ಕೊಪ್ಪಳ ಎಸ್‌ಪಿ ವರ್ಗಾವಣೆ, ಜಟಾಪಟಿ

| Published : Jul 06 2024, 12:46 AM IST

ಸಾರಾಂಶ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಅವರ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಡಾ. ಎಲ್. ರಾಮ ಅರಸಿದ್ಧಿ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದ್ದಕ್ಕೆ ಈಗ ಮೌಖಿಕವಾಗಿ ಬ್ರೇಕ್ ಹಾಕಲಾಗಿದ್ದು, ಭಾರಿ ಹೈಡ್ರಾಮಾವೇ ನಡೆಯುತ್ತಿದೆ.

ಕೊಪ್ಪಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಅವರ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಡಾ. ಎಲ್. ರಾಮ ಅರಸಿದ್ಧಿ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದ್ದಕ್ಕೆ ಈಗ ಮೌಖಿಕವಾಗಿ ಬ್ರೇಕ್ ಹಾಕಲಾಗಿದ್ದು, ಭಾರಿ ಹೈಡ್ರಾಮಾವೇ ನಡೆಯುತ್ತಿದೆ.

ಕೊಪ್ಪಳ ಎಸ್ಪಿಯಾಗಿ ವರ್ಗವಾಗಿ ಬಂದಿದ್ದ ಲೋಕಾಯುಕ್ತ ಎಸ್ಪಿ ಡಾ. ರಾಮ ಅರಸಿದ್ದಿ ಅವರು ಅಧಿಕಾರ ವಹಿಸಿಕೊಳ್ಳಲು ಗುರುವಾರ ಸಂಜೆಯೇ ಕೊಪ್ಪಳಕ್ಕೆ ಆಗಮಿಸಿದ್ದರು. ಇನ್ನೇನು ಅಧಿಕಾರ ವಹಿಸಿಕೊಳ್ಳಬೇಕು ಎನ್ನುವಾಗಲೇ ಮೇಲಧಿಕಾರಿಗಳು ಕರೆ ಮಾಡಿ, ಅಧಿಕಾರ ವಹಿಸಿಕೊಳ್ಳದಿರುವಂತೆ ಮೌಖಿಕವಾಗಿ ಆದೇಶಿಸಿದ್ದಾರೆ. ಹಾಗೆಯೇ ಎಸ್ಪಿ ಯಶೋದಾ ವಂಟಿಗೋಡಿ ಅವರು ಅಧಿಕಾರವನ್ನು ನೀಡದೆ ಮುಂದುವರಿಯುವಂತೆಯೂ ಆದೇಶಿಸಲಾಗಿದೆ.

ಡಾ. ರಾಮ ಅರಸಿದ್ದಿ ಅವರು ಕೊಪ್ಪಳದಲ್ಲಿಯೇ ಠಿಕಾಣಿ ಹೂಡಿದ್ದರೆ ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡಿ ತುರ್ತು ಸಭೆ ಇದೆ ಎಂದು ಬೆಂಗಳೂರಿಗೆ ತೆರಳಿದ್ದು ಅಚ್ಚರಿಗೆ ಕಾರಣವಾಗಿದೆ.

ರಾಜಕೀಯ ಜಟಾಪಟಿ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ಆದೇಶದಂತೆ ನೂತನ ಎಸ್ಪಿ ಡಾ. ರಾಮ ಮುಂದುವರಿಯಬೇಕು ಎಂದು ಹಠ ಹಿಡಿದಿದ್ದರೆ, ಯಲಬುರ್ಗಾ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಯಶೋದಾ ವಂಟಿಗೋಡಿ ಅವರನ್ನು ಮುಂದುವರಿಸುವುದಕ್ಕಾಗಿ ಪ್ರಯತ್ನ ನಡೆಸಿರುವುದು ಈ ಹೈಡ್ರಾಮಾಕ್ಕೆ ಕಾರಣ.

ಈ ವಿವಾದ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಗಳ ತಲುಪಿದೆ.

ಯಾರು ಮುಂದುವರಿಯುತ್ತಾರೆ?: ಯಶೋದಾ ವಂಟಿಗೋಡಿ ಇಲ್ಲಿಯೇ ಇನ್ನಷ್ಟು ದಿನ ಸೇವೆ ಸಲ್ಲಿಸಲು ಯತ್ನಿಸುತ್ತಿದ್ದರೆ, ಸರ್ಕಾರದ ಆದೇಶದನ್ವಯ ಬಂದಿರುವ ಡಾ. ರಾಮ ಅರಸಿದ್ದಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.