ಕಾರ್ಖಾನೆ ಹಾರುಬೂದಿಗೆ ಉಸಿರುಗಟ್ಟುತ್ತಿದೆ ಕೊಪ್ಪಳ

| Published : Feb 24 2024, 02:30 AM IST

ಕಾರ್ಖಾನೆ ಹಾರುಬೂದಿಗೆ ಉಸಿರುಗಟ್ಟುತ್ತಿದೆ ಕೊಪ್ಪಳ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರುಗಳು ಗರ್ಭ ಧರಿಸುತ್ತಿಲ್ಲ. ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಬೆಳೆದ ಬೆಳೆಗಳು ಫಲ ನೀಡದಂತಾಗಿದೆ. ರೈತ ಸಮುದಾಯವಂತೂ ದಯನೀಯ ಸ್ಥಿತಿ ತಲುಪಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ನಗರದ ಬಳಿ ತಲೆ ಎತ್ತಿರುವ ಸುಮಾರು 202 ಕಾರ್ಖಾನೆಗಳು ಹೊರಸೂಸುವ ಹಾರುಬೂದಿಯಿಂದ ಕೊಪ್ಪಳ ನಗರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳು ಉಸಿರುಗಟ್ಟುವಂತಾಗಿದೆ. ಜಾನುವಾರು ಮತ್ತು ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ. ಕೃಷಿ ಭೂಮಿ ಮತ್ತು ಮನೆಗಳು ಕಪ್ಪಿಟ್ಟು ಹೋಗಿವೆ.ಜಾನುವಾರುಗಳು ಗರ್ಭ ಧರಿಸುತ್ತಿಲ್ಲ. ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಬೆಳೆದ ಬೆಳೆಗಳು ಫಲ ನೀಡದಂತಾಗಿದೆ. ರೈತ ಸಮುದಾಯವಂತೂ ದಯನೀಯ ಸ್ಥಿತಿ ತಲುಪಿದೆ.ಅಷ್ಟೇ ಏಕೆ ಕಾರ್ಖಾನೆ ವ್ಯಾಪ್ತಿಯ ಗ್ರಾಮಗಳಲ್ಲಿ ಯುವಕರಿಗೆ ಕನ್ಯೆ ಕೊಡುತ್ತಿಲ್ಲ ಎನ್ನುವಷ್ಟು ಸಮಸ್ಯೆ ಗಂಭೀರವಾಗಿದ್ದರೂ ಇದುವರೆಗೂ ಯಾವೊಂದು ಕಾರ್ಖಾನೆಯ ವಿರುದ್ಧ ಕ್ರಮವಾಗದೇ ಇರುವುದು ಸೋಜಿಗದ ಸಂಗತಿಯೇ ಆಗಿದೆ.ಕೊಪ್ಪಳ ಬಳಿ ಕಾರ್ಖಾನೆಗಳು ಹತ್ತಿಪ್ಪತ್ತು ಇವೆ ಎನ್ನುವಾಗಲೇ ಸರ್ಕಾರವೇ ನೀಡಿದ ವರದಿಯಲ್ಲಿ ಬರೋಬ್ಬರಿ 202 ಕಾರ್ಖಾನೆಗಳು ತಲೆ ಎತ್ತಿರುವ ಸತ್ಯ ಗೊತ್ತಾಗಿದೆ. ಅಚ್ಚರಿ ಎಂದರೆ ಇವುಗಳಿಗೆಲ್ಲ ನಿರಪೇಕ್ಷಣಾ ಪತ್ರವನ್ನು ಕೊಟ್ಟಿದ್ದು ಯಾವಾಗ ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಸಾರ್ವಜನಿಕ ಸಭೆಯನ್ನು ಸಹ ಕರೆಯದೇ ಇಷ್ಟೊಂದು ಸಂಖ್ಯೆಯ ಕಾರ್ಖಾನೆಗಳಿಗೆ ಹತ್ತಾರು ವರ್ಷಗಳಲ್ಲಿ ಪರವಾನಗಿ ನೀಡಿದ್ದರ ಹಿಂದೆಯೂ ದೊಡ್ಡ ಗೋಲ್ ಮಾಲ್ ಇದ್ದು, ತನಿಖೆ ನಡೆಸಿದರೆ ಸತ್ಯ ಬಯಲಾಗುತ್ತದೆ.ಏನೇನು ಸಮಸ್ಯೆ?:ಕಾರ್ಖಾನೆಯ ತ್ಯಾಜ್ಯ ದಿನೇದಿನೇ ಹೆಚ್ಚಳವಾಗುತ್ತಲೇ ಇದೆ. ಇದರ ಬಿಸಿ ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ಸುಮಾರು 20ಕ್ಕೂ ಅಧಿಕ ಗ್ರಾಮಗಳು ಬಾಧೆ ಎದುರಿಸುತ್ತಿವೆ.ಸಂಸದ ಸಂಗಣ್ಣ ಕರಡಿ ಅವರ ನಿವಾಸ ಸೇರಿದಂತೆ ಜಿಲ್ಲಾಡಳಿತ ಭವನ, ಜಿಲ್ಲಾಧಿಕಾರಿ ಮನೆಗಳು ಕಪ್ಪಿಟ್ಟು ಹೋಗಿದ್ದು, ಇತರ ಮನೆಗಳ ಸ್ಥಿತಿ ಹೇಗಾಗಿರಬೇಡ ಎಂದು ಊಹಿಸಬಹುದು.ಕೊಪ್ಪಳ ನಗರದ ಶೇ.50ರಷ್ಟು ಮನೆಗಳು ಹಾರುಬೂದಿಯ ಧೂಳಿನ ಗೋಳು ಅನುಭವಿಸುತ್ತಿವೆ.20 ಗ್ರಾಮಗಳು:ಕಾರ್ಖಾನೆ ಬಳಿಯೇ ಇರುವ ನಾಲ್ಕಾರು ಗ್ರಾಮಗಳು ಸೇರಿದಂತೆ ಹತ್ತಾರು ಕಿ.ಮೀ. ವ್ಯಾಪ್ತಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳು ಹಾರುಬೀದಿಯ ಧೂಳಿನಿಂದ ತತ್ತರಿಸಿ ಹೋಗಿವೆ.ಜನರ ಆರೋಗ್ಯ ಹದಗೆಟ್ಟು ಹೋಗಿದೆ. ಹೊಲದಲ್ಲಿ ಬೆಳೆ ಬೆಳೆದು ನಿಂತರೂ ಫಸಲ ನೀಡುತ್ತಿಲ್ಲ ಮತ್ತು ಜಾನುವಾರುಗಳು ಗರ್ಭ ಧರಿಸುತ್ತಿಲ್ಲ ಎನ್ನುವ ಸಮಸ್ಯೆಯೂ ಕಾಡತೊಡಗಿದೆ.ಪುಡಿಗಾಸು ಪರಿಹಾರ:ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿಯೇ ಕಾರ್ಖಾನೆಯ ಕಾನೂನುಬಾಹಿರ ಸ್ಥಾಪನೆ ಬೆಳಕಿಗೆ ಬಂದಿದೆ.ಸ್ಥಾಪಿತವಾಗಿರುವ ಅಷ್ಟೂ ಕಾರ್ಖಾನೆಗಳಿಗೂ ಬಫರ್ ಝೋನ್ ಇಲ್ಲ. ಹೀಗಾಗಿ, ಪಕ್ಕದಲ್ಲಿಯೇ ಇರುವ ರೈತರ ಭೂಮಿಯಲ್ಲಿನ ಬೆಳೆ ಹಾನಿಯಾಗುತ್ತಿವೆ. ಇದಕ್ಕಾಗಿ ಕಾರ್ಖಾನೆಯವರು ಪುಡಿಗಾಸು ಪರಿಹಾರ ನೀಡುತ್ತಾರೆ.ಕಾರ್ಖಾನೆಗೆ ಹೊಂದಿಕೊಂಡಿರುವ ಭೂಮಿಗೆ ಮಾತ್ರ ಪರಿಹಾರ ನೀಡುತ್ತಿದ್ದಾರೆ. ಆದರೆ, ಕಾರ್ಖಾನೆಯ ಹಾರುಬೂದಿ ಸುಮಾರು 15-20 ಕಿ.ಮೀ. ವ್ಯಾಪ್ತಿಯಲ್ಲಿಯೂ ಹರಡುತ್ತಿದೆ.ಕಾರ್ಖಾನೆಯಿಂದ ದೂರ ಇರುವ ಬೂದಿಹಾಳ, ಡೊಂಬರಳ್ಳಿ, ಹಿರೇಸಿಂದೋಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆಗಳು ಕಪ್ಪಿಟ್ಟಿರುತ್ತವೆ. ಇದರಿಂದ ಅವುಗಳು ಹೂ ಕಟ್ಟುವುದೇ ಇಲ್ಲ, ಫಲ ನೀಡುವುದಿಲ್ಲ, ನೀಡಿದರೂ ಸಹ ಇಳುವರಿ ತಗ್ಗುತ್ತಿವೆ.ಪಕ್ಕದಲ್ಲಿಯೇ ಇರುವ ಹಿರೇಬಗನಾಳ ಸೇರಿದಂತೆ ನಾಲ್ಕಾರು ಗ್ರಾಮಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.ಮುಚ್ಚಲು ಆದೇಶ:ವಿಪರೀತ ತ್ಯಾಜ್ಯ ಹರಡುತ್ತಿರುವ ಸುಮಾರು 12 ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಬಂದ್ ಮಾಡುವಂತೆ ವಿಜಯನಗರ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿಗಳು 2023ರಲ್ಲಿಯೇ ಆದೇಶ ಮಾಡಿದ್ದು, ಇದುವರೆಗೂ ಮುಚ್ಚುವ ಆದೇಶ ಜಾರಿಯಾಗಿಲ್ಲ. ಜಲ ಕಾಯ್ದೆ ಮತ್ತು ವಾಯು ಕಾಯ್ದೆಯಡಿ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಪ್ರಗತಿಯಲ್ಲಿಯೇ ಇದ್ದು, ಕಾರ್ಯಗತವಾಗಿಲ್ಲ.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವರದಿಯಲ್ಲಿಯೂ ಈ ಬಗ್ಗೆ ಸ್ಪಷ್ಟವಾಗಿ ನಮೂದಿಸಿದ್ದರೂ ಸಹ ಅದು ಜಾರಿಯಾಗುತ್ತಲೇ ಇಲ್ಲ.ಜನಾಂದೋಲನವಾಗಬೇಕು: ಅಯ್ಯೋ ನಮ್ಮ ಮನೆಯೇ ಕಪ್ಪಿಟ್ಟು ಹೋಗಿವೆ. ಮನೆಯ ಮೇಲೆ ಮತ್ತು ಮನೆಯ ಒಳಗೆಲ್ಲ ಹಾರುಬೂದಿ ಹಾರಿ ಬರುತ್ತಿದೆ. ಇದರ ವಿರುದ್ಧ ಜನಾಂದೋಲನವಾಗಬೇಕು ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.ಶಾಶ್ವತ ಪರಿಹಾರ ಬೇಕು: ನಮ್ಮ ಹೊಲವಂತೂ ವಿಪರೀತ ಹಾಳಾಗಿ ಹೋಗಿದ್ದು, ಈ ಕುರಿತು ನಾನು ಲೋಕಾಯುಕ್ತಕ್ಕೆ ಮತ್ತು ಪರಿಸರ ಇಲಾಖೆಗೂ ದೂರು ಸಲ್ಲಿಸಿದ್ದು, ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಆದರೆ, ಕಾರ್ಖಾನೆಯವರು ಹೈಕೋರ್ಟಿನಲ್ಲಿ ಸ್ಟೇ ಹಾಕಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಸಿಗುವಂತಾಗಬೇಕು. ಜಾನುವಾರುಗಳು ಗರ್ಭ ಧರಿಸುತ್ತಿಲ್ಲ. ಹೊಲದಲ್ಲಿ ಬೆಳೆದ ಬೆಳೆಯ ಮೇವು ತಿನ್ನುತ್ತಿಲ್ಲ ಎನ್ನುತ್ತಾರೆ ರೈತ ಹನುಮಂತಪ್ಪ ಕಡ್ಲಿ.