ಭತ್ತದ ಕಣಜ ಕಾರಟಗಿ ಪಟ್ಟಣದಲ್ಲಿ ಅ. 24 ಮತ್ತು 25ರಂದು ನಡೆಯಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಬಿಡುಗಡೆ ಮಾಡಿದರು.

ಕಾರಟಗಿ: ಭತ್ತದ ಕಣಜ ಕಾರಟಗಿ ಪಟ್ಟಣದಲ್ಲಿ ಅ. 24 ಮತ್ತು 25ರಂದು ನಡೆಯಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಬಿಡುಗಡೆ ಮಾಡಿದರು.

ತಮ್ಮ ಗೃಹ ಕಚೇರಿಯಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕು. ಜಿಲ್ಲೆಯ ಇತಿಹಾಸ, ಪರಂಪರೆ ಹಾಗೂ ಜನರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವಂತಾಗಬೇಕು. ಕನ್ನಡ ಭಾಷೆ, ಜನಪದ ಪರಂಪರೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಜೀವಾಳವಾಗಿದ್ದು, ಹೊಸ ಚಿಂತನೆ ಹಾಗೂ ವಿನೂತನ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕು ಎಂದರು.

ಸಮ್ಮೇಳನದ ಯಶಸ್ಸಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಮಾತನಾಡಿ, ಸಮ್ಮೇಳನಕ್ಕೆ ಸಚಿವ ಶಿವರಾಜ ತಂಗಡಗಿ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರು, ಕನ್ನಡಪರ ಮತ್ತು ರೈತಪರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುವುದು ಎಂದರು.

2005ರಲ್ಲಿ ಕಾರಟಗಿಯಲ್ಲಿ ಕೊಪ್ಪಳ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನ ನಡೆದಿತ್ತು. 21 ವರ್ಷಗಳ ಬಳಿಕ ಮತ್ತೊಮ್ಮೆ 15ನೇ ಜಿಲ್ಲಾ ಸಮ್ಮೇಳನ ಕಾರಟಗಿಯಲ್ಲಿ ನಡೆಯುತ್ತಿರುವುದು ವಿಶೇಷ ಎಂದು ತಾಲೂಕು ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ತಿಳಿಸಿದರು. ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಆಯ್ಕೆಯಾಗಿದ್ದಾರೆ.

ಲಾಂಛನದ ವಿಶೇಷತೆ: ಜಿಲ್ಲೆಯ ಇತಿಹಾಸ, ಸಾಂಸ್ಕೃತಿಕ ಪರಂಪರೆ, ಪ್ರಕೃತಿ ಸಂಪತ್ತು ಹಾಗೂ ಕಾರಟಗಿಯ ಭತ್ತದ ಕಣಜದ ಪ್ರತೀಕಗಳನ್ನು ಒಳಗೊಂಡಿರುವ ಲಾಂಛನ ರೂಪಿಸಲಾಗಿದೆ. ತುಂಗಭದ್ರಾ ಜಲಾಶಯ, ಭತ್ತದ ಗದ್ದೆಗಳು, ಕಾರಟಗಿಯ ಐತಿಹಾಸಿಕ ಮಹಾದೇವ ದೇವಸ್ಥಾನದ ಪುಷ್ಕರಣಿ, ಅಂಜನಾದ್ರಿ ಬೆಟ್ಟ, ಕನಕಗಿರಿ, ಆನೆಗೊಂದಿ ಕೋಟೆ, ಇಟಗಿ ಮಹಾದೇವಾಲಯ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಠ ಸೇರಿದಂತೆ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳನ್ನು ಲಾಂಛನದಲ್ಲಿ ಬಿಂಬಿಸಲಾಗಿದೆ.