ಸಾರಾಂಶ
‘ರಾತ್ರಿ 11.45ಕ್ಕೆ ನನಗೆ ಕಾಲ್ ಬಂತು. ತುಂಗಭದ್ರಾ ಡ್ಯಾಂ ಒಡೆದಿದೆ ಎಂದು ಹೇಳಿದಾಗ ಎದೆ ಧಸಕ್ ಎಂದಿತು. ಎದ್ದು ಬಿದ್ದು ಮಧ್ಯರಾತ್ರಿಯೇ ಬಂದು ಜಲಾಶಯದ ಮೇಲೆ ನಿಂತಾಗ ನೀರಿನ ರಭಸಕ್ಕೆ ಡ್ಯಾಂ ನಡುಗುತ್ತಿರುವುದನ್ನು ಕಂಡು ನನ್ನ ಕೈಕಾಲು ಕೂಡ ನಡುಗುತ್ತಿದ್ದವು’
ಕೊಪ್ಪಳ : ‘ರಾತ್ರಿ 11.45ಕ್ಕೆ ನನಗೆ ಕಾಲ್ ಬಂತು. ತುಂಗಭದ್ರಾ ಡ್ಯಾಂ ಒಡೆದಿದೆ ಎಂದು ಹೇಳಿದಾಗ ಎದೆ ಧಸಕ್ ಎಂದಿತು. ಎದ್ದು ಬಿದ್ದು ಮಧ್ಯರಾತ್ರಿಯೇ ಬಂದು ಜಲಾಶಯದ ಮೇಲೆ ನಿಂತಾಗ ನೀರಿನ ರಭಸಕ್ಕೆ ಡ್ಯಾಂ ನಡುಗುತ್ತಿರುವುದನ್ನು ಕಂಡು ನನ್ನ ಕೈಕಾಲು ಕೂಡ ನಡುಗುತ್ತಿದ್ದವು’ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಆತಂಕದ ನುಡಿಗಳಿವು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಿಂದ ಊರಿಗೆ ಆಗಮಿಸುತ್ತಿದ್ದೆ. ತಡವಾಗಿದ್ದರಿಂದ ತುಮಕೂರಿನಲ್ಲಿಯೇ ತಂಗಬೇಕು ಎಂದು ತಡವಾಗಿ ಊಟ ಮಾಡುತ್ತಿದ್ದೆ. ಈ ವೇಳೆ 11.45ರ ಸುಮಾರಿಗೆ ಕಾಲ್ ಬಂತು. ಡ್ಯಾಮ್ ಒಡೆದಿದೆ ಎಂದಾಗ ಎದೆ ಧಸಕ್ ಎಂದಿತು. ತಕ್ಷಣ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಮಾತನಾಡಿದಾಗ ಒಂದು ಕ್ರಸ್ಟ್ ಗೇಟ್ ಮುರಿದಿದೆ ಎಂದರು. ಆಗ ಉಸಿರು ಬಿಟ್ಟಿದ್ದೆ. ಅಲ್ಲಿಂದ ಒಂದು ನಿಮಿಷವೂ ತಡಮಾಡದೆ ಮಧ್ಯರಾತ್ರಿಯೇ ಜಲಾಶಯಕ್ಕೆ ಬಂದೆ. 19ನೇ ಕ್ರಸ್ಟ್ ಗೇಟ್ ಮುರಿದು, ನೀರು ಹೋಗುತ್ತಿರುವ ರಭಸದಿಂದ ಜಲಾಶಯವೇ ನಡುಗುತ್ತಿತ್ತು. ಆ ಸದ್ದು ಮತ್ತು ನಡುಗುವುದನ್ನು ನೋಡಿದ ನನ್ನ ಕೈಕಾಲುಗಳು ನಡುಗಲು ಆರಂಭಿಸಿದವು ಎಂದು ವಿವರಿಸಿದರು.
ತಕ್ಷಣ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಉಳಿದ ಕ್ರಸ್ಟ್ ಗೇಟ್‌ಗಳ ಮೂಲಕ ಹೆಚ್ಚುವರಿಯಾಗಿ ನೀರು ಬಿಡಲು ಪ್ರಾರಂಭಿಸಿದ ಮೇಲೆ ಡ್ಯಾಮ್ ನಡುಗುವುದು ನಿಂತಿತು. ಆಗ ನಿರಾಳವಾಗಿ, ರಾತ್ರಿಪೂರ್ತಿ ಅಲ್ಲಿಯೇ ಕಳೆದೆವು ಎಂದರು.
ಒಂದು ಬೆಳೆಗೆ ನೀರು:
ಈಗ ನಮ್ಮ ಮುಂದೆ ಇರುವ ಬಹುದೊಡ್ಡ ಸವಾಲು ಎಂದರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನಾಟಿ ಮಾಡಿರುವ ಒಂದು ಬೆಳೆಯನ್ನಾದರೂ ಉಳಿಸಿಕೊಳ್ಳುವುದು. ಹೀಗಾಗಿ, ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಜಲಾಶಯದಲ್ಲಿ 50-60 ಟಿಎಂಸಿ ನೀರನ್ನು ಉಳಿಸಿಕೊಂಡು ಕ್ರಸ್ಟ್ ಗೇಟ್ ದುರಸ್ತಿ ಮಾಡುವುದಕ್ಕೆ ಯತ್ನ ನಡೆದಿದೆ. ಜಲಾಶಯದಿಂದ 50-60 ಟಿಎಂಸಿ ನೀರು ಹೋದ ಮೇಲೆಯೇ ಮುಂದಿನ ದುರಸ್ತಿ ಹೇಗೆ ಎಂಬುದು ಅರಿವಿಗೆ ಬರುತ್ತದೆ. ಒಂದು ಬೆಳೆಗಾದರೂ ಸಾಕಾಗುವಷ್ಟು ನೀರನ್ನು ಉಳಿಸಿಕೊಡು ಎಂದು ಆ ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಎಂದರು.
ಸದ್ಯಕ್ಕೆ ಮಳೆ ಬರಬಾರದು. ಜಲಾನಯನ ವ್ಯಾಪ್ತಿಯಲ್ಲಿ ಮಳೆ ಸುರಿದು, ಒಳಹರಿವು ಹೆಚ್ಚಳವಾದರೆ ಮತ್ತೆ ಸಮಸ್ಯೆ ಪ್ರಾರಂಭವಾಗುತ್ತದೆ. ಕ್ರಸ್ಟ್ ಗೇಟ್ ದುರಸ್ತಿಯಾಗುವವರೆಗೂ ಮಳೆ ಕಡಿಮೆಯಾಗಲಿ, ದುರಸ್ತಿಯಾಗುತ್ತಿದ್ದಂತೆ ಮತ್ತೆ ಮಳೆ ಸುರಿದು, ಡ್ಯಾಂ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದರು.