ಕರ್ನಾಟಕ ರಾಜ್ಯದ ಜನಪ್ರಿಯ ರಾಜಕಾರಣಿ ರೈತಪರ ಹೋರಾಟಗಾರ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಶ್ರಮಿಸಿದ ಮುಂಚೂಣಿ ನಾಯಕ ಬಿ.ಎಸ್‌. ಯಡಿಯೂರಪ್ಪ ರಾಜಕಾರಣಕ್ಕೆ ಬಂದು ಭರ್ತಿ ಅರ್ಧ ಶತಮಾನ ತುಂಬಿದ ಸಂತಸದ ಘಳಿಗೆಯನ್ನು ಸಾಕಾರಗೊಳಿಸಲು ಕೋಟೆನಾಡು ಚಿತ್ರದುರ್ಗದಲ್ಲಿ ಮೇ 9ರಂದು ಆಯೋಜಿಸಿರುವ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ದತೆಗಳು ಪೂರ್ಣಗೊಂಡಿವೆ.

 ಚಿತ್ರದುರ್ಗ : ಕರ್ನಾಟಕ ರಾಜ್ಯದ ಜನಪ್ರಿಯ ರಾಜಕಾರಣಿ ರೈತಪರ ಹೋರಾಟಗಾರ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಶ್ರಮಿಸಿದ ಮುಂಚೂಣಿ ನಾಯಕ ಬಿ.ಎಸ್‌. ಯಡಿಯೂರಪ್ಪ ರಾಜಕಾರಣಕ್ಕೆ ಬಂದು ಭರ್ತಿ ಅರ್ಧ ಶತಮಾನ ತುಂಬಿದ ಸಂತಸದ ಘಳಿಗೆಯನ್ನು ಸಾಕಾರಗೊಳಿಸಲು ಕೋಟೆನಾಡು ಚಿತ್ರದುರ್ಗದಲ್ಲಿ ಮೇ 9ರಂದು ಆಯೋಜಿಸಿರುವ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ದತೆಗಳು ಪೂರ್ಣಗೊಂಡಿವೆ.

ಚಿತ್ರದುರ್ಗ ಅಭಿಮಾನೋತ್ಸವದ ಪ್ರಯುಕ್ತ ಸಿಂಗಾರ

ಮಧ್ಯಕರ್ನಾಟಕದ ಅನೇಕ ಜಿಲ್ಲೆಗಳು ಸಂಧಿಸುವ ಕೋಟೆನಾಡು ಚಿತ್ರದುರ್ಗ ಅಭಿಮಾನೋತ್ಸವದ ಪ್ರಯುಕ್ತ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಕಾರ್ಯಕರ್ತರು ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಇಡೀ ಚಿತ್ರದುರ್ಗ ಕೇಸರಿ ಬಣ್ಣದಲ್ಲಿ ಮಿಂದೆದ್ದಿದೆ.

ಚಳ್ಳಕೆರೆ ಗೇಟ್‌ನಿಂದ ನಗರಕ್ಕೆ ಪ್ರವೇಶಿಸುವ ಮಾರ್ಗದೆಲ್ಲೆಡೆ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರ ಇರುವ ಪೋಸ್ಟರ್, ಬ್ಯಾನರ್‌ಗಳು ಗಮನಸೆಳೆಯುತ್ತಿವೆ. ಅಭಿಮಾನದ ನಾಯಕನ ಫ್ಲೆಕ್ಸ್‌ಗಳು ರಸ್ತೆಯ ಎರಡೂ ಇಕ್ಕೆಲಗಳಲ್ಲೂ ರಾರಾಜಿಸುತ್ತಿವೆ. ಡಿವೈಡರ್‌ಗಳ ಮಧ್ಯೆಯೂ ಬಿಎಸ್ವೈ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ಮದಕರಿ, ಅಂಬೇಡ್ಕರ್, ಗಾಂಧೀ ವೃತ್ತ, ಕನಕವೃತ್ತ ಕಂಗೊಳಿಸುತ್ತಿವೆ.

ಬೃಹತ್ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ

ಅಧಿಕೃತವಾಗಿ ಇದು ಪಕ್ಷದ ಕಾರ್ಯಕ್ರಮ ಆಗದಿದ್ದರೂ ಇಡೀ ಭಾರತೀಯ ಜನತಾ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಬೃಹತ್ ಪೆಂಡಾಲ್ ನಿರ್ಮಾಣ ಮಾಡಿ ಬರುವ ಜನರಿಗೆ ಬಿಸಿ ಗಾಳಿಯಿಂದ ಮುಕ್ತಿ ಕಾಣಿಸಲು ಬೃಹತ್ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ.

ಅಭಿಮಾನೋತ್ಸವಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಹಾಲಿ, ಮಾಜಿ ಶಾಸಕ, ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆಯ ಪೂರ್ವ ಸಿದ್ಧತೆಗಳೂ ಕೂಡ ದಿನವಿಡೀ ವೇದಿಕೆ ನಿರ್ಮಾಣ ಮಾಡುತ್ತಿರುವ ಕಡೆ, ಊಟದ ಕೌಂಟರ್‌ಗಳು, ಪಾರ್ಕಿಂಗ್ ಸ್ಥಳದ ತಪಾಸಣೆ ಸೇರಿದಂತೆ ಅಗತ್ಯ ಬಂದೋಬಸ್ತ್ ಗೆ ಪೋಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಇತರೆ ಪೋಲೀಸ್ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ದಾವಣಗೆರೆ ರಸ್ತೆಯ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಸಮೀಪದ ಮೈದಾನದಲ್ಲಿ ಬೀಡುಬಿಟ್ಟಿದೆ.

ಕಳೆದ ಒಂದು ವಾರದಿಂದ ಇಲ್ಲಿ ತಯಾರಿ ನಡೆಯುತ್ತಿರುವಾಗಲೇ ದಾವಣಗೆರೆ ಪೂರ್ವ ವಲಯದ ಪೋಲೀಸ್ ಮಹಾ ನಿರೀಕ್ಷಕ ರವಿಕಾಂತೇಗೌಡ ಅವರ ಮುಂದಾಳತ್ವದಲ್ಲಿ ಜಿಲ್ಲೆಯ ಪೋಲೀಸರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ.ಕೇಂದ್ರದ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೋಲೀಸರ ಬಿಗಭದ್ರತೆ ಮತ್ತಷ್ಟು ಗಟ್ಟಿಯಾಗುತ್ತಿದೆ. ಶುಕ್ರವಾರ ಎಸ್ಪಿಜಿ ತಂಡ ಕಾರ್ಯಕ್ರಮ ಆಯೋಜಿಸಿರುವ ಸ್ಥಳಕ್ಕೆ ಬಂದು ವೇದಿಕೆ ಸೇರಿದಂತೆ ಇಡೀ ಕಾರ್ಯಕ್ರಮದ ಒಟ್ಟಾರೆ ಚಿತ್ರಣದ ಮಾಹಿತಿ ಕಲೆಹಾಕಿತು.

ಸಿಂಗಾರಗೊಂಡ ದುರ್ಗ:

ಎಲ್ಲಿ ನೋಡಿದರೂ ಅಭಿಮಾನೋತ್ಸವದ ಬ್ಯಾನರ್‌ಗಳು ವಿಜೃಂಭಿಸುತ್ತಿವೆ. ಆಳೆತ್ತರದ ಪ್ಲೆಕ್ಸ್‌ಗಳು ನೋಡುಗರ ಮೈ ಮನ ತಣಿಸುವಂತೆ ಮಾಡುತ್ತಿವೆ. ಲೈಟಿಂಗ್ ವ್ಯವಸ್ಥೆ ಸೇರಿದಂತೆ ವೇದಿಕೆ ತಯಾರಿಗೆ ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಬಿಜೆಪಿ ಶಾಸಕರು ಊಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಖುದ್ದು ಕಾರ್ಯಕ್ರಮದ ರೂಪುರೇಷೆಗಳ ಸಿದ್ಧತೆಯ ಉಸ್ತುವಾರಿ ನೋಡುತ್ತಿದ್ದಾರೆ. ಇದರ ಜತೆಗೆ ಇವರ ಸಹೋದರ ಸಂಸದ ಬಿ.ವೈ.ರಾಘವೇಂದ್ರ ಕೂಡ ಅಪ್ಪನ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಟೊಂಕಕಟ್ಟಿ ನಿಂತಿದ್ದಾರೆ.