ಕೊಪ್ಪತಾಲೂಕಿನ ಚಾವಲ್ಮನೆ ಗ್ರಾಪಂ ವ್ಯಾಪ್ತಿಯ ಕುಡ್ಪಳ್ಳಿ ಪ್ರದೇಶದಲ್ಲಿ ಸ್ಥಳೀಯರು ಮಾಸ್ತಿಬನ ಎಂದು ಪೂಜಿಸಿ, ಸಂರಕ್ಷಿಸುತ್ತಿರುವ ಸ್ಥಳದಲ್ಲಿ ಸ್ಮಾರಕಶಿಲ್ಪವನ್ನು ನಾಗಭೂಷಣರಾವ್ ಹಾಲ್ಮುತ್ತೂರು ಅವರ ಪ್ರಾಥಮಿಕ ಮಾಹಿತಿ ಮೇರೆಗೆ ಇತಿಹಾಸ ಮತ್ತು ಪುರಾತತ್ವ್ತಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅಧ್ಯಯನಕ್ಕೆ ಒಳಪಡಿಸಿದ್ದಾರೆ.

೧೫-೧೬ನೇ ಶತಮಾನಕ್ಕೆ ಸೇರಿದ ವೀರಮಾಸ್ತಿಕಲ್ಲು: ನ. ಸುರೇಶ ಕಲ್ಕೆರೆ

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಚಾವಲ್ಮನೆ ಗ್ರಾಪಂ ವ್ಯಾಪ್ತಿಯ ಕುಡ್ಪಳ್ಳಿ ಪ್ರದೇಶದಲ್ಲಿ ಸ್ಥಳೀಯರು ಮಾಸ್ತಿಬನ ಎಂದು ಪೂಜಿಸಿ, ಸಂರಕ್ಷಿಸುತ್ತಿರುವ ಸ್ಥಳದಲ್ಲಿ ಸ್ಮಾರಕಶಿಲ್ಪವನ್ನು ನಾಗಭೂಷಣರಾವ್ ಹಾಲ್ಮುತ್ತೂರು ಅವರ ಪ್ರಾಥಮಿಕ ಮಾಹಿತಿ ಮೇರೆಗೆ ಇತಿಹಾಸ ಮತ್ತು ಪುರಾತತ್ವ್ತಸಂಶೋಧನಾರ್ಥಿ ನ. ಸುರೇಶ ಕಲ್ಕೆರೆ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅಧ್ಯಯನದ ಮೂಲಕ ಸ್ಥಳೀಯರು ಮಾಸ್ತಿಯಮ್ಮ ಎಂದು ಕರೆದು ಪೂಜಿಸುತ್ತಿರುವ ಈ ಶಿಲ್ಪ ೧೫-೧೬ನೇ ಶತಮಾನಕ್ಕೆ ಸೇರಿದ ವೀರಮಾಸ್ತಿಕಲ್ಲಾಗಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯ ಪಟ್ಟಿದ್ದಾರೆ. ಈ ವೀರಮಾಸ್ತಿಕಲ್ಲು ನೆಲದಿಂದ ಸುಮಾರು ೩ ಅಡಿ ಎತ್ತರ ಹಾಗೂ ೨ ಅಡಿ ಅಗಲವಾಗಿದ್ದು, 2 ಪಟ್ಟಿಕೆಗಳನ್ನು ಹೊಂದಿದೆ. ಮೊದಲ ಅಥವಾ ಕೆಳಗಿನ ಪಟ್ಟಿಕೆ ಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರ ಹಾಗೂ ಆತನ ಸತಿ ಪದ್ಮಾಸನದಲ್ಲಿ ಕೈಮುಗಿದು ಕುಳಿತಿರುವಂತೆ ತೋರಿಸಲಾಗಿದೆ. ಈ ಪಟ್ಟಿಕೆಯಲ್ಲಿಯೇ ಬಿಲ್ಲು ಬಾಣ ಹಿಡಿದು ಹೋರಾಟ ಮಾಡುತ್ತಿರುವ ವೀರ ಹಾಗೂ ಇದರ ಪಕ್ಕದಲ್ಲೆ ರಾಜ ಕತ್ತಿ ತೋರಿಸಲಾಗಿದ್ದು, ವೀರನು ರಾಜನ ಪರವಾಗಿ ಯುದ್ಧದಲ್ಲಿ ಹೋರಾಡಿ ಮರಣ ಹೊಂದಿದ್ದು ಹಾಗೂ ಈತನ ಮರಣ ವಿಚಾರ ತಿಳಿದ ಆತನ ಪತ್ನಿ ಸ್ವಇಚ್ಛೆಯಿಂದ ಪ್ರಾಣತ್ಯಾಗ ಮಾಡಿ ವೀರಮಾಸ್ತಿ ಎನಿಸಿ ಕೊಂಡಿದ್ದಾಳೆ ಎಂಬುದನ್ನು ಕೆತ್ತನೆ ಮೂಲಕ ತೋರಿಸಲಾಗಿದೆ. ಸತಿ ತನ್ನ ಕೈಯಲ್ಲಿ ನಿಂಬೆ ಹಿಡಿದಿರುವುದನ್ನು ಕಾಣಬಹುದು.2ನೇ ಪಟ್ಟಿಕೆ ಅಥವಾ ಮೇಲ್ಭಾಗದ ಪಟ್ಟಿಕೆ ಮಧ್ಯದಲ್ಲಿ ಶಿವಲಿಂಗ,ಇದಕ್ಕೆ ಗಜಗಳು ಕುಂಭಾಭಿಷೇಕ ಮಾಡುವ ಹಾಗೂ ಶಿವಲಿಂಗದ ಮುಂಭಾಗ ಶಿವನ ವಾಹನ ನಂದಿ ತೋರಿಸಲಾಗಿದೆ. ರಾಜ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ವೀರನ ಬಲಿದಾನ ಹಾಗೂ ತನ್ನ ಪತಿಗೆ ಜೀವ ತ್ಯಾಗ ಮಾಡಿದ ಸತಿ ಅಜರಾಮರ ವಾಗಿರಬೇಕೆಂದು ಸೂರ್ಯ-ಚಂದ್ರರ ಕೆತ್ತನೆ ಮಾಡಲಾಗಿದೆ.ಈ ವೀರಮಾಸ್ತಿ ಕಲ್ಲಿನ ತಳಭಾಗದಲ್ಲಿ ಮಣ್ಣಿನಿಂದ ನಿರ್ಮಾಣ ಮಾಡಿದ ೫ ದೊಡ್ಡ ಗಾತ್ರದ ಮಡಕೆಗಳು, ೨ ಸಣ್ಣ ಗಾತ್ರದ ಮಡಕೆಗಳಿದ್ದು, ಇವುಗಳು ಸ್ತ್ರೀಯನ್ನು (ಮನುಷ್ಯಾಕೃತಿ) ಹೋಲುವಂತೆ ಕಣ್ಣು, ಮೂಗು, ಬಾಯಿ ಹಾಗೂ ಸ್ತನಭಾಗದ ರಚನೆ ಮಾಡಲಾಗಿದೆ. ಮಲೆನಾಡಿನ ಹೆಚ್ಚಿನ ಸ್ಥಳಗಳಲ್ಲಿ ಮುಖ್ಯವಾಗಿ ಸ್ಥಳೀಯರು ದೇವಿಬನ ಎಂದು ಕರೆಯುವ ಜಾಗ ದಲ್ಲಿ ಮನುಷ್ಯಾಕೃತಿ ಮಡಕೆಗಳು ಸಿಕ್ಕ ಪುರಾವೆಗಳಿವೆ. ದೇವಿ ಬನಗಳಲ್ಲಿ ಇಂತಹ ಮಡಕೆಗಳನ್ನು ''''''''ಫಲ ವಂತಿಕೆ'''''''' ಅಥವಾ ''''''''ಮಾತೃತ್ವ'''''''' ರೂಪದಲ್ಲಿ ಹರಕೆಯಾಗಿ ಒಪ್ಪಿಸಲಾಗುತ್ತದೆ. ಅಂದರೆ ಸಂತಾನ ಪ್ರಾಪ್ತಿಗೆ, ಸುಖಕರ ಹೆರಿಗೆಗೆ, ಸಣ್ಣ ಮಕ್ಕಳಿಗೆ ರೋಗ ಬಂದ ಸಂದರ್ಭದಲ್ಲಿ ಅಥವಾ ಬರದಂತೆ ಮನುಷ್ಯ ರೂಪದ ಮಡಕೆಗಳನ್ನು ಒಪ್ಪಿಸಲಾಗುತ್ತದೆ. (ಇದೇ ರೀತಿ ಹುಲಿಬನಗಳನ್ನು ಸಹ ಕಾಣಬಹುದು. ಇಲ್ಲಿ ಕಾಡುಪ್ರಾಣಿಗಳಿಂದ ಸಾಕುಪ್ರಾಣಿಗಳ ಹಾಗೆಯೇ ಕೃಷಿಭೂಮಿ ರಕ್ಷಣೆಗೆ ಪ್ರಾಣಿರೂಪದ ಹೆಚ್ಚಾಗಿ ಹುಲಿ ಆಕೃತಿ ಹೊಂದಿದ ಮಡಕೆಗಳನ್ನು ಒಪ್ಪಿಸಲಾಗುತ್ತದೆ). ಹೆಚ್ಚಾಗಿ ಇಂತಹ ಜಾನಪದ ಆಚರಣೆ/ಹರಕೆಗಳನ್ನು ತಮ್ಮ ಸುಖ-ಕಷ್ಟಗಳ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಅಧ್ಯಯನದ ದೃಷ್ಟಿಯಿಂದ ಈ ವೀರಮಾಸ್ತಿ ಕಲ್ಲಿನ ತಳಭಾಗದಲ್ಲಿ ದೊರೆತ ವಿವಿಧ ಗಾತ್ರದ ಮಡಕೆಗಳು ನಂತರದ ಕಾಲಕ್ಕೆ ಅಂದರೆ ಸುಮಾರು ೧೭-೧೮ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯಪಟ್ಟಿದ್ದಾರೆ.ಈ ಎರಡೂ ಸ್ಮಾರಕ ಶಿಲ್ಪಗಳನ್ನು ಮಾಸ್ತಿಬನದ ಹೆಸರಿನಲ್ಲಿ ಸಂರಕ್ಷಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಂಶೋಧನಾರ್ಥಿ ಹೇಳಿದ್ದಾರೆ.

ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕೆಳದಿ ವಸ್ತುಸಂಗ್ರಹಾಲಯದ ನಿರ್ದೇಶಕ ಡಾ. ಶಂಭುಲಿಂಗಮೂರ್ತಿ ಎಚ್.ಎಂ ಹಾಗೂ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ.