ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕಳೆದ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ಮಾಡಿ, ಸರ್ಕಾರಿ ರಜೆ ಘೋಷಣೆ ಮಾಡಿ, ಪ್ರತಿ ಸರ್ಕಾರಿ ಕಚೇರಿ ಶಾಲಾ ಕಾಲೇಜುಗಳಲ್ಲಿ ಫೋಟೋ ಇಟ್ಟು ಜಯಂತಿ ಆಚರಣೆ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ಕೆಂಪೇಗೌಡ ಅವರ ಜಯಂತಿಯನ್ನು ನಿರ್ಲಕ್ಷ್ಯಿಸಿದೆ ಎಂದು ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆ ರಾಜ್ಯಾಧ್ಯಕ್ಷ ದೇವರಾಜ್ ಗೌಡ ತಿಳಿಸಿದ್ದಾರೆ.ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಅವರು, ಜಾತ್ಯಾತೀತವಾಗಿ ಎಲ್ಲಾ ಸಮುದಾಯಗಳಿಂದ ಗೌರವಿಸಲ್ಪಡುವ ನಾಯಕರಾಗಿದ್ದು, ರಾಜ್ಯ ಸರ್ಕಾರ ವಿವಿಧ ಜಾತಿ ಸಮುದಾಯ ಮತ ಪಂಥಗಳ ನಾಯಕರ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿದೆ. ಈ ಬಾರಿ ಮಂಡಿಸಿರುವ ಬಜೆಟ್‌ನಲ್ಲಿ ಕೆಂಪೇಗೌಡ ಅವರ ಜಯಂತಿಯನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಕೂಡಲೇ ಸರ್ಕಾರ ಕೆಂಪೇಗೌಡ ಅವರಿಗೆ ಸೂಕ್ತ ಗೌರವ ಸ್ಥಾನಮಾನ ನೀಡಿ ಸರ್ಕಾರಿ ರಜೆಯೊಂದಿಗೆ ಜನ್ಮ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವ ಪಡೆ ರಾಜ್ಯ ಉಪಾಧ್ಯಕ್ಷ ರಂಗಶಾಮಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಈಗಿನ ಸರ್ಕಾರಗಳಿ ಮಾದರಿಯಾಗಿದ್ದು, ಇಂತಹ ನಾಯಕನ ಜನ್ಮದಿನಾಚರಣೆ ಸಕಲ ಗೌರವದೊಂದಿಗೆ ಆಚರಿಸಬೇಕಾಗಿದೆ. ಇದು ಸರ್ಕಾರದ ಕರ್ತವ್ಯ. ಆದರೆ ರಾಜ್ಯ ಸರ್ಕಾರ ಜಯಂತ್ಯುತ್ಸವವನ್ನು ಆಚರಣೆ ಮಾಡುವುದನ್ನು ಬಜೆಟ್‌ನಲ್ಲಿ ಯಾವುದೇ ರೀತಿಯ ಅನುದಾನ ಘೋಷಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಣಭೈರೇಗೌಡ ಅವರ ಸಮಾಧಿ ಇದ್ದು, ಇಲ್ಲಿನ ಸ್ಥಳೀಯ ಆಡಳಿತ ಅದನ್ನು ಅಭಿವೃದ್ಧಿಗೊಳಿಸದೆ ನಿರ್ಲಕ್ಷ್ಯ ಮಾಡಿದೆ. ಕೂಡಲೇ ಇಲ್ಲಿನ ಸ್ಥಳೀಯ ಆಡಳಿತ ಅಭಿವೃದ್ಧಿಗೊಳಿಸಿ ಪುನರುಜ್ಜೀವನಗೊಳಿಸಬೇಕು. ಕೊರಟಗೆರೆ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಯುವಪಡೆಯ ಶಾಖೆಯನ್ನು ಸ್ಥಾಪಿಸಲಾಗುವುದು. ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದಂತಹ ಎಲ್ಲಾ ಹೋರಾಟಗಳಿಗೂ ಸಂಘಟನೆ ಸ್ಪಂದಿಸುವಂತಹ ಕೆಲಸಗಳು ನಡೆಯುತ್ತವೆ ಎಂದರು.
ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಕೆಂಪೇಗೌಡರ ಜಯಂತಿ, ಬಾಲ ಗಂಗಾಧರನಾಥ ಸ್ವಾಮಿ ಜಯಂತಿ ಸೇರಿದಂತೆ ಒಕ್ಕಲಿಗ ಸಮುದಾಯ ಮಹನೀಯರನ್ನು ಸ್ಮರಿಸುವ ಕೆಲಸವಾಗುತ್ತದೆ. ಈ ಪ್ರಯುಕ್ತ ತಾಲೂಕಿನಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಮಹತ್ತರ ಕಾರ್ಯಗಳನ್ನು ಮಾಡುವಂತಹ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಆರ್., ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಎಂ.ಜೆ.ಅರ್., ಆರ್. ಕೆಂಪಯ್ಯ, ಪುಟ್ಟರಾಜು ಜಿ., ರಾಮಚಂದ್ರಯ್ಯ, ವನಜಾಕ್ಷಿ , ಕೃಷ್ಣಪ್ಫ, ಪುಟ್ಟಯ್ಯ, ಗಿರೀಶ್, ಶ್ರೀಧರ್, ಶಿವಣ್ಣ, ಕಾಂತರಾಜು, ರಾಮಂಜಿಣಪ್ಪ, ಲೀಲಾವತಿ, ಕಾಮಣ್ಣ ಜಯರಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.