ಬಿದ್ದ ಭತ್ತದ ಬೆಲೆ, ಅಕ್ಕಿ ಮಾಡಿಸಿ ಗೆದ್ದ ರೈತರು! ಭತ್ತದ ದರ ಕುಸಿದರೂ ದಲ್ಲಾಳಿಗಳಿಂದಾಗಿ ಇಳಿಯದ ಅಕ್ಕಿ ಬೆಲೆ

| Published : Jan 21 2025, 12:15 PM IST

annabhagya

ಸಾರಾಂಶ

ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡಿಕೊಳ್ಳುವಂತಾಗಬೇಕು. ಅಲ್ಲಿಯವರೆಗೂ ಉದ್ದಾರ ಆಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಭತ್ತ ಬೆಳೆದ ರೈತರು ಭತ್ತಕ್ಕೆ ತಾವೇ ದರ ನಿಗದಿ ಮಾಡಿದ್ದಾರೆ.

ಸೋಮರಡ್ಡಿ ಅಳವಂಡಿ

 ಕೊಪ್ಪಳ : ಉತ್ಪನ್ನಗಳಿಗೆ ತಾವೇ ದರ ನಿಗದಿ ಮಾಡಿಕೊಳ್ಳುವಂತಾಗಬೇಕು. ಅಲ್ಲಿಯವರೆಗೂ ಉದ್ದಾರ ಆಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಭತ್ತ ಬೆಳೆದ ರೈತರು ಭತ್ತಕ್ಕೆ ತಾವೇ ದರ ನಿಗದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅಕ್ಕಿಯನ್ನು ತಾವೇ ಮಾಡಿಸಿ, ಮಾರುವ ಮೂಲಕ ದರ ಕುಸಿತದ ನಡುವೆಯೂ ಎದ್ದು ನಿಂತಿದ್ದಾರೆ. ಬಿದ್ದ ಮಾರುಕಟ್ಟೆ ದರದ ನಡುವೆಯೂ ಗೆದ್ದು ಬೀಗಿದ್ದಾರೆ.

ಹೌದು, ಪ್ರಸಕ್ತ ವರ್ಷ ರೈತರು ಭತ್ತ ಇನ್ನೇನು ಮಾರುಕಟ್ಟೆಗೆ ಬರುವಂತಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಭತ್ತದ ದರ ಪಾತಾಳಕ್ಕೆ ಕುಸಿಯಿತು. ಆ ದರಕ್ಕೆ ಮಾರಿದ್ದರೆ ಕೃಷಿಗೆ ಮಾಡಿದ ಖರ್ಚು ಕೂಡ ಬರುತ್ತಿಲ್ಲ. ಆದರೆ, ಭತ್ತದ ದರ ಬಿದ್ದಿದ್ದರೂ ಅಕ್ಕಿಯ ದರ ಮಾತ್ರ ಕುಸಿದಿರಲಿಲ್ಲ (ದಲ್ಲಾಳಿಗಳ ಕೈಚಳಕದಿಂದ). ಹೀಗಾಗಿ, ರೈತರು ನಾವ್ಯಾಕೆ ಭತ್ತ ಮಾರಿ, ಕೈ ಸುಟ್ಟುಕೊಳ್ಳಬೇಕು ಎಂದು ತಾವೇ ಅಕ್ಕಿಯನ್ನು ಮಾಡಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಭತ್ತ ಬೆಳೆದ ರೈತರಿಗೂ ಲಾಭವಾಗಿದೆ ಮತ್ತು ಗ್ರಾಹಕರಿಗೂ ಲಾಭವಾಗಿದೆ. ಅಷ್ಟೇ ಅಲ್ಲ, ಗ್ರಾಹಕರಿಗೆ ಕಲೆಬೆರಕೆ ಇಲ್ಲದ ಗುಣಮಟ್ಟದ ಅಕ್ಕಿ ಕಡಿಮೆ ದರದಲ್ಲಿ ಸಿಕ್ಕಿದೆ.

ಪ್ರತಿ ಬಾರಿಯೂ ರೈತರ ಭತ್ತ ಮಾರುಕಟ್ಟೆಗೆ ಬರುವ ವೇಳೆಗೆ ಭತ್ತದ ದರ ಬರೋಬ್ಬರಿ ₹500-800 ವರೆಗೆ ಕುಸಿಯುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿಯ ದರ ಮಾತ್ರ ಕುಸಿಯುತ್ತಿರಲಿಲ್ಲ. ಮಾರುಕಟ್ಟೆಯಲ್ಲಿ ಭತ್ತದ ದರವನ್ನು ಪಾತಾಳಕ್ಕೆ ದೂಡಿ, ಖರೀದಿಸುತ್ತಿದ್ದ ದಲ್ಲಾಳಿಗಳು ಅದನ್ನು ಮಿಲ್ಲಿನಲ್ಲಿ ಅಕ್ಕಿ ಮಾಡಿಸಿ, ಮಾರಿ ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದರು. ಮಹಡಿ ಮೇಲೆ ಮಹಡಿ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ, 4 ತಿಂಗಳು ಬೆವರು ಸುರಿಸಿ, ಬೆಳೆದ ರೈತರು ಮತ್ತೆ ನಷ್ಟ ಅನುಭವಿಸಿ, ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದರು. ಆದರೆ, ಈ ವರ್ಷ ತಾವೇ ಮಾರುಕಟ್ಟೆ ಮಾಡಿಕೊಂಡಿರುವ ರೈತರು ಗೆದ್ದು ಬೀಗುತ್ತಿದ್ದಾರೆ.

ಈ ವರ್ಷ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ದರ ಕುಸಿದಿದ್ದರಿಂದ ರೈತರು ಧೃತಿಗೆಡಲಿಲ್ಲ. ಆದರೆ, ತಾವೇ ಅಕ್ಕಿ ಮಾಡಿಸಿ, ತಾವೇ ದರ ನಿಗದಿ ಮಾಡಿ ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ.

ಕ್ವಿಂಟಲ್‌ಗೆ ₹4000-4100, 4200ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ 75 ಕೇಜಿ ಚೀಲದ ಭತ್ತಕ್ಕೆ ₹2000 ಆಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ 75 ಕೇಜಿ ಸೋನಾ ಮಸೂರಿ ಭತ್ತದ ದರ ₹1500ರಿಂದ 1600ಕ್ಕೆ ಕುಸಿದಿತ್ತು. (ಈಗ 1900 ಆಗಿದೆ). ಮಾರುಕಟ್ಟೆಯ ಮರ್ಮ ತಿಳಿದಿರುವ ರೈತರು 25 ಕೇಜಿ ಪಾಕೇಟ್ ಮಾಡಿಸಿ, ₹1000ಯಂತೆ (ಕ್ವಿಂಟಲ್‌ಗೆ ₹4000) ಮಾರಾಟ ಮಾಡುತ್ತಿದ್ದಾರೆ. ಇದೇ ಅಕ್ಕಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹4800-5000 ಇದೆ. ಗ್ರಾಹಕರಿಗೆ ಬರೋಬ್ಬರಿ ಕ್ವಿಂಟಲ್‌ಗೆ ₹800-1000 ಉಳಿತಾಯವಾಗುತ್ತದೆ. ಅಷ್ಟೇ ಅಲ್ಲ, ರೈತರಿಗೂ ಪ್ರತಿ ಕ್ವಿಂಟಲ್‌ ಗೆ ₹500- 800 ಹೆಚ್ಚುವರಿ ಲಾಭವಾಗಿದೆ.