ಕೋತಿಗಳಿರುವ ಕಾರಿಂಜಬೆಟ್ಟದಲ್ಲಿ ಕೋತಿರಾಜ್ ಸಾಹಸ...!

| Published : Mar 24 2025, 12:34 AM IST

ಸಾರಾಂಶ

ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅವರು ನಿಗದಿಪಡಿಸಿದಂತೆ ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ್ದು , ಕೇವಲ ಅರ್ಧ ತಾಸಿಗಿಂತಲೂ ಮೊದಲೇ 350 ಅಡಿ ಎತ್ತರದ ಕರಿಬಂಡೆ ನಿರಾಯಾಸವಾಗಿ ಏರಿ, ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾನೆ.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ

ಕಾರಿಂಜ ಎಂದರೆ ಅಲ್ಲಿದೆ ರಾಶಿರಾಶಿ ಕೋತಿಗಳು.. ಅಂತಹಾ ಕೋತಿಗಳಿರುವ ಕಾರಿಂಜಬೆಟ್ಟದಲ್ಲಿ ಕೋತಿರಾಜ್ ಸಾಹಸ... ಹೌದು..ಸುಡುಬಿಸಿಲಿನಲ್ಲಿ ಜ್ಯೋತಿರಾಜ್ ಕಾರಿಂಜದ ಕರಿಬೆಟ್ಟವನ್ನು ಏರುತ್ತಿದ್ದರೆ, ಇತ್ತ ಬೆರಗು ಗಣ್ಣಿನಿಂದ ನೋಡುತ್ತಿದ್ದ ಅಭಿಮಾನಿಗಳು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಕಳೆದ ನಾಲ್ಕು ದಶಕಗಳಿಂದ ಅದೆಷ್ಟೋ ಬೆಟ್ಟ, ಕಟ್ಟಡ, ಜಲಪಾತಗಳಲ್ಲಿ ತನ್ನ ಕರಾಮತ್ತು ತೋರಿಸಿದ್ದ ಜ್ಯೋತಿರಾಜ್ ಕಿರೀಟಕ್ಕೆ ಕಾರಿಂಜ ಬೆಟ್ಟ ಏರಿದ ಆ ಕ್ಷಣ ಮತ್ತೊಂದು ಗರಿ ಎನ್ನಿಸಿತು.

ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅವರು ನಿಗದಿಪಡಿಸಿದಂತೆ ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ್ದು , ಕೇವಲ ಅರ್ಧ ತಾಸಿಗಿಂತಲೂ ಮೊದಲೇ 350 ಅಡಿ ಎತ್ತರದ ಕರಿಬಂಡೆ ನಿರಾಯಾಸವಾಗಿ ಏರಿ, ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾನೆ.

ಕೊಂಬು ಕಹಳೆ ಮೊಳಗಿಸುತ್ತಿದ್ದಂತೆಯೇ ನೆರೆದವರು ‘ಜೈ ಆಂಜನೇಯ’ ಎಂದು ಜೈಕಾರ ಕೂಗುತ್ತಿದ್ದಂತೆ ಬೆಟ್ಟದ ಮೇಲೆ ಏರಿಯೇ ಬಿಟ್ಟಿದ್ದ.

ಬಿಸಿಲಿನ‌ ತಾಪಕ್ಕೆ ಕಾದು ಕಾದು ಸುಡುವ ಕಲ್ಲಿನ ಮೇಲೆ ಏರುವ ಆತನ ಸಾಹಸಕ್ಕೆ ಕಾರಿಂಜದಲ್ಲಿ ನೆರೆದ ಜನರಿಂದ ಓಹ್ ಎಂಬ ಉದ್ಗಾರವೂ ಕೇಳಿ ಬಂತು.ಜನತೆಯ ಹಣ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ: ಬೆಟ್ಟ ಏರುವ ಮುನ್ನ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಜ್ಯೋತಿರಾಜ್, ಪ್ರತಿಯೊಬ್ಬ ಮಕ್ಕಳೂ ಕ್ರೀಡಾ ಸ್ಪೂರ್ತಿ ಬೆಳೆಸಿಕೊಳ್ಳಬೇಕು, ವಿಶೇಷ ಕಲೆಯನ್ನು ಪ್ರದರ್ಶಿಸುವ ಸಂದರ್ಭ ಜನತೆ ನೀಡುವ ಹಣ ಬಳಸಿ, ಕ್ರೀಡಾ ತರಬೇತಿಕೇಂದ್ರ ಸ್ಥಾಪಿಸುವ ಇರಾದೆ ಇದೆ ಎಂದರು.‌

ಆರಂಭದಲ್ಲಿ ಕೇಸರಿ ಧ್ವಜ‌ನೀಡಿ ಅವರಿಗೆ ಶುಭಾಶಯ‌ ಕೋರಲಾಯಿತು.‌ ಕೊನೆಯಲ್ಲಿ ಕೇಸರಿ ಧ್ವಜ ಹಾಗೂ ಕನ್ನಡದ‌ ಬಾವುಟ ಹಾರಿಸುವ ಮೂಲಕ ಸಂಭ್ರಮಿಸಿದ ಜ್ಯೋತಿರಾಜ್ ಮುಂದೆ ಅಮೇರಿಕಾದ ಏಂಜಲ್ ಫಾಲ್ಸ್ ಏರುವ ಗುರಿ ಹೊಂದಿದ್ದೇನೆ ಎಂದರು.

ಸಾಲ ತೀರಿಲ್ಲ:

ಕರ್ನಾಟಕದ ಸ್ಪೈಡರ್ ಮ್ಯಾನ್, ಮಂಕಿ ಮ್ಯಾನ್ ಆಫ್ ಕರ್ನಾಟಕ ಎಂದೆಲ್ಲ ‌ಹೆಸರು‌ ಪಡೆದಿರುವ ಜ್ಯೋತಿರಾಜ್ ಗೆ ಇನ್ನು ಕೂಡ ಸ್ವಂತ ಸೂರಿಲ್ಲವಂತೆ, ಚಿಕಿತ್ಸೆಗಾಗಿ ಮಾಡಿದ ಸಾಲ ಇನ್ನೂ ತೀರಿಲ್ಲ ಎಂದು ನೊಂದು ನುಡಿಯುತ್ತಾರೆ.

ಮೂರನೇ ವಯಸ್ಸಿಗೆ ಜ್ಯೋತಿರಾಜ್ ಅವರು ತಮಿಳುನಾಡಿನ ಜಾತ್ರೆಯಲ್ಲಿ ಪೋಷಕರಿಂದ ಕೈ ತಪ್ಪಿ ಹೋದ ಇವರು, ತಮಿಳುನಾಡು ಮೂಲದ ವ್ಯಕ್ತಿಯೊಬ್ಬರ ಆಶ್ರಯದಲ್ಲಿ ಚಿತ್ರದುರ್ಗದಲ್ಲಿಯೇ ಬೆಳೆದವರು. ಕಷ್ಟದಲ್ಲೇ ದಿನ ಕಳೆಯುತ್ತಿದ್ದ ಇವರಿಗೆ ಒಂದೊಮ್ಮೆ‌ ಅನಾಥಪ್ರಜ್ಞೆ ಕಾಡಿದ್ದು, ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗಿ ಬೆಟ್ಟ ಏರುತ್ತಾರೆ.

ಆದರೆ ಈತ ಬೆಟ್ಟವನ್ನು ಏರುವ ಶೈಲಿಯನ್ನು ‌ನೋಡಿದ ಪ್ರೇಕ್ಷಕರು ಮೂಕವಿಸ್ಮಿತರಾಗುತ್ತಾರೆ. ಮತ್ತು ಚಪ್ಪಾಳೆ ತಟ್ಟುತ್ತಾರೆ. ಆದರೆ ಸಾಯಲು ಮುಂದಾಗಿದ್ದ ಜ್ಯೋತಿರಾಜ್ ಗೆ ಜನರನ್ನು ನೋಡಿ ಇಂದು ಬೇಡ ನಾಳೆ ಎಂದು ವಾಪಸು ಬರುವಾಗ , ಕೆಳಗೆ ನೆರೆದ ಜನ ಅಭಿನಂದಿಸುತ್ತಾರೆ, ಈತನ ಜೊತೆ ಪೋಟೋ ಕ್ಲಿಕ್ಕಿಸಿಕೊಂಡು ಸಾಧನೆಯ ಬಗ್ಗೆ ಗೌರವದ ಮಾತುಗಳನ್ನಾಡುತ್ತಾರೆ. ಅ ದಿನವೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ದಿನವಾಯಿತು ಎನ್ನುತ್ತಾರೆ ಅವರು. ಹೀಗೆ

ಇಲ್ಲಿಯತನಕ ಅವರಿಗೆ ಒಟ್ಟು 11 ಆಪರೇಷನ್‌ ಆಗಿದೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದಾರೆ. ಆದರೆ, ಇವರು ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಅವರಿವರನ್ನು ಕಾಪಾಡಲು ಹೋದಾಗ ಬಿದ್ದು ಗಾಯಳಾಗಿರುವುದೇ ಹೆಚ್ಚು ಅನ್ನೋದು ಅವರ ಮಾತು. 900 ಅಡಿ ಆಳದ ಜೋಗದಲ್ಲಿ ಸುಮಾರು ಸರಿ ಇಳಿದಿದ್ದಾರೆ. ಅಷ್ಟೇಕೆ? ದೇಶಾದ್ಯಂತ ಜನರ ಕಾಪಾಡಲು ಹೋಗಿದ್ದಾರೆ. ಜೋಗ ಒಂದರಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಜಲಪಾತವನ್ನು 18 ಬಾಕಿ ಹತ್ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇಲ್ಲಿಯತನಕ ಒಟ್ಟು 50ಕ್ಕೂ ಹೆಚ್ಚು ಯುವಕರಿಗೆ ಕೋತಿರಾಜ್ ತರಬೇತಿ ನೀಡಿದ್ದಾರೆ. ಪ್ರಸ್ತುತ 10 ಯುವಕರು ತರಬೇತಿ ಪಡೆಯುತ್ತಿದ್ದಾರೆ. ಬಂಡೆ ಹತ್ತುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 16-20 ಯುವಕರು ಸೇನೆ ಸೇರಿದ್ದಾರೆ. ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ.

ದೇವಸ್ಥಾನದ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಜ್ಯೋತಿರಾಜ್ ಅವರನ್ನು ಗೌರವಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕರಾದ ವಿನಯ್, ಪ್ರಸನ್ನ, ದಿನೇಶ್ ನಾಯಕ್ ಮೊದಲಾದವರು ಇದ್ದರು.