ಸಾರಾಂಶ
ಬಳ್ಳಾರಿ: ನಗರದ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರ ಸ್ವಾಮಿಯ ಮಹಾರಥೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವದ ಹಿನ್ನೆಲೆಯಲ್ಲಿ ಕೋಟೆ ಮಲ್ಲೇಶ್ವರಸ್ವಾಮಿ ವಿವಿಧ ಪುಷ್ಪ, ಪತ್ರೆಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಶುರುವಾದವು. ಪಂಚಾಭಿಷೇಕ, ರುದ್ರಾಭಿಷೇಕ, ಜಲಾಭಿಷೇಕ ಬಳಿಕ ಮಲ್ಲೇಶ್ವರಸ್ವಾಮಿಗೆ ಪುಷ್ಪಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ನಾನಾ ಪೂಜಾ ವಿಧಿ ವಿಧಾನಗಳು ನಡೆದವು.ಬೆಳಗ್ಗೆಯಿಂದಲೇ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಮಧ್ಯಾಹ್ನದ ವರೆಗೆ ದೇವರ ದರ್ಶನಕ್ಕಾಗಿ ಭಕ್ತರ ಆಗಮನ ಮುಂದುವರಿದಿತ್ತು. ಮಹಾರಥೋತ್ಸವ ಅಂಗವಾಗಿ ಇಲ್ಲಿನ ತೇರುಬೀದಿಯಲ್ಲಿ ಬೆಳಗ್ಗೆ ಮಲ್ಲೇಶ್ವರ ಸ್ವಾಮಿಯ ಮಡಿತೇರು ಎಳೆಯಲಾಯಿತು. ಅರ್ಚಕರಿಂದ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ತೇರನ್ನು ನಿಂತ ಸ್ಥಳದಿಂದ ಮುಂದಕ್ಕೆ ಎಳೆದು ನಿಲ್ಲಿಸಲಾಯಿತು. ನೂರಾರು ಭಕ್ತರು ಮಡಿತೇರು ಪೂಜೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಸಂಜೆ 4.30ಕ್ಕೆ ನಾನಾ ಬಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿದ್ದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ದೇವಸ್ಥಾನದ ಅರ್ಚಕರಿಂದ ಪೂಜೆ ಸಲ್ಲಿಸಿದ ಬಳಿಕ ಚಾಲನೆ ದೊರೆಯಿತು.ಸಾವಿರಾರು ಭಕ್ತರ ಜಯಘೋಷ, ವಿವಿಧ ಮಂಗಳ ವಾದ್ಯಗಳೊಂದಿಗೆ ತೇರುಬೀದಿಯಲ್ಲಿ ರಥೋತ್ಸವ ಸಾಗಿಬಂತು. ಕಣೇಕಲ್ ಬಸ್ ನಿಲ್ದಾಣದ ಬಳಿಯ ಎದುರು ಬಸವಣ್ಣ ಹಾಗೂ ಗಣೇಶ ದೇವಸ್ಥಾನದ ವರೆಗೆ ರಥ ಎಳೆದೊಯ್ದು, ಅಲ್ಲಿಂದ ಪುನಃ ಮೂಲಸ್ಥಾನಕ್ಕೆ ತರಲಾಯಿತು. ತಾಷಾರಾಮ್ ಡೋಲ್, ಡೊಳ್ಳು ಕುಣಿತ, ನಂದಿಕೋಲು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಬಿ. ಶ್ವೇತಾ ಹಾಗೂ ವಿವಿಧ ಸಮಾಜದ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ರಥೋತ್ಸವ ವೇಳೆ ಭಕ್ತರು ಬಾಳೆಹಣ್ಣು, ಹೂವು ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಒಂದು ವಾರಗಳ ಕಾಲ ಜಾತ್ರೆ ನಡೆಯಲಿದೆ.ಬಳ್ಳಾರಿ ಎಂಬ ಹೆಸರು ಬರಲು ಕೋಟೆ ಮಲ್ಲೇಶ್ವರನೇ ಕಾರಣ ಎಂದು ಹೇಳಲಾಗುತ್ತದೆ. ಕೋಳೂರಿನ ಮಲ್ಲಯ್ಯ ಎಂಬ ಶಿವಭಕ್ತ ವ್ಯಾಪಾರಕ್ಕೆಂದು ಬಳ್ಳಾರಿಗೆ ಬಂದಿದ್ದ. ಶಿವಪೂಜೆ ಮಾಡಲು ಬಳ್ಳವನ್ನೇ ಬೋರಲವಾಗಿಟ್ಟು ಪೂಜೆಗೈದ ಈ ಸ್ಥಳವೇ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ. ಬಳ್ಳವನ್ನಿಟ್ಟು ಪೂಜೆಗೈದ ಕಾರಣಕ್ಕೆ ಬಳ್ಳಾರಿ ಎಂದು ಹೆಸರು ಬಂತು. ಕೋಟೆ ಪ್ರದೇಶದಲ್ಲಿ ಈ ದೇವಸ್ಥಾನ ಇರುವುದರಿಂದ ಕೋಟೆ ಮಲ್ಲೇಶ್ವರ ಎಂದು ಹೆಸರು ಬಂದಿದೆ ಎಂದು ತಿಳಿದು ಬರುತ್ತದೆ.