ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಿ

| Published : Jul 06 2024, 12:46 AM IST

ಸಾರಾಂಶ

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಬೆಳಿಗ್ಗೆ ತುಮಕೂರು ಹಾಗೂ ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪೌತಿ ಖಾತೆ, ಲ್ಯಾಂಡ್ ಬೀಟ್, ಬೆಳೆ ಸಮೀಕ್ಷೆ, ಸ್ಮಶಾನ ಒತ್ತುವರಿ, ಪಹಣಿಗೆ ಆಧಾರ್ ಜೋಡಣೆ ಸೇರಿದಂತೆ ವಿವಿಧ ಕಂದಾಯ ವಿಷಯಗಳ ಪ್ರಗತಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶುಕ್ರವಾರ ಬೆಳಿಗ್ಗೆ ತುಮಕೂರು ಹಾಗೂ ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪೌತಿ ಖಾತೆ, ಲ್ಯಾಂಡ್ ಬೀಟ್, ಬೆಳೆ ಸಮೀಕ್ಷೆ, ಸ್ಮಶಾನ ಒತ್ತುವರಿ, ಪಹಣಿಗೆ ಆಧಾರ್ ಜೋಡಣೆ ಸೇರಿದಂತೆ ವಿವಿಧ ಕಂದಾಯ ವಿಷಯಗಳ ಪ್ರಗತಿ ಪರಿಶೀಲಿಸಿದರು.

ತುಮಕೂರು ತಾಲೂಕಿನ ಸೀತಕಲ್ಲು, ಕಾಳೇನ ಹಳ್ಳಿ, ಹಾಲುಗೊಂಡನಹಳ್ಳಿ, ಕೊರಟಗೆರೆ ತಾಲೂಕು ಭೂಚನಹಳ್ಳಿ, ವಜ್ಜನಕುರಿಕೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ವಿಮೆ ಪಾವತಿಗೆ ಮನವಿ:

ರೈತರು ತಾವು ಬೆಳೆದ ಬೆಳೆಗಳನ್ನು ವಿಮಾ ಯೋಜನೆಗೊಳಪಡಿಸಿ ಸೌಲಭ್ಯ ಪಡೆದುಕೊಳ್ಳಬೇಕು. ಸರ್ಕಾರ ಅಧಿಸೂಚಿರುವ ಬೆಳೆಗಳನ್ನು ವಿಮೆಗೊಳಪಡಿಸುವುದರಿಂದ ಪ್ರಕೃತಿ ವಿಕೋಪ, ಕೀಟ, ರೋಗಬಾಧೆಯಿಂದ ಬೆಳೆ ನಷ್ಟ ಹಾಗೂ ಬಿತ್ತನೆ ಹಂತದಿಂದ ಕಟಾವು ಹಂತದವರೆಗೆ ಇಳುವರಿ ನಷ್ಟ ಸಂಭವಿಸಿದಲ್ಲಿ ವಿಮಾ ಭದ್ರತೆಯನ್ನು ಒದಗಿಸಲಾಗುವುದು. ಅದೇ ರೀತಿ ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಸ್ವತಃ ರೈತರೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಸಕಾಲಿಕವಾಗಿ ಬೆಳೆ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಎಂದು ರೈತರಿಗೆ ಮನವರಿಕೆ ಮಾಡಿದರು.

ಆಯಾ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿ ದಿನ ರೈತರು ಭೇಟಿ ನೀಡುವುದರಿಂದ ಸಂಘದ ಕಚೇರಿಯಲ್ಲಿ ರೈತರು ವಿಮಾ ಮೊತ್ತ ಪಾವತಿಗೆ ಅನುಕೂಲವಾಗುವಂತೆ ಸಿಬ್ಬಂದಿ ನಿಯೋಜಿಸಬೇಕು ಎಂದು ಸಂಬಂಧಿಸಿದ ತಹಸೀಲ್ದಾರರಿಗೆ ಸೂಚನೆ ನೀಡಿದರು.

ತಕರಾರು, ಕೋರ್ಟ್‌ನಲ್ಲಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಕಂದಾಯ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಪೌತಿ ಖಾತೆ ಮಾಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹೆಸರನ್ನು ಬಿಟ್ಟು ಪೌತಿ ಖಾತೆ ಮಾಡಬಾರದು. ಕಳೆದ ಮಾಹೆಯಲ್ಲಿ ಜಿಲ್ಲಾದ್ಯಂತ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಹುತೇಕ ಅರ್ಜಿಗಳು ಜಮೀನಿಗೆ ದಾರಿ ಬಿಡುವ, ಪೌತಿ ಖಾತೆಗೆ ಸಂಬಂಧಿಸಿದ, ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರು. ಕುಟುಂಬದ ಯಜಮಾನಿ ಖಾತೆಗೆ ಜಮೆಯಾಗುತ್ತಿರುವ ಬಗ್ಗೆ ಸ್ಥಳೀಯ ಮಹಿಳೆಯರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಹಣ ಜಮೆಯಾಗದೆ ಇರುವ ಮಹಿಳೆಯರು ಮಾಹಿತಿ ಪಡೆಯಲು ಅನುವಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯವಾಣಿ ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದರು.

ನಂತರ ಜಿಲ್ಲಾಧಿಕಾರಿಗಳು ಅಮವಾಸ್ಯೆಯ ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಕೊರಟಗೆರೆ ತಾಲೂಕು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.

ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ, ತಹಸೀಲ್ದಾರ್‌ ಎಂ.ಸಿದ್ದೇಶ್ ಹಾಗೂ ಮಂಜುನಾಥ್ ಕೆ., ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.