ಕೊಪ್ಪಳ ಲೋಕಸಭೆ ಚುನಾವಣೆ: ಕಾಂಗ್ರೆಸ್ಸಲ್ಲೂ ಟಿಕೆಟ್ ಫೈಟ್ ತಾರ್ಕಿಕ ಅಂತ್ಯದತ್ತ

| Published : Mar 10 2024, 01:31 AM IST

ಕೊಪ್ಪಳ ಲೋಕಸಭೆ ಚುನಾವಣೆ: ಕಾಂಗ್ರೆಸ್ಸಲ್ಲೂ ಟಿಕೆಟ್ ಫೈಟ್ ತಾರ್ಕಿಕ ಅಂತ್ಯದತ್ತ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ ಕಳೆದ ಮೂರು ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿಯೇ ಗೆಲ್ಲುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಇಲ್ಲಿನ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸೋಲು ಕಂಡಿರುವ ಕಾಂಗ್ರೆಸ್ ಈ ಬಾರಿ ಹೇಗಾದರೂ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡುತ್ತಿದೆ.ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ ಕಳೆದ ಮೂರು ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿಯೇ ಗೆಲ್ಲುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಈ ಬಾರಿಯಂತೂ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವುದರಿಂದ ಹೇಗಾದರೂ ಮಾಡಿ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದಂತಿದೆ.ಕಾಂಗ್ರೆಸ್‌ನಲ್ಲಿ ಈಗ ಟಿಕೆಟ್‌ಗೆ ಪೈಪೋಟಿ ಇದ್ದರೂ ಫ್ರೆಂಡ್ಲಿಫೈಟ್ ಎನ್ನುವಂತೆ ಇದ್ದಾರೆ. ಟಿಕೆಟ್ ಬೇಕು ಎನ್ನುವವರು ಸಹ ನನಗೆ ಸಿಕ್ಕರೆ ಓಕೆ, ಸಿಗದಿದ್ದರೂ ಓಕೆ ಎನ್ನುತ್ತಿದ್ದಾರೆಯೇ ಹೊರತು ಪಟ್ಟುಬಿಡದೇ ಪ್ರಯತ್ನ ಮಾಡಿ, ವಿವಾದ ಸೃಷ್ಟಿ ಮಾಡುತ್ತಿಲ್ಲ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಇರುವ ಸಮಾಧಾನ.ರಾಜಶೇಖರ ಹಿಟ್ನಾಳ, ಅಮರೇಗೌಡ ಫೈಟ್: ಕಾಂಗ್ರೆಸ್ ಪಕ್ಷದಲ್ಲಿ ಈಗ ಇರುವ ಫೈಟ್ ಮೇಲ್ನೋಟಕ್ಕೆ ಪರಾಜಿತ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹಾಗೂ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಅವರ ನಡುವಿನದ್ದು. ಈ ಮಧ್ಯೆ ಬಸನಗೌಡ ಬಾದರ್ಲಿ ಹೆಸರು ಸಹ ಮುಂಚೂಣಿಯಲ್ಲಿದೆ.ಹಿಂದುಳಿದ ವರ್ಗಕ್ಕೆ ಕೊಪ್ಪಳ ಕ್ಷೇತ್ರ ನಿಗದಿಯಾಗಿದ್ದೇ ಆದಲ್ಲಿ ರಾಜಶೇಖರ ಹಿಟ್ನಾಳ ಅವರಿಗೆ ಪಕ್ಕಾ ಎನ್ನಲಾಗುತ್ತಿದೆ. ಈಗ ಹೈಕಮಾಂಡ್ ನಲ್ಲಿ ಆಗುತ್ತಿರುವ ಬೆಳವಣಿಗೆಯಲ್ಲಿ ಇವರ ಹೆಸರೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.ಹೊಸಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಫೈಟ್ ಮಾಡುವ ವೇಳೆ ಪಕ್ಷ ಕಟ್ಟಿದ ರೀತಿ ಮತ್ತು ಚುನಾವಣೆಗೆ ಮಾಡಿಕೊಂಡ ಸಿದ್ಧತೆಯ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಆನಂದಸಿಂಗ್ ಮಣಿಸಲು ಕ್ಷೇತ್ರದಲ್ಲಿ ವೇದಿಕೆ ಸಿದ್ಧ ಮಾಡಿದ್ದೇ ರಾಜಶೇಖರ ಹಿಟ್ನಾಳ ಎಂದು ಪಕ್ಷದ ಹೈಕಮಾಂಡ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್ ಕೊಟ್ಟಿದ್ದರೂ ಗೆಲ್ಲುತ್ತಿದ್ದರು ಎಂದು ಸಹಜವಾಗಿ ಚರ್ಚೆಯ ವೇಳೆ ಹೇಳಿದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಜಶೇಖರ ಹಿಟ್ನಾಳ ಅವರನ್ನು ಅಖಾಡಕ್ಕೆ ಇಳಿಸಬೇಕು ಎನ್ನುವ ಕುರಿತು ಬಲವಾದ ಚರ್ಚೆಯಾಗುತ್ತಿದೆ.ಹಾಗೊಂದು ವೇಳೆ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದಾದರೆ ಮಾಜಿ ಸಚಿವ ಅಮರೇಗೌಡ ಭಯ್ಯಾಪುರ, ಬಸನಗೌಡ ಬಾದರ್ಲಿ ನಡುವೆ ಫೈಟ್ ಇದೆ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದಾದರೆ ಅಮರೇಗೌಡ ಭಯ್ಯಾಪುರ ಪರವಾಗಿ ಸಿಎಂ ಸಿದ್ದರಾಮಯ್ಯ ಬ್ಯಾಟ್ ಮಾಡಿದರೆ, ಬಸನಗೌಡ ಬಾದರ್ಲಿ ಪರ ಡಿಸಿಎಂ ಡಿ.ಕೆ. ಶಿವಕುಮಾರ ಬ್ಯಾಟ್ ಬೀಸಲಿದ್ದಾರೆ. ಈಗಾಗಲೇ ಬಸನಗೌಡ ಬಾದರ್ಲಿ ಪರ ಡಿಕೆಶಿ ಬಲವಾಗಿ ಹೈಕಮಾಂಡ್ ನಲ್ಲಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಬೆಂಗಳೂರಿನಲ್ಲಿ ಸಭೆ:ಬೆಂಗಳೂರಿನಲ್ಲಿ ಪಕ್ಷದ ಹೈಕಮಾಂಡ್ ನಡೆಸಿದ ಸಭೆಯಲ್ಲಿ ಬಹುತೇಕ ರಾಜಶೇಖರ ಹಿಟ್ನಾಳಗೆ ಟಿಕೆಟ್ ಎಂದು ತೀರ್ಮಾನಿಸಲಾಗಿದ್ದರೆ, ಪರ್ಯಾಯವಾಗಿ ಅಮರೇಗೌಡ ಭಯ್ಯಾಪುರ ಅಥವಾ ಬಸನಗೌಡ ಬಾದರ್ಲಿ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಅಖಾಡಕ್ಕೆ ಇಳಿಸಬೇಕು ಎನ್ನುವ ಕುರಿತು ಚರ್ಚೆಯಾಗುತ್ತಿದೆ ಎನ್ನುವುದು ಸದ್ಯದ ಮಾಹಿತಿ.ಇವು ಬೆಂಗಳೂರು ಹೈಕಮಾಂಡ್‌ನಿಂದ ದೆಹಲಿಗೂ ತಲಿಪಿದೆ ಎಂದು ಹೇಳಲಾಗುತ್ತಿದೆ.ಮುನಿಸು ದೊಡ್ಡ ಸಮಸ್ಯೆ: ಕಾಂಗ್ರೆಸ್ ಪಕ್ಷಕ್ಕೆ ಈಗ ವಿಧಾನಸಭಾ ಚುನಾವಣೆ ವೇಳೆಯಲ್ಲಾದ ಮನಸ್ತಾಪಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಹಿಟ್ನಾಳ ಕುಟುಂಬದ ವಿರುದ್ಧ ಕೆಂಡಾಮಂಡಲವಾಗಿರುವ ಇಕ್ಬಾಲ್ ಅನ್ಸಾರಿ ಅವರನ್ನು ಸಮಾಧಾನ ಮಾಡುವುದೇ ದೊಡ್ಡ ಸವಾಲಾಗಿದೆ. ಲೋಕಸಭೆ ಚುನಾವಣೆಗೂ ಮುನ್ನವೇ ಅವರನ್ನು ಸಮಾಧಾನ ಮಾಡುವ ಪ್ರಯತ್ನವಂತೂ ನಡೆದಿದೆ ಎನ್ನಲಾಗುತ್ತಿದೆ.