ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿದರು.
ಕೊಪ್ಪಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಯೋಜನೆಗಳಲ್ಲ; ಇವು ಇತಿಹಾಸ ಸೃಷ್ಟಿಸಿರುವ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿದ ಅಧಿಕಾರಿಗಳು, ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸುವುದಾಗಿ ಹೇಳಿದರು.ಗೃಹಲಕ್ಷ್ಮಿ: 2023ರ ಆಗಸ್ಟ್‌ನಿಂದ 2026ರ ಮಾರ್ಚ್ ವರೆಗೆ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ₹1,915 ಕೋಟಿ ಸಂದಾಯವಾಗಿದೆ. ಮರಣ ಹೊಂದಿದ 8,108 ಫಲಾನುಭವಿಗಳಿಗೆ ಪಾವತಿಯಾಗಿದ್ದ ಮೊತ್ತದಲ್ಲಿ ₹89 ಲಕ್ಷವನ್ನು ಸರ್ಕಾರದ ಖಾತೆಗೆ ಮರುಜಮಾ ಮಾಡಲಾಗಿದೆ.
ಶಕ್ತಿ: 2023ರಿಂದ 2026ರ ಆಗಸ್ಟ್ ವರೆಗೆ ಫಲಾನುಭವಿಗಳ ಉಚಿತ ಪ್ರಯಾಣಕ್ಕಾಗಿ ₹4,914 ಲಕ್ಷ ವೆಚ್ಚವಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯಡಿ 21,192 ಪಾಸ್‌ಗಳನ್ನು ವಿತರಿಸಲಾಗಿದೆ.ಗೃಹಜ್ಯೋತಿ: ಜುಲೈ 2026ರ ಅಂತ್ಯದ ವರೆಗೆ ಕೊಪ್ಪಳ ವಿಭಾಗದಲ್ಲಿ 1,39,966 ಗ್ರಾಹಕರಿಗೆ 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ ₹209.2 ಕೋಟಿ ಹಾಗೂ ಗಂಗಾವತಿ ವಿಭಾಗದ 2,86,730 ಫಲಾನುಭವಿಗಳಿಗೆ ₹442 ಕೋಟಿ ವೆಚ್ಚ ಮಾಡಲಾಗಿದೆ. ಫಲಾನುಭವಿಗಳ ಪರಿಶೀಲನಾ ಪ್ರಗತಿ ಕ್ರಮವಾಗಿ ಶೇ. 87.19 ಮತ್ತು ಶೇ. 86.18ರಷ್ಟಿದೆ.
ಯುವನಿಧಿ: ಜಿಲ್ಲೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಅರ್ಹ ನಿರುದ್ಯೋಗಿ ಯುವಕರಿಗೆ ₹43.41 ಕೋಟಿ ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ.ಅನ್ನಭಾಗ್ಯ: ಜಿಲ್ಲೆಯ 3,26,424 ಆದ್ಯತಾ ಮತ್ತು ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳ 12,29,034 ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಹಾಗೂ ಜೋಳ ಸೇರಿ 10 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. 2023ರ ಜುಲೈನಿಂದ 2024ರ ಡಿಸೆಂಬರ್ ವರೆಗೆ ಡಿಬಿಟಿ ಮೂಲಕ ₹313.92 ಕೋಟಿ, 2025ರ ಫೆಬ್ರುವರಿಯಿಂದ 2026ರ ಮಾರ್ಚ್ ವರೆಗೆ ₹198.57 ಕೋಟಿ ಹಾಗೂ 2026ರ ಆಗಸ್ಟ್‌ನಲ್ಲಿ ₹2.08 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಎಸ್.ಬಿ. ಖಾದ್ರಿ, ಮಂಜುನಾಥ ಗೊಂಡಬಾಳ, ನಾಗರಾಜ ಅರಳಿ, ಅಂಬರೀಶ್ ಗಾಂಜಿ ಉಪಸ್ಥಿತರಿದ್ದರು.