ಹಂಸಲೇಖ, ನರ್ಮದೆಯಿಂದ ಬಂದಿರುವ ಮೇಧಾ ಪಾಟ್ಕರ್ ಸಹ ಒಬ್ಬ ಹೆಣ್ಣು ಎಂದರು.ಮಾತಾಜಿ ಅವರು ಬಸವ ವಚನಾಮೃತ ಎಂಬ ಗ್ರಂಥ ಕೊಟ್ಟರು. ಆ ಗ್ರಂಥ ಶರಣರ ಬೈಬಲ್ ಇದ್ದಂತೆ. ಅದು ವಚನಗಳ ತತ್ವದ ಹೃದಯಗ್ರಂಥ. ನಾವು ಯಾರು? ಶರಣರ ಮೂಲ ಯಾವುದು. ಇವರು ಎಲ್ಲಿಂದ ಬಂದರು, ಎಂಬ ಮಾತು ಬಂತು, ಕಾಳಿಯ ಕಂಕಾಳ, ಅರಿಹಿರಂಚಿಗಳಗಿಂತ ಮುನ್ನ, ಮಾಹಾ ಗುರುವೇ ಕೂಡಲಸಂಗಮ ದೇವ ಎಂದು ಆ ವಚನಕ್ಕೆ ಮಾತೆ ಮಾದೇವಿಯವರು ವಾಖ್ಯಾನ ಬರೆದರು. ಶರಣರ ಮೂಲ ಅತ್ಯಂತ ಪುರಾತನ ಸಂಸ್ಕೃತಿಯಾದ ಹರಪ್ಪ, ಮೆಹೆಂಜೋದಾರೋದಲ್ಲಿದೆ. ಹರಪ್ಪ ಮೆಹೆಂಜೋದಾರೋ ಶರಣರ ತಾಣ. 7 ಸಾವಿರ ವರ್ಷಗಳ ಹಿಂದಿನ ಇತಿಹಾಸವಿದೆ. ಶರಣರು ಧೈರ್ಯವಾಗಿರಿ, ಸನಾತನ ಎಂದರೆ ಮೂರು ಸಾವಿರ ವರ್ಷಗಳ ಇತಿಹಾಸವಾದರೆ, ಶರಣ ಎಂದರೆ 7 ಸಾವಿರ ವರ್ಷಗಳ ಇತಿಹಾಸವಾಗಿದೆ. ಹರಪ್ಪದಲ್ಲಿದ್ದ ಕಪ್ಪು ತಲೆಯವರು ಲಿಂಗಕ್ಕೆ ಅಡಿಪಾಯ ಹಾಕಿದವರು ಶರಣರು ಎಂದು ಮಾತಾಜಿ ವ್ಯಾಖ್ಯಾನ ಮಾಡಿದ್ದಾರೆ ಎಂದರು.
ದಲಿತ, ಶೋಷಿತರಿಗೆ ಒಂದು ಪುಸ್ತಕವಿಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು ಎಂದು ಯುಕ್ತಾಭಾಯಿ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಬ್ರಾಹ್ಮಣರಿಗೆ ವೇದಗಳಿವೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರಾನ್ ಇದೆ, ನಮ್ಮ ಹಿಂದುಳಿದವರಿಗೆ ಒಂದು ಪುಸ್ತಕ ಕೊಡು ಎಂದು ಕೇಳಿದರು. ಆ ಜ್ಞಾನದ ಪುಸ್ತಕವೇ ಈ ವಚನಾಮೃತ. ವಚನಾಮೃತ ಶರಣರ ಬೈಬಲ್ ಎಂದು ಹಂಸಲೇಖ ವ್ಯಾಖ್ಯಾನಿಸಿದರು.ಈ ಮಹಿಣಿಯರು ಕರೆದರೆ ಇಲ್ಲಿ ಬಂದು ದುಡಿಯುತ್ತೇನೆ. ಪ್ರತಿ ವಚನ ಚಿನ್ನದ ಗಟ್ಟಿ, ಅದಕ್ಕೆ ಗಟ್ಟಿಯಾಗಿದೆ ನಮ್ಮೂರಿನ ಆಲಮಟ್ಟಿ. ಏಷ್ಯಾದ ಅತೀ ದೊಡ್ಡ ಜಲಾಶಯ ಆಲಮಟ್ಟಿ. 26 ಬಾಗಿಲುಗಳ ಮಹಾ ಗಂಗೆ. ಈ ವಿಚಾರಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ ಏಕೆ ? ಎಂದು ಪ್ರಶ್ನಿಸಿದ ಹಂಸಲೇಖ ಆ 26 ಬಾಗಿಲು ಬಸವನ ಬಾಗಿಲು. ಬಸವ ನಮಗೆ ಭಾಗ್ಯಗಳನ್ನು ಕೊಟ್ಟ ಮಹಾ ಸಂತ. ಅದರ ಬಗೆಗಿನ ನಾಲ್ಕು ಹಾಡು ಮಾಡಿದ್ದೇನೆ. ಈ ತೆಂಕಣದ ಕ್ಷೇತ್ರಕ್ಕೆ ಬಂದು ಬಿಡುಗಡೆ ಮಾಡುವವನಿದ್ದೇನೆ ಎಂದು ಹೇಳಿದರು.