ಕೊಪ್ಪಳ: ಸಂಗೀತ ಕ್ಷೇತ್ರಕ್ಕೆ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಕೊಡುಗೆ ಅನನ್ಯವಾಗಿದೆ ಎಂದು ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.

ಭಾಗ್ಯ ನಗರದ ಪವಾರ್ ಗಾರ್ಡನ್ ನಲ್ಲಿ ಗುರು ಪುಟ್ಟರಾಜ ಗವಾಯಿಗಳ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಪ್ತ ಸ್ವರ ಸಂಗೀತೋತ್ಸವ ಮತ್ತು ಪಂಡಿತ್ ಕಲ್ಲಯ್ಯಜ್ಜನವರ ಸಪ್ತ ತುಲಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಗೀತ ಕಾರ್ಯಕ್ರಮ ಪದೇ ಪದೇ ಆಯೋಜನೆ ಮಾಡುವುದರಿಂದ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ನಾಡಿನ ವಿದ್ವಾಂಸ ಸಂಗೀತಗಾರರ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಿ ಸ್ಥಳೀಯ ಪ್ರತಿಭೆ ಬೆಳೆಯಲು ರಹದಾರಿ ಹಾಕಿಕೊಟ್ಟಂತಾಗುತ್ತದೆ ಎಂದರು.

ಗದಗಿನ ಶ್ರೀವೀರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸುವ ಮಹಾನ್ ಕಾರ್ಯ ಮಾಡುತ್ತಿದೆ. ಅಂಧರಾಗಿದ್ದರೂ ಸಂಗೀತದ ಮೂಲಕ ಸ್ವಯಂ ಬದುಕು ಕಟ್ಟಿಕೊಳ್ಳುವಂತೆ ಮಾಡಿ,ಪುಣ್ಯಾಶ್ರಮ ನಾಡಿನಲ್ಲಿಯೇ ಶ್ರೇಷ್ಠ ಕಾರ್ಯ ಮಾಡುತ್ತದೆ ಎಂದರು.

ಇಂಥ ಪುಣ್ಯಾಶ್ರಮದ ಹೊಣೆ ಈಗ ಪಂಡಿತ್ ಕಲ್ಲಯ್ಯಜ್ಜನವರು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅನೇಕ ಹೊಸ ಹೊಸ ಕಾರ್ಯಕ್ರಮ ಜಾರಿ ಮಾಡಿದ್ದಾರೆ. ಅವರು ಕೊಪ್ಪಳ ಜಿಲ್ಲೆಯವರಾಗಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.


ಲಿಂಗಸೂರು ಮಾಣಿಕೇಶ್ವರಮಠದ ಮಾತೆ ನಂದಿಕೇಶ್ವರಿ ಮಾತನಾಡಿ, ಕೊಪ್ಪಳದಲ್ಲಿ ಸಂಗೀತಲೋಕ ಧರೆಗಿಳಿಸಿದಂತಾಗಿದೆ.ಇಂಥ ಸಂಗೀತ ಕಾರ್ಯಕ್ರಮಗಳಿಂದ ತನು,ಮನ ಶುದ್ಧಿಯಾಗುತ್ತದೆ. ಅದರಲ್ಲೂ ಪಂಡಿತ್ ಕಲ್ಲಯಜ್ಜನವರಿಗೆ ತುಲಭಾರ ಮಾಡುವ ಮೂಲಕ ಅಂಧ ಮಕ್ಕಳ ಬೆಳಗುವ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ನೆರವಾಗುವುದು ಜೀವನದ ಪುಣ್ಯಕಾರ್ಯ ಎಂದರು.

ಮೂಕವಿಸ್ಮಿತ:ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ರಾಜೇಂದ್ರ ನಾಕೋಡ,ವಯೋಲಿನ್ ವಾದಕ ಶಂಕರ ಕಬಾಡಿ, ಸದಾಶಿವ ಐಹೊಳೆ, ಸದಾಶಿವ ಪಾಟೀಲ್, ಕುಮಾರ ಮರಡೂರ,ವಯೋಲಿನ್ ವಾದಕ ನಾರಾಯಣ ಹಿರೆಕೊಳಜಿ, ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ ಸೇರಿದಂತೆ ಅನೇಕರು ತಮ್ಮ ವಿದ್ವತ್ ಸಂಗೀತ ನೀಡಿದಾಗ ನೆರೆದಿದ್ದವರು ಅಕ್ಷರಶಃ ಮೂಕವಿಸ್ಮಿತರಾದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಶಂಕರ ಬಿನ್ನಾಳ, ಶಿವರಾಮ ಮ್ಯಾಗಳಮನಿ, ಮಂಜಮ್ಮ ಮ್ಯಾಗಳಮನಿ, ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ರಮಾನಂದ ರಾಜೂರು, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಕೊಪ್ಪಳ ಉಪನೋಂದಣಾಧಿಕಾರಿ ಪ್ರದೀಪಕುಮಾರ ಸೇರಿದಂತೆ ಅನೇಕರು ಇದ್ದರು.

ಶಿಕ್ಷಕ ಪ್ರಾಣೇಶ ಪೂಜಾರ ನಿರೂಪಿಸಿದರು.