ಸಾರಾಂಶ
ಕೊಪ್ಪಳ: ಜಿಲ್ಲೆಯಲ್ಲಿ ಕಳೆ ಕೆಲ ವರ್ಷಗಳಿಂದ ತೋಟಗಾರಿಕಾ ಕೃಷಿ ಪ್ರಗತಿಯತ್ತ ಸಾಗುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಫೆ. 23ರಿಂದ ಫೆ. 27ರ ವರೆಗೆ ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಅಣಬೆ ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.ತೋಟಗಾರಿಕಾ ಬೆಳೆ ಬೆಳೆಯುವುದರಿಂದ ಹೆಚ್ಚು ಲಾಭ ಬರುತ್ತದೆ. ಇದನ್ನು ಅರಿತಿರುವ ರೈತರು ಈಗ ಇದರತ್ತ ಒಲವು ತೋರುತ್ತಿದ್ದಾರೆ. ಇದಕ್ಕೆ ತೋಟಗಾರಿಕೆ ಇಲಾಖೆಯೂ ಸಹಕಾರ ನೀಡುತ್ತಿದೆ ಎಂದರು.
ತೋಟಗಾರಿಕಾ ಪಾರ್ಕ್ ಮಾಡುವ ಪ್ರಸ್ತಾವನೆ ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಮಂಡನೆ ಮಾಡಿದರೂ ನಂತರ ಯಾವುದೆ ಕ್ರಮ ವಹಿಸಲಿಲ್ಲ. ಆದರೆ, ಈಗ ನಮ್ಮ ಸರ್ಕಾರ ಬಂದ ಮೇಲೆ ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ತಿಂಗಳೊಳಗಾಗಿ ತೋಟಗಾರಿಕಾ ಪಾರ್ಕ್ ಮಾಡುವ ದಿಸೆಯಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ರೈಸ್ ಪಾರ್ಕ್ ಅತ್ಯುತ್ತಮ ಯೋಜನೆಯಾಗಿದ್ದು, ಅದು ಸಹ ನಮ್ಮ ಸರ್ಕಾರದ ಅವಧಿಯಲ್ಲಿಯೇ ಆಗಿರುವ ಪ್ರಗತಿಯಾಗಿದ್ದು, ನಂತರ ಬಂದ ಸರ್ಕಾರ ಅದನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿತು ಎಂದರು.
ಈಗ ರೈಸ್ ಪಾರ್ಕ್ ಭೂಮಿಯ ವಿವಾದ ನ್ಯಾಯಾಲಯದಲ್ಲಿರುವುದರಿಂದ ಸಮಸ್ಯೆಯಾಗಿದೆ ಎಂದರು.ಹಣ್ಣು ಮತ್ತು ಜೇನು ಮೇಳದ ವಿಶೇಷತೆ
ಈ ವರ್ಷದ ಮಹಾಶಿವರಾತ್ರಿ ಪ್ರಯುಕ್ತ ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯ ಹಣ್ಣು ಬೆಳೆಗಾರರಿಗೆ ಹಾಗೂ ಎಲ್ಲ ಹಣ್ಣು ಸವಿಯುವ ಗ್ರಾಹಕರಿಗೆ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳ 5 ದಿನಗಳ ಕಾಲ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದೆ. ಫೆ. 27ರ ವರೆಗೆ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಮತ್ತು ಜೇನು ಮೇಳ ನಡೆಯಲಿದೆ.ರೂಬಿ ರೋಮನ್ ಹಣ್ಣಿನ ಪ್ರದರ್ಶನ:
ಈ ಮೇಳದ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆ ಜಪಾನಿನಲ್ಲಿ ಬೆಳೆಯುವ ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ಹಣ್ಣು, ಪ್ರತಿ ಕೆಜಿಗೆ ₹8 ಲಕ್ಷ ಮೌಲ್ಯದ ರೂಬಿ ರೋಮನ್ ದ್ರಾಕ್ಷಿ ಹಣ್ಣನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದರೊಂದಿಗೆ ವಿವಿಧ ವಿದೇಶಿ ಹಣ್ಣಿನ ತಳಿಗಳಾದ ಅವಕಾಡೋಫ್ಲಮ್, ಪೀಚ್, ಲಿಚ್ಚಿ, ರೆಡ್‌ಗ್ಲೋಬ್, ಕಿವಿ ಫ್ರೂಟ್, ರಾಮಭೂತಾನ, ಮ್ಯಾಂಗೋಸ್ಟೀನ್, ಜಪಾನ್ ಮ್ಯಾಂಗೋ, ಐಸ್‌ಗಾವಾ, ಅಮೆರಿಕನ್ ಆ್ಯಪಲ್, ಗ್ರೀನ್ ಆ್ಯಪಲ್, ವಿದೇಶಿ ಪ್ಯಾಷನ್ ಪ್ರೂಟ್, ವೈನ್‌ಗ್ರೇಪ್ ಮುಂತಾದವು ಹಾಗೂ ಜಿಲ್ಲೆಯ ರೈತರು ಬೆಳೆದ ದ್ರಾಕ್ಷಿ, ಕಲ್ಲಂಗಡಿ, ಪರಲ, ಅಂಜೂರ, ಪಪ್ಪಾಯಿ, ಹಲಸು, ಬಾಳೆ, ಸಪೋಟ, ಅಣಬೆ, ಜೇನು ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನ ಪ್ರದರ್ಶನದಲ್ಲಿ ಇಡಲಾಗಿದೆ.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ. ಶಂಕ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ತೋಟಗಾರಿಕೆ ಬೆಳೆಗಾರರು, ರೈತರು ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.