ನಾಳೆ ಪುತ್ತೂರಿನಲ್ಲಿ ಡಾ.ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಪೌರಸನ್ಮಾನ

| Published : Jan 03 2024, 01:45 AM IST / Updated: Jan 03 2024, 12:08 PM IST

sugunendra-teertha-swamiji
ನಾಳೆ ಪುತ್ತೂರಿನಲ್ಲಿ ಡಾ.ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಪೌರಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ಕೃಷ್ಣಮಠದ ಪರ್ಯಾಯ ಪೀಠಾರೋಹಣವನ್ನು ಮಾಡಲಿರುವ ಉಡುಪಿ ಪುತ್ತಿಗೆ ಮಠದ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಹಾಗೂ ಅವರ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಗಳಿಗೆ ಜ.೪ರಂದು ಪುತ್ತೂರಲ್ಲಿ ಪೌರ ಸನ್ಮಾನ ನಡೆಯಲಿದೆ.

ಕನ್ನಡಪ್ರಭವಾರ್ತೆ ಪುತ್ತೂರುಚತುರ್ಥ ಬಾರಿಗೆ ಉಡುಪಿಯ ಕೃಷ್ಣಮಠದ ಪರ್ಯಾಯ ಪೀಠಾರೋಹಣವನ್ನು ಮಾಡಲಿರುವ ಉಡುಪಿ ಪುತ್ತಿಗೆ ಮಠದ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಹಾಗೂ ಅವರ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಅವರಿಗೆ ಜ. 4ರಂದು ಸಂಜೆ 4 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಪೌರಸನ್ಮಾನ, ನಿಧಿ ಸಮರ್ಪಣೆ ಹಾಗೂ ಕೋಟಿ ಗೀತಾ ಲೇಖನ ಯಜ್ಞದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ಪೌರಸನ್ಮಾನ ಸಮಿತಿ ಅಧ್ಯಕ್ಷ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನಲ್ಲಿ 2ನೇ ಬಾರಿಗೆ ಸ್ವಾಮೀಜಿ ಅವರಿಗೆ ಪೌರಸನ್ಮಾನ ನಡೆಯುತ್ತಿದ್ದು, ಬೆಳ್ತಂಗಡಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸುವ ಸ್ವಾಮೀಜಿದ್ವಯರಿಗೆ ಏವಳದ ಮುಂಭಾಗದಲ್ಲಿ ವಾದ್ಯಘೋಷಗಳೊಂದಿಗೆ ಸ್ವಾಗತ ಕೋರಲಾಗುವುದು. ನಂತರ ರಥಬೀದಿಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ನಟರಾಜ ವೇದಿಕೆಗೆ ಕರೆದೊಯ್ಯಲಾಗುವುದು. ಕಾರ್ಯಕ್ರಮದಲ್ಲಿ ಪೌರಸನ್ಮಾನ ನಡೆಯಲಿದೆ. ಅನಂತರ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆಗೆ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ವಹಿಸಲಿದ್ದಾರೆ. ಸಮಿತಿ ಗೌರವಾಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ, ಉದ್ಯಮಿ ಸವಣೂರು ಸೀತಾರಾಮ ರೈ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಮಾಜಿ ಶಾಸಕ ಸಂಜೀವ ಮಠಂದೂರು, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ವಾಮೀಜಿದ್ವಯರಿಗೆ ಹಾರಾರ್ಪಣೆ ಮಾಡಲು ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದರು.

ವಿಶ್ವ ಗೀತಾ ಪರ್ಯಾಯ: ಈ ಬಾರಿಯ ಪರ್ಯಾಯಕ್ಕೆ ವಿಶ್ವಗೀತಾ ಪರ್ಯಾಯ ಎಂದೇ ನಾಮಕರಣ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂಧರ್ಮದ ಏಳಿಗೆಗಾಗಿ ಶ್ರಮಿಸುತ್ತಿರುವ ಪುತ್ತಿಗೆ ಮಠದ ಡಾ.ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿ ಅವರು ಅಮೇರಿಕಾದಲ್ಲಿಯೂ ಸುಮಾರು 15 ಮಠಗಳನ್ನು ನಿರ್ಮಾಣ ಮಾಡುವ ಮೂಲಕ ಹಿಂದು ಧರ್ಮಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದು ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಭಾಸ್ಕರ ಬಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ಉಪಸ್ಥಿತರಿದ್ದರು.