ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಮತ್ತು ತಂಗಿ ಅಮೃತಾ ಅವರನ್ನು ದೂರುದಾರ ಅಕ್ಷಯಕುಮಾರ ಕೊಟ್ಟೂರಿನ ತನ್ನ ನಿವಾಸದಲ್ಲಿ ಹತ್ಯೆಗೈದು ಮನೆಯಲ್ಲಿಯೇ ಹೂತು ಹಾಕಿರುವುದು ನಂತರದಲ್ಲಿ ಗೊತ್ತಾಗಿತ್ತು.

ಕೊಟ್ಟೂರು: ಪಟ್ಟಣದ ಮರಿಕೊಟ್ಟೂರೇಶ್ವರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಜ.30ರಂದು ನಡೆದಿದ್ದ ತ್ರಿವಳಿ ಹತ್ಯೆ ಪ್ರಕರಣದ ತನಿಖೆ ಕೊಟ್ಟೂರು ಪೊಲೀಸರಿಗೆ ಹಸ್ತಾಂತರಗೊಂಡಿದೆ.

ಬೆಂಗಳೂರಿನ ಮೈಕೋ ಪೊಲೀಸ್ ಉಪ ವಿಭಾಗದ ತಿಲಕನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ನಂತರ ಹಲವು ಬಗೆಯ ತಿರುವುಗಳನ್ನು ಪಡೆದುಕೊಂಡು, ದೂರುದಾರನೇ ತನ್ನ ತಂದೆ, ತಾಯಿ, ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತು.

ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಮತ್ತು ತಂಗಿ ಅಮೃತಾ ಅವರನ್ನು ದೂರುದಾರ ಅಕ್ಷಯಕುಮಾರ ಕೊಟ್ಟೂರಿನ ತನ್ನ ನಿವಾಸದಲ್ಲಿ ಹತ್ಯೆಗೈದು ಮನೆಯಲ್ಲಿಯೇ ಹೂತು ಹಾಕಿರುವುದು ನಂತರದಲ್ಲಿ ಗೊತ್ತಾಗಿತ್ತು. ಹತ್ಯೆ ಬಳಿಕ ಬೆಂಗಳೂರಿಗೆ ತೆರಳಿದ್ದ ಆರೋಪಿಯು ತಂದೆ, ತಾಯಿ, ತಂಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲೆಂದು ಬಂದಿದ್ದಾಗ ಕಾಣೆಯಾಗಿದ್ದಾರೆ ಎಂದು ತಿಲಕನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ತನಿಖೆ ನಡೆಸಿದ ಪೊಲೀಸರಿಗೆ ದೂರುದಾರನೇ ಕೊಲೆಗಾರ ಎಂಬುದು ತಿಳಿಯಿತು. ಪೊಲೀಸರ ದಾರಿ ತಪ್ಪಿಸಲು ಆರೋಪಿ ಅಕ್ಷಯ್ ಹಲವು ಕಥೆಗಳನ್ನು ಕಟ್ಟಿದ್ದ ಎಂಬುದೂ ಬೆಳಕಿಗೆ ಬಂದಿತ್ತು. ತಿಲಕ್ ನಗರ ಠಾಣೆ ಪೊಲೀಸರು ಒಂದು ವಾರದಿಂದ ತನಿಖೆ ಕೈಗೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸ್ನೇಹಿತ ವಸಂತನನ್ನು ವಶಪಡಿಸಿಕೊಂಡಿದ್ದರು. ಇದೀಗ ಅವರ ತನಿಖೆ ಪೂರ್ಣಗೊಂಡಿದೆ.

ತಿಲಕನಗರ ಠಾಣೆ ಇನ್‌ಸ್ಪೆಕ್ಟರ್‌ ಈಗಾಗಲೇ ಶೇ.70ರಷ್ಟು ತನಿಖೆ ಪೂರ್ಣಗೊಳಿಸಿದ್ದಾರೆ. ಇದೀಗ ಪ್ರಕರಣವನ್ನು ಕೊಟ್ಟೂರು ಠಾಣೆಗೆ ಹಸ್ತಾಂತರಿಸಿದ್ದು, ತನಿಖೆ ಮುಂದುವರಿಸಲಾಗುವುದು ಎನ್ನುತ್ತಾರೆ ಕೊಟ್ಟೂರು ಸಿಪಿಐ ಡಿ.ದುರುಗಪ್ಪ.