ಚಿಕ್ಕಮಗಳೂರುಜಿಲ್ಲೆಯ ಮೂಗುತಿಹಳ್ಳಿಯಿಂದ ಮೂಡಿಗೆರೆವರೆಗಿನ 26 ಕಿ.ಮೀ ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿ ಆರಂಭ ಸಾಧ್ಯವಾಗುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಗುರುವಾರ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯ ಮೂಗುತಿಹಳ್ಳಿಯಿಂದ ಮೂಡಿಗೆರೆವರೆಗಿನ 26 ಕಿ.ಮೀ ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿ ಆರಂಭ ಸಾಧ್ಯವಾಗುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಗುರುವಾರ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.

ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಪರಿಹರಿಸುವಂತೆ 8 ರಿಂದ 10 ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರೂ ಪರಿಹಾರವಾಗಿಲ್ಲ. ವಿಳಂಬ ನೀತಿಯಿಂದ ಕಾಮಗಾರಿ ತಡವಾಗುತ್ತಿದೆ. ಕೇಂದ್ರ ಸರ್ಕಾರದ ಭೂ ಸಾರಿಗೆ ಇಲಾಖೆ ಮಧ್ಯ ಪ್ರವೇಶಿಸಿ ಕರ್ನಾಟಕ ರಾಜ್ಯದೊಂದಿಗೆ ಸಮಾಲೋಚಿಸಿ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಲು ಕ್ರಮ ಜರುಗಿಸಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಮೂಗುತಿಹಳ್ಳಿಯಿಂದ ಮೂಡಿಗೆರೆವರೆಗಿನ ಹೆದ್ದಾರಿಯ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ತಾಂತ್ರಿಕ ಬಿಡ್‌ ತೆರೆಯಲಾಗಿದೆ. ಭೂಮಿ ನೀಡಿದ್ದ 262 ರೈತರಲ್ಲಿ ಹೆಚ್ಚಿನವರಿಗೆ ಹಣ ಸಂದಾಯವಾಗಿಲ್ಲ. ಅದಕ್ಕೆ ಕಾರಣ ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ವಿಳಂಬ ನೀತಿ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಜತೆಗೆ ಚಿಕ್ಕಮಗಳೂರಿನಿಂದ ಬೇಲೂರುವರೆಗಿನ 26 ಕಿಮೀ ಉದ್ದದ ಹೆದ್ದಾರಿ 372 ಭೂಸ್ವಾಧೀನ ಪ್ರಕ್ರಿಯೆಗಳು ಆರಂಭವಾಗಿಲ್ಲ. ಮಾಳ, ಎಸ್‌ಕೆ ಗಡಿಯಿಂದ ಕೆರೆಕಟ್ಟೆ, ತನಿಗೋಡುವರೆಗಿನ 29 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 169 ಈ ಹಿಂದೆ 1999 ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈ ಹೆದ್ದಾರಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವು ದರಿಂದ ಬದಲಿ ಭೂಮಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಅರಣ್ಯ ಇಲಾಖೆ ಇಲ್ಲಿಯವರೆಗೂ ನೀಡಿಲ್ಲ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವಿಳಂಬ ನೀತಿಯಿಂದ ಈ ಎಲ್ಲಾ ಹೆದ್ದಾರಿಗಳ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವಾಗಿದೆ. ಆದರೆ, ರೈತರು ತಮ್ಮ ಅಗತ್ಯ ದಾಖಲೆ ನೀಡುತ್ತಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ರೈತರ ಎಲ್ಲಾ ದಾಖಲೆಗಳು ಕಂದಾಯ ಇಲಾಖೆಯಲ್ಲೇ ಇರುವ ಮನವರಿಕೆ ಇದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಸಂಸದರು ತಿಳಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಫೋಟೋ ಕೋಟಾ ಶ್ರೀನಿವಾಸ್‌ ಪೂಜಾರಿ ಫೋಟೋ ಬಳಸುವುದು