ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜವಾಬ್ದಾರಿಯುತ ಪತ್ರಕರ್ತರಾಗಿ ಯಾವುದೇ ತಪ್ಪು ಮಾಡಿದಾಗ ಅದನ್ನು ಗೊತ್ತಿಲ್ಲ ಎನ್ನಬಾರದು. ಬದಲಾಗಿ ತಿಳಿದುಕೊಂಡಿರಬೇಕು ಎಂದು ಮೈಸೂರಿನ ಕೆಪಿಎ ಉಪ ಪೋಲೀಸ್ ಅಧೀಕ್ಷಕ ಮಹಮ್ಮದ್ ಹಾಸ್ಮತ್ ಖಾನ್ ಹೇಳಿದರು.ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭಾರತೀಯ ನಾಗರೀಕ ನ್ಯಾಯ ಮಸೂದೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಜ್ಞಾನಕ್ಕೆ ಕಾನೂನಿನಲ್ಲಿ ಕ್ಷಮೆ ಇಲ್ಲ. ಪ್ರತಿಯೊಂದು ನೀತಿ ನಿಯಮ ತಿಳಿದಿರಬೇಕು ಮತ್ತು ಪಾಲಿಸಬೇಕು ಗೊತ್ತಿಲ್ಲದೆ ಆದ ಅಪರಾಧಗಳನ್ನು ಕ್ಷಮಿಸುವುದು ನಿಯಮವಲ್ಲ. ಭಾರತೀಯ ಪ್ರಜೆಗಳಿಗಾಗಿ ನಿರ್ಮಿಸಿದ ನ್ಯಾಯಾಂಗ ವ್ಯವಸ್ಥೆ ಕುರಿತು ಪ್ರತಿಯೊಬ್ಬರು ಅರಿತಿರಬೇಕು. ಉದ್ದೇಶವಿಲ್ಲದೆ ತಪ್ಪು ಮಾಡಿದರು ಅದು ತಪ್ಪು ಎಂದು ಅವರು ತಿಳಿಸಿದರು.
ಭಾರತೀಯ ನ್ಯಾಯ ಸಂಹಿತವನ್ನು ವಿವರಿಸಿತ್ತ ಒಂದು ಗುಂಪು ಸೇರಿಕೊಂಡು ಜಾತಿ, ಮಹಿಳೆ ಹಾಗೂ ಮಕ್ಕಳು, ರಾಷ್ಟ್ರದ ಗೌರವ ಹಾಗೂ ಇನ್ನಿತರ ವಿಷಯಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಅದು ಸಂಘಟಿತ ಅಪರಾಧವಾಗುತ್ತದೆ. ಶೋಷಣೆ, ಅತ್ಯಾಚಾರವಾದರೆ ಅದು ಮಹಿಳೆಯರಿಗಷ್ಟೇ ಅನ್ವಯವಾಗುತ್ತಿತ್ತು. ಆದರೆ ಈಗ ಪುರುಷರು, ತೃತೀಯ ಲಿಂಗಿಗಳು ಹಾಗೂ ಎಲ್.ಜಿ.ಬಿ.ಟಿ ಸಮುದಾಯಕ್ಕೂ ಅನ್ವಯಿಸುತ್ತದೆ ಎಂದು ಅವರು ವಿವರಿಸಿದರು.ಹೊಸದಾಗಿ ಶಿಕ್ಷಾರ್ಹ ನಿಯಮಗಳನ್ನು ಸೇರಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಟ್ಟರೆ ಅದಕ್ಕೂ ವಿಶೇಷವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ. 95ನೇ ವಿಧಿಯ ಪ್ರಕಾರ ಮಗುವನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಸಿಕೊಂಡರೆ ಯಾವ ವ್ಯಕ್ತಿ ಬಳಸಿಕೊಂಡಿರುತ್ತಾನೋ ಅವನಿಗೆ ಶಿಕ್ಷೆಯಾಗುತ್ತದೆ. ಭಾರತೀಯ ನ್ಯಾಯ ಸಮಿತಿಯಲ್ಲಿ 358 ವಿಧಿಗಳಿವೆ ಎಂದು ಅವರು ಹೇಳಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 531 ವಿಧಿಗಳಿವೆ. ಇದರಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಿದರೆ ಅದಕ್ಕೆ ವಿಶೇಷ ತಜ್ಞರಿಂದ ಅಪರಾಧಿಯ ವರದಿಯನ್ನು ಕೊಡಬೇಕಾಗುತ್ತದೆ. ಈ ಸಂಹಿತೆಯ ಪ್ರಕಾರ ಎಲ್ಲಾ ನ್ಯಾಯಾಲಯದಲ್ಲಿ ಒಂದೇ ರೀತಿಯ ನಿಯಮ ಪಾಲಿಸಲಾಗುತ್ತದೆ. ಇದರಲ್ಲಿ 398ನೇ ವಿಧಿಯು ಸಾಕ್ಷಿ ಹೇಳುವವರನ್ನು ರಕ್ಷಿಸಲಾಗುತ್ತದೆ ಎಂದರು.ಭಾರತೀಯ ಸಾಕ್ಷ ಅಧಿನಿಯಮದಲ್ಲಿ 170 ವಿಧಿಗಳಿವೆ. 57ನೇ ವಿಧಿಯು ವಿದ್ಯುನ್ಮಾನ ಸಾಕ್ಷಿಗಳನ್ನು ಪ್ರಾಥಮಿಕವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ. 35 ರಿಂದ 39ನೇ ವಿಧಿಯ ಪ್ರಕಾರ ಈ ನಿಯಮಕ್ಕೆ ವಿಶೇಷ ತಜ್ಞರ ತಂಡವನ್ನು ನೇಮಕ ಮಾಡಿಕೊಳ್ಳಬೇಕು. ಭಾರತೀಯ ದಂಡ ಸಮಿತಿಯಲ್ಲಿ ಅಳವಡಿಸಲಾರದ ಕೆಲವು ನೀತಿ ನಿಯಮವನ್ನು ಈ ಮೂರು ಸಂಹಿತೆಯಲ್ಲಿ ಸೇರಿಸಲಾಗಿದೆ ಎಂದರು.
ನಂತರ ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕಾದರೆ ಬರೆಯುವುದನ್ನು ಕಲಿಯಬೇಕು. ಮನಸ್ಥಿತಿಯನ್ನು ಸುಧಾರಿಸಲು ವ್ಯಾಯಾಮ ಮಾಡಬೇಕು. ಉತ್ತಮ ಆಲೋಚನೆಗಾಗಿ ಧ್ಯಾನ ಮಾಡಬೇಕು. ಪ್ರಪಂಚವನ್ನು ತಿಳಿಯಲು ಓದಬೇಕು ಎಂದು ಕೆಲವು ಉತ್ತಮ ಜೀವನ ಶೈಲಿಗೆ ಮಾರ್ಗದರ್ಶನ ಮಾಡಿದರು.ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ, ಪ್ರೊ.ಎನ್. ಮಮತಾ, ಪ್ರೊ.ಸಿ.ಕೆ. ಪುಟ್ಟಸ್ವಾಮಿ, ಅತಿಥಿ ಉಪನ್ಯಾಸಕರು ಸಂಶೋಧನಾ ವಿದ್ಯಾರ್ಥಿಗಳು ಮೊದಲಾದವರು ಇದ್ದರು.