ಪ್ರಯಾಣಿಕರಿಗೆ ಸುರಕ್ಷಿತವಲ್ಲದ ತಾಣ ಕೊಪ್ಪ ಬಸ್‌ನಿಲ್ದಾಣ

| Published : Jul 23 2024, 12:32 AM IST

ಸಾರಾಂಶ

ಕೊಪ್ಪ, ಶೃಂಗೇರಿ, ನ.ರಾ.ಪುರ, ಕೊಪ್ಪ ಈ ಮೂರೂ ತಾಲೂಕುಗಳನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ಮುಖ್ಯ ಕೇಂದ್ರವಾದ ಕೊಪ್ಪದಲ್ಲಿ ನಿರ್ಮಾಣಗೊಂಡ ಬಸ್‌ನಿಲ್ದಾಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಲುಕಿ ಕುಸಿಯುವ ಹಂತ ತಲುಪಿದೆ.

- ಸೋರುತಿಹುದು ಮಾಳಿಗೆ

- ತುಕ್ಕು ಹಿಡಿದು ನೇತಾಡುತ್ತಿರುವ ನಿಲ್ದಾಣದ ಕಂಬಗಳು । ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ

ಹಮೀದ್ ಕೊಪ್ಪಕನ್ನಡಪ್ರಭ ವಾರ್ತೆ, ಕೊಪ್ಪ

ಶೃಂಗೇರಿ, ನ.ರಾ.ಪುರ, ಕೊಪ್ಪ ಈ ಮೂರೂ ತಾಲೂಕುಗಳನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ಮುಖ್ಯ ಕೇಂದ್ರವಾದ ಕೊಪ್ಪದಲ್ಲಿ ನಿರ್ಮಾಣಗೊಂಡ ಬಸ್‌ನಿಲ್ದಾಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಲುಕಿ ಕುಸಿಯುವ ಹಂತ ತಲುಪಿದೆ. ಸಾರ್ವಜನಿಕ ವಲಯದಲ್ಲಿ ಪ್ರಯಾಣಿಕರಿಗೆ ಸುರಕ್ಷಿತವಲ್ಲದ ತಾಣ ಕೊಪ್ಪ ಬಸ್‌ನಿಲ್ದಾಣ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ. ಬಸ್‌ನಿಲ್ದಾಣದ ಕಂಬಗಳು ಈಗಾಗಲೇ ತುಕ್ಕು ಹಿಡಿದು ನೇತಾಡುತ್ತಿದ್ದು ಈಗಲೋ ಆಗಲೋ ಬೀಳುವಂತಿದೆ. ಮಳೆ ಸುರಿ ಯುತ್ತಿರುವಾಗ ಬಸ್‌ನಿಲ್ದಾಣದ ಒಳಗೆ ನಿಂತವರ ಮೇಲೆ ಮಳೆಗಿಂತಲೂ ಜೋರಾದ ಹನಿಗಳು ತೊಟ್ಟಿಕ್ಕುತ್ತಿವೆ. ಮೇಲ್ಛಾವಣಿ ಸಂಪೂರ್ಣವಾಗಿ ಸೋರುತ್ತಿದೆ. ಬಸ್‌ನಿಲ್ದಾಣದ ಒಳಗಿರುವ ಅಂಗಡಿಮಳಿಗೆಗಳು ಮತ್ತು ಹೋಟೆಲ್ ಸೋರುತ್ತಿದ್ದು ಅಂಗಡಿ ಮಳಿಗೆ ಮೇಲ್ಛಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿವೆ. ಅಂಗಡಿ ಮಳಿಗೆಯವರು ಸೋರುತ್ತಿರುವ ಮಳೆ ನೀರನ್ನು ಬಕೆಟ್‌ನಲ್ಲಿ ಹಿಡಿದು ಹೊರಹಾಕುತ್ತಿದ್ದಾರೆ. ಸಹಸ್ರಾರು ರು. ಬಾಡಿಗೆ ಕಟ್ಟುತ್ತಿದ್ದರೂ ಸೋರುವ ಮಳಿಗೆಯಲ್ಲಿ ದಿನ ದೂಡಬೇಕಾಗಿದೆ. ಬಸ್‌ ನಿಲ್ದಾಣಕ್ಕೆ ಅಳವಡಿಸಿದ ಟೈಲ್ಸ್ ಗಳು ಅಲ್ಲಲ್ಲಿ ಕಿತ್ತು ಹೋಗಿದೆ. ಬಸ್‌ನಿಲ್ದಾಣದ ಮುಂಭಾಗದಲ್ಲಿ ಪಪಂ ಯವರೇ ನಿರ್ಮಿಸಿ ಬಾಡಿಗೆ ನೀಡಿದ ಮಳಿಗೆಗಳು ಸಹ ಸೋರುತ್ತಿದ್ದು ವ್ಯಾಪಾರಿಗಳು ಕಷ್ಟ ಅನುಭವಿಸುವಂತಾಗಿದೆ. ಇತರೆಡೆ ಬಸ್‌ನಿಲ್ದಾಣಗಳಲ್ಲಿ ಬಸ್ಸುಗಳ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳಿದ್ದರೆ ಕೊಪ್ಪ ಬಸ್‌ನಿಲ್ದಾಣದಲ್ಲಿ ಮಾತ್ರ ಆಗಮನ, ನಿರ್ಗಮನಕ್ಕೆ ಒಂದೇ ದ್ವಾರವಿದ್ದು ಬಸ್ಸುಗಳ ಓಡಾಟಕ್ಕೆ ಕಷ್ಟವಾಗುತ್ತಿದೆ. ಇದರ ನಡುವೆಯೇ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕ ಬಸ್ಸು ಗಳಿಗಿಂತಲೂ ಖಾಸಗಿ ವಾಹನಗಳಾದ ಕಾರು, ಬೈಕುಗಳು ಹೆಚ್ಚಾಗಿ ನಿಲ್ಲುತ್ತಿದ್ದು ಬಸ್ ತಿರುಗಿಸಲು ಸ್ಥಳವಿಲ್ಲದಂತಾಗಿದೆ. ಕೊಪ್ಪ ಬಸ್‌ನಿಲ್ದಾಣ ನೂರಾರು ಸಮಸ್ಯೆಗಳಲ್ಲಿ ಸಿಲುಕಿ ನಲುಗುತ್ತಿದ್ದರೂ ಕಾಯಕಲ್ಪ ನೀಡಲು ಪಪಂ ಹಾಗೂ ಜನ ಪ್ರತಿನಿಧಿಗಳು ಮುಂದಾಗುತ್ತಿಲ್ಲ. ಕೊಪ್ಪ ಪಪಂನಲ್ಲಿ ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅಧಿಕಾರವಿಲ್ಲದೆ ಪಪಂ ಮುಖ್ಯಾಧಿಕಾರಿಗಳು, ಹಾಗೂ ತಹಸೀಲ್ದಾರರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಸ್ಯೆಗಳನ್ನು ಹತ್ತಾರು ಬಾರಿ ಇವರ ಗಮನಕ್ಕೆ ತಂದರೂ ಸ್ಪಂದನೆ ನೀಡುತ್ತಿಲ್ಲ. ಬಸ್‌ನಿಲ್ದಾಣದ ಒಳಗಿನ ಮತ್ತು ಆವರಣದ ಮಳಿಗೆ ವ್ಯಾಪಾರಸ್ಥರು ಬಸ್ ಮಾಲೀಕರು ಮತ್ತು ಏಜೆಂಟರು ಪ್ರತಿನಿತ್ಯವೂ ಎಂಬಂತೆ ಬಸ್‌ನಿಲ್ದಾಣದ ಸಮಸ್ಯೆ ಬಗ್ಗೆ ನಮ್ಮಲ್ಲಿ ದೂರುತ್ತಿದ್ದಾರೆ. ಆದರೂ ನಾವೇನು ಮಾಡುವಂತಿಲ್ಲ ಎಂದು ಈ ಭಾಗದ ಪಪಂ ಸದಸ್ಯರಾದ ವಿಜಯ್ ಕುಮಾರ್, ರಶೀದ್, ಮೈತ್ರಾಗಣೇಶ್, ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ. --ಕೋಟ್‌--

ಬಸ್‌ನಿಲ್ದಾಣ ನಿರ್ಮಾಣವಾಗಿ ೨೫ ವರ್ಷಗಳಾಗುತ್ತಾ ಬಂದಿದ್ದರೂ ಈವರೆಗೂ ನಿರ್ವಹಣೆ ಇಲ್ಲದೆ ಬಸ್‌ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದೆ. ಹತ್ತಾರು ಗ್ರಾಮ ಮತ್ತು ಹಳ್ಳಿಗಳಿಂದ ಬರುವ ಬಸ್ ಪ್ರಯಾಣಿಕರು ಒಂದಲ್ಲ ಒಂದು ರೀತಿಯಲ್ಲಿ ಬಸ್‌ನಿಲ್ದಾಣದ ಆಶ್ರಯವನ್ನು ಪಡೆಯಲೇ ಬೇಕಾಗುತ್ತದೆ. ಮಲೆನಾಡಿನ ತೀವ್ರ ಮಳೆಗಾಳಿಯ ನಡುವೆ ಸೋರುತ್ತಿರುವ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರು ಆಶ್ರಯ ಪಡೆಯುವುದನ್ನು ಕಂಡಾಗ ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಪಪಂ ಆಡಳಿತಾಧಿಕಾರಿಗಳು ಮತ್ತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಬಸ್‌ನಿಲ್ದಾಣದ ದುರಸ್ಥಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು.-ಜನಾರ್ಧನ ನಾಯಕ್, ಅಧ್ಯಕ್ಷರು, ಪೌರಗಣೇಶೋತ್ಸವ ಸಮಿತಿ ಹಾಗೂ ಬಸ್ ಮಾಲೀಕರು